ವೀರಾಜಪೇಟೆ, ಏ. 24: ಕಳೆದ ಮೂರು ದಿನಗಳಿಂದ ಇಲ್ಲಿನ ಸಂತ ಅನ್ನಮ್ಮ ಪ್ರೌಢ ಶಾಲಾ ಮೈದಾನದಲ್ಲಿ ವೀರಾಜಪೇಟೆ ಸಂತ ಅನ್ನಮ್ಮ ದೇವಾಲಯದ ವತಿಯಿಂದ ಆಯೋಜಿಸಿದ್ದ 6ನೇ ವರ್ಷದ ಜಿಲ್ಲಾ ಮಟ್ಟದ ರೋಮನ್ ಕ್ಯಾಥೋಲಿಕ್ ಟೆನ್ನೀಸ್ ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ಸಂತ ಅನ್ನಮ್ಮ “ಎ” ತಂಡ ಜಯ ಸಾಧಿಸಿ ಟ್ರೋಫಿ ಹಾಗೂ ರೂ. 25 ಸಾವಿರ ನಗದು ಬಹುಮಾನ ಪಡೆಯಿತು.
ಕ್ರಿಕೆಟ್ ಪಂದ್ಯಾಟದಲ್ಲಿ ಕೊಡಗಿನಾದ್ಯಂತ ಒಟ್ಟು 28 ತಂಡಗಳು ಭಾಗವಹಿಸಿದ್ದು, ನಿನ್ನೆ ದಿನ ಸಂಜೆ ಅಂತಿಮ ಪಂದ್ಯಾಟ ನಡೆದು ಸಂತ ಅನ್ನಮ್ಮ “ಎ” ತಂಡ ಒಂದು ವಿಕೆಟ್ ನಷ್ಟಕ್ಕೆ 75ರನ್ನು ಗಳಿಸಿ ಜಯ ಸಾಧಿಸಿದರೆ, ಕೆದಮುಳ್ಳೂರು ತಂಡ 6 ವಿಕೆಟ್ ನಷ್ಟಕ್ಕೆ 72 ರನ್ನು ಗಳಿಸಿ ಸೋಲನ್ನು ಕಂಡಿತು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಕ್ರೀಡೆಗಳ ತವರು ಕೊಡಗಿನಲ್ಲಿ ವಿವಿಧ ಸಮುದಾಯಗಳಿಂದ ಆಯೋಜಿಸುತ್ತಿರುವ ಕ್ರೀಡಾ ಉತ್ಸವದಿಂದ ಸಮುದಾಯದ ನಡುವೆ ಸಾಮರಸ್ಯ ಪ್ರೀತಿ ವಿಶ್ವಾಸದ ಬದುಕು ಮುಂದುವರೆಯಲಿದೆ. ಉತ್ತಮ ಸಮಾಜದ ನಿರ್ಮಾಣ ಸಾಧ್ಯವಾಗಲಿದೆ ಎಂದರು.
ಸಂತ ಅನ್ನಮ್ಮ ದೇವಾಲಯದ ಧರ್ಮಗುರು ಮದುಲೈಮುತ್ತು ಮಾತನಾಡಿ ಗ್ರಾಮೀಣ ಮಟ್ಟದಲ್ಲಿರುವ ಪ್ರತಿಭೆಗಳನ್ನು ಗುರುತಿಸಲು ಇಂತಹ ಪಂದ್ಯಾಟ ಸಹಕಾರಿಯಾಗಲಿದೆ. ಏಕತೆಯನ್ನು ಸಾಧಿಸುವ ಮಾಧ್ಯಮವಾಗಿದ್ದು ಪರಸ್ಪರ ಪ್ರೀತಿ ಸಾಮರಸ್ಯದ ಬದುಕಿಗೂ ಕಾರಣವಾಗಲಿದೆ ಎಂದು ಹೇಳಿದರು.
ಸಭೆಯನ್ನುದ್ದೇಶಿಸಿ ಮೈಸೂರು ಧರ್ಮ ಪ್ರಾಂತ್ಯದ ಧರ್ಮಗುರು ರಾಯಪ್ಪ, ಕ್ಯಾಥೋಲಿಕ್ ಜಿಲ್ಲಾ ಸಂಘದ ಅಧ್ಯಕ್ಷ ಜಯರಾಜ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ಸಚಿನ್ ಕುಟ್ಟಯ್ಯ ಮಾತನಾಡಿದರು.
ವೇದಿಕೆಯಲ್ಲಿ ಸಂತ ಅನ್ನಮ್ಮ ದೇವಾಲಯ ಸಮಿತಿಯ ಚೋಪಿ ಜೋಸೆಫ್, ಕೆದಮುಳ್ಳೂರು ಚರ್ಚ್‍ನ ಫ್ರಾನ್ಸೀಸ್ ಕ್ಷೇವಿಯರ್, ಸಹಾಯಕ ಧರ್ಮಗುರು ಬಾಲರಾಜ್, ಸಿದ್ದಾಪುರ ಚರ್ಚ್‍ನ ಜಾನಾಸ್ ಸೇರಿದಂತೆ ಜಿಲ್ಲೆಯ ವಿವಿಧ ಚರ್ಚ್‍ಗಳ ಧರ್ಮಗುರುಗಳು ಉಪಸ್ಥಿತರಿದ್ದರು.
ವಿಜೇತ ತಂಡ ಹಾಗೂ ರನ್ನರ್ಸ್ ತಂಡಗಳಿಗೆ ಅತಿಥಿಗಳು ಬಹುಮಾನಗಳನ್ನು ವಿತರಿಸಿದರು. ರನ್ನರ್ಸ್ ತಂಡ ಟ್ರೋಫಿ ಹಾಗೂ ರೂ 15000 ನಗದು ಪಡೆದುಕೊಂಡಿತು.
ಸಂತ ಅನ್ನಮ್ಮ ದೇವಾಲಯ ಸಮಿತಿಯ ಜೋಕಿಂ ರಾಡ್ರಿಗಸ್, ಮರ್ವೀನ್ ಲೋಬೋ, ಮಾರ್ಟಿನ್ ಬರ್ನಾಡ್, ಜೀವನ್ ಲೋಬೋ, ಜೀವನ್ ಬರ್ನಾಡ್ ಹಾಗೂ ರೋಮನ್ ಕ್ಯಾಥೋಲಿಕ್ ಸಂಘಟನೆಯ ಪದಾಧಿಕಾರಿಗಳು, ಸಮುದಾಯದ ಬಾಂಧವರು ಹಾಜರಿದ್ದರು.
ಸಹಾಯಕ ಧರ್ಮ ಗುರು ಟೆನ್ನಿ ಕುರಿಯನ್ ಸ್ವಾಗತಿಸಿದರು. ಚಾಲ್ರ್ಸ್ ಡಿಸೋಜ ನಿರೂಪಿಸಿದರು. ಧರ್ಮಗುರು ಬಾಲರಾಜ್ ವಂದಿಸಿದರು.