ವೀರಾಜಪೇಟೆ, ಏ.24: ವೀರಾಜಪೇಟೆ ಪಟ್ಟಣ ಪಂಚಾಯಿತಿ ಪ್ರಭಾರ ಅಧ್ಯಕ್ಷರಾಗಿ ಉಪಾಧ್ಯಕ್ಷೆ ತಸ್ನಿಂ ಅಕ್ತರ್ ಇಂದು ಅಧಿಕಾರ ವಹಿಸಿಕೊಂಡಿದ್ದಾರೆ. ಈ ಹಿಂದೆ ಅಧ್ಯಕ್ಷರಾಗಿದ್ದ ಕೂತಂಡ ಸಚಿನ್ ಕುಟ್ಟಯ್ಯ ಅವರು ತಾ. 21 ರಂದು ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಅದು ಅಂಗೀಕಾರವಾದ ನಂತರ ಉಪಾಧ್ಯಕ್ಷರನ್ನು ಪ್ರಬಾರ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು.

ಗೊಂದಲ: ಪ್ರಬಾರ ಅಧ್ಯಕ್ಷರನ್ನು ಆಯ್ಕೆ ಮಾಡುವದರಲ್ಲಿ ಕೆಲವು ಬಿಜೆಪಿ ಸದಸ್ಯರು ಅಪಸ್ವರ ಎತ್ತಿದರು. ತಹಶಿಲ್ದಾರ್ ಮೂಲಕವೇ ಅಧ್ಯಕ್ಷರ ನೇಮಕ ಆಗಬೇಕು ಎಂದು ಅವರೊಳಗೆ ಗೊಂದಲ ಪ್ರಾರಂಭವಾಗಿ ಸದಸ್ಯರಲ್ಲದವರು ಮದ್ಯ ಪ್ರವೇಶಿಸಿದಾಗ ಮುಖ್ಯಾಧಿಕಾರಿಗಳು ಪೌರಸಭೆಗಳ ಅಧಿಸೂಚನೆ ಪ್ರಕಾರ ಅಧ್ಯಕ್ಷರು ರಾಜಿನಾಮೆ ನೀಡದ ಮೇಲೆ ಉಪಾಧ್ಯಕ್ಷರು ಪ್ರಬಾರ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುವದರಲ್ಲಿ ಅಭ್ಯಂತರವಿಲ್ಲ ಎಂದು ಹೇಳಿದ ಮೇಲೆ ಗೊಂದಲಕ್ಕೆ ತೆರೆ ಎಳೆಯಲಾಯಿತು.

ಮಾಹಿತಿ ಇಲ್ಲ: ಪಟ್ಟಣ ಪಂಚಾಯಿತಿಯಲ್ಲಿ ಪ್ರಬಾರ ಅಧ್ಯಕ್ಷರಾಗಿ ಅಧಿಕಾರ ವಹಿಸಿ ಕೊಳ್ಳುತ್ತಿರುವದನ್ನು ಮಾಧ್ಯಮದವರಿಗೆ ಮಾಹಿತಿ ನೀಡಲಿಲ್ಲ. ಪಟ್ಟಣ ಪಂಚಾಯಿತಿಯಲ್ಲಿ ಆಗುವ ಬೆಳವಣಿಗೆಗಳನ್ನು ಸಾರ್ವಜನಿಕರಿಗೆ ಮಾಹಿತಿ ನೀಡಲು ಪತ್ರಕರ್ತರಿಗೆ ಆಹ್ವಾನ ನೀಡದಿರುವದಕ್ಕೆ ಖಂಡಿಸಲಾಗಿದೆ ಎಂದು ನಾಮಕರಣ ಸದಸ್ಯ ಡಿ.ಪಿ ರಾಜೇಶ್ ಮುಖ್ಯಾಧಿಕಾರಿಗಳೊಂದಿಗೆ ದೂರಿದರು.

ಗೈರು: ಪ್ರಬಾರ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಸಂದರ್ಭ 19 ಸದಸ್ಯರಲ್ಲಿ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷೆ ಬಿ.ಡಿ ಸುನೀತಾ, ಹಿರಿಯ ಸದಸ್ಯ ಮೈನುದ್ದಿನ್, ಎಸ್.ಎಚ್, ಮತೀನ್, ಶಂಕರ್, ಸರಿತಾ, ನಾಮಕರಣ ಸದಸ್ಯ ಮಹಮದ್ ರಾಫಿ ಗೈರು ಹಾಜರಾಗಿದ್ದರು.