ಸಿದ್ದಾಪುರ, ಏ. 23: ಡಾ.ಬಿ.ಆರ್ ಅಂಬೆಡ್ಕರ್ ಯುವಕ ಸಂಘದ ಅಂಬೇಡ್ಕರ್ ಜಯಂತಿ ಅಂಗವಾಗಿ ಅಮ್ಮತ್ತಿಯಲ್ಲಿ ನಡೆದ ರಾಜ್ಯ ಮಟ್ಟದ ಮುಕ್ತ ಕಾಲ್ಚೆಂಡು ಪಂದ್ಯಾಟದಲ್ಲಿ ಅಮ್ಮತ್ತಿಯ ಮಿಲನ್ ಬಾಯ್ಸ್ ಪ್ರಥಮ ಹಾಗೂ ದ್ವಿತೀಯ ಬಹುಮಾನ ಡೈಲಿ ಹೋಮ್ ನೀಡ್ಸ್ ಅಮ್ಮತ್ತಿ ಪಡೆದುಕೊಂಡಿತು.
ಅಮ್ಮತ್ತಿಯ ಸರಕಾರಿ ಪ್ರೌಢಶಾಲಾ ಮೈದಾನದಲ್ಲಿ 3 ದಿನಗಳ ಕಾಲ ನಡೆದ ಪಂದ್ಯಾವಳಿಯಲ್ಲಿ ಹೋಮ್ ನೀಡ್ಸ್ ತಂಡವನ್ನು ಮಣಿಸಿ ಅಮ್ಮತ್ತಿಯ ಮಿಲನ್ ಬಾಯ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು.
ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಶಾಸಕ ಕೆ.ಜಿ ಬೋಪಯ್ಯ, ಜಿಲ್ಲೆಯಲ್ಲಿ ಈಗ ಕ್ರೀಡಾ ಹಬ್ಬ ನಡೆಯುತ್ತಿದ್ದು, ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಹೆಸರಿನಲ್ಲಿ ಕ್ರೀಡಾಕೂಟ ಹಮ್ಮಿಕೊಂಡಿರುವದು ಪ್ರಶಂಸನೀಯ ಎಂದರು. ಜಿ.ಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ವಿಜು ಸುಬ್ರಮಣಿ ಮಾತನಾಡಿ, ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯವಾಗಿದ್ದು, ಕ್ರೀಡೆಯಿಂದ ಮಾನಸಿಕ ನೆಮ್ಮದಿ ಸಿಗಲಿದೆ. ಮುಂದಿನ ವರ್ಷದ ಕ್ರೀಡಾಕೂಟಕ್ಕೆ ಸಹಕಾರ ನೀಡುವದಾಗಿ ಭರವಸೆ ನೀಡಿದರು. ಈ ಸಂದರ್ಭ ಹೆಚ್.ಎಸ್ ವೆಂಕಟೇಶ್, ಸಾಬು, ಮುಕ್ಕಾಟಿರ ಸಂತೋಷ್, ಕೆ.ಎಂ ಹಂಸ ಅವರನ್ನು ಸನ್ಮಾನಿಸಿ ಗೌರವಿಸ ಲಾಯಿತ್ತು.
ಈ ಸಂದರ್ಭ ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ, ಮಾಚಿಮಂಡ ಸುವಿನ್ ಗಣಪತಿ, ಬಿ.ಎಸ್ ಚಂದ್ರು, ಹೆಚ್.ಕೆ ಶ್ರೀನಿವಾಸ್, ಹೆಚ್.ಕೆ ಸಿಂಗ್ರಯ್ಯ, ಹೆಚ್.ಬಿ ಗೋವಿಂದ, ರವಿ ಕಾಳಯ್ಯ, ಹೆಚ್.ಎ ಜಗದೀಶ್ ಸೇರಿದಂತೆ ಇನ್ನಿತರರು ಇದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಗೌರವಾಧ್ಯಕ್ಷ ಹೆಚ್.ಎನ್ ಅರುಣ್ ವಹಿಸಿದ್ದರು. ಕಾರ್ಯಕ್ರಮ ವನ್ನು ಸಂಘದ ಅಧ್ಯಕ್ಷ ಹೆಚ್.ಎ ಅಭಿಜಿತ್ ಸ್ವಾಗತಿಸಿ, ಲತೀಫ್ ನಿರೂಪಿಸಿದರು. -ವಾಸು