ಮಡಿಕೇರಿ, ಏ.24 : ಶಾಂತಿ, ಸಹಬಾಳ್ವೆ, ಸೌಹಾರ್ದತೆಯ ಮೂಲಕ ದೇಶವನ್ನು ಕಟ್ಟಿ ಬೆಳೆಸಲು ಎಲ್ಲರೂ ಒಗ್ಗಟ್ಟನ್ನು ಪ್ರದರ್ಶಿಸಬೇಕೆಂದು ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಕರೆ ನೀಡಿದ್ದಾರೆ.

ಮೇಕೇರಿಯ ಹಝ್ರತ್ ಸಯ್ಯದ್ ಸುಲ್ತಾನ್ ಆಲಿಷಾ ಮದನಿ ದರ್ಗಾ ಷರೀಫ್‍ನ ಮಖಾಂ ಉರೂಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರು, ಜಾತಿಯ ಬಗ್ಗೆ ಅಭಿಮಾನವಿರಬೇಕೆ ಹೊರತು ದುರಭಿಮಾನವಿರಬಾರದೆಂದರು. ಈ ದೇಶದಲ್ಲಿ ಜಾತ್ಯತೀತ ಎನ್ನುವದು ಕೇವಲ ಬಾಯಿ ಮಾತಿಗಷ್ಟೇ ಸೀಮಿತವಾಗಿದ್ದು, ಪ್ರತಿಯೊಬ್ಬರೂ ಒಂದಲ್ಲ ಒಂದು ಜಾತಿಯಲ್ಲಿ ಜನಿಸಲೇಬೇಕಾದ ಅನಿವಾರ್ಯತೆ ಇದೆ. ವಿವಿಧತೆಯಲ್ಲಿ ಏಕತೆ ಪ್ರದರ್ಶಿಸುವ ದೇಶ ಭಾರತವಾಗಿದ್ದು, ಈ ದೇಶಕ್ಕೆ ಪ್ರಸ್ತುತ ಶಾಂತಿ, ಸಹಬಾಳ್ವೆಯ ಅಗತ್ಯವಿದೆ ಎಂದು ಹೇಳಿದರು.

ಉರೂಸ್, ಹಬ್ಬ, ಆಚರಣೆಗಳು ಅರ್ಥಪೂರ್ಣವಾಗಬೇಕಾದರೆ ಎಲ್ಲರೂ ಒಗ್ಗಟ್ಟಾಗಿ ಬದುಕುವದನ್ನು ಕಲಿಯಬೇಕು. ಯಾವದೇ ಜಾತಿಯಲ್ಲಿ ಹುಟ್ಟಿದರೂ ಅದು ತಪ್ಪಲ್ಲ, ಆದರೆ ಜಾತಿಯೊಂದಿಗೆ ಏಕತೆಯನ್ನು ಕಾಪಾಡಿಕೊಳ್ಳುವದು ಮುಖ್ಯವೆಂದರು. ಆಚರಣೆಗಳು ಸಮಾಜಕ್ಕೆ ಮಾದರಿಯಾಗಿರಬೇಕು, ಜಾತಿಯ ಹೆಸರಿನಲ್ಲಿ ಯಾವದೇ ಪ್ರತಿಭೆಗಳನ್ನು ಗುರುತಿಸುವಂತಾಗಬಾರದೆಂದು ಕೆ.ಜಿ.ಬೋಪಯ್ಯ ಸಲಹೆ ನೀಡಿದರು.

ಎಲ್ಲರನ್ನೂ ಒಗ್ಗೂಡಿಸಿ ಉರೂಸ್ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಮೇಕೇರಿ ದರ್ಗಾ ಷರೀಫ್ ಇತರರಿಗೆ ಮಾದರಿಯಾಗಿದ್ದು, ಇದು ಕೇವಲ ಮೇಕೇರಿ ಅಥವಾ ಕೊಡಗು ಜಿಲ್ಲೆಗೆ ಸೀಮಿತವಾಗದೆ ಇಡೀ ದೇಶದಲ್ಲಿ ಏಕತೆ ಮೂಡಬೇಕು. ಆ ಮೂಲಕ ದೇಶ ಬಲಿಷ್ಠವಾಗಬೇಕೆಂದು ಅವರು ಕರೆ ನೀಡಿದರು. ಮಸೀದಿಯ ಅಧ್ಯಕ್ಷ ಎಂ.ಜಿ.ಮುನಾವರ್ ಮಾತನಾಡಿ ಶಾಂತಿ, ಸೌಹಾರ್ದತೆಯ ಜೀವನಕ್ಕೆ ಪ್ರತಿಯೊಬ್ಬರು ಒತ್ತು ನೀಡಬೇಕೆಂದರು. ಹಿರಿಯರಾದ ಕೆ.ಕೆ.ಪೂರ್ಣಯ್ಯ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿ.ಪಿ.¸ Àುರೇಶ್, ವಕ್ಫ್ ಮಂಡಳಿ ಅಧ್ಯಕ್ಷ ಅಬ್ದುಲ್ ರೆಹಮಾನ್, ತಾ.ಪಂ. ಸದಸ್ಯೆ ಕುಮುದಾ ರಶ್ಮಿ, ಮೇಕೇರಿ ಗ್ರಾ.ಪಂ ಉಪಾಧ್ಯಕ್ಷ ಭೀಮಯ್ಯ, ಸದಸ್ಯರುಗಳಾದ ಪ್ರಕಾಶ್, ನಾಚಪ್ಪ, ಉರೂಸ್ ಸಮಿತಿಯ ಕಾರ್ಯದರ್ಶಿ ಅಮೀರ್, ಪ್ರಮುಖ ಎಂ.ಎ.ಹನೀಫ್ ಮತ್ತಿತರರು ಉಪಸ್ಥಿತರಿದ್ದರು.