ಮಡಿಕೇರಿ, ಏ. 23: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮತ್ತು ಶ್ರೀ ಮಹಾಲಿಂಗೇಶ್ವರ ವಿದ್ಯಾಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಪತ್ರಿಕಾ ಭವನದದ ಬಳಿ ಆರಂಭಿಸ ಲಾಗಿರುವ ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಆರ್. ಸೀತಾರಾಂ ಅವರು ಉದ್ಘಾಟಿಸಿ ಮಾತನಾಡಿ ಹಿರಿಯ ನಾಗರಿಕರ ಅನುಕೂಲಕ್ಕಾಗಿ ಹಿರಿಯ ನಾಗರಿಕರ ಹಗಲು ಯೋಗ ಕ್ಷೇಮ ಕೇಂದ್ರ ಆರಂಭಿಸಲಾಗಿದೆ ಎಂದರು.
ಯೋಗ ಕ್ಷೇಮ ಕೇಂದ್ರದಲ್ಲಿ ಜಿಲ್ಲೆಯ ಹಿರಿಯ ನಾಗರಿಕರಿಗೆ ಉಚಿತ ಊಟ, ಮನರಂಜನೆ, ವೈದ್ಯಕೀಯ ಸೌಲಭ್ಯ, ಆಪ್ತ ಸಮಾಲೋಚನಾ ಸೇವೆಗಳು, ನುರಿತ ತಜ್ಞರಿಂದ ಹಗಲು ಯೋಗ ಕ್ಷೇಮವನ್ನು ಪಡೆಯಬಹುದಾಗಿದೆ ಎಂದು ಮಾಹಿತಿ ನೀಡಿದರು.
ಮನರಂಜನೆಗಾಗಿ ಟಿ.ವಿ, ದಿನ ಪತ್ರಿಕೆ, ರೇಡಿಯೊ, ಕೇರಂ ಹಾಗೂ ಆಟಿಕೆ ಸಾಮಗ್ರಿ ಇರುತ್ತವೆ. ಆಪ್ತ ಸಮಾಲೋಚಕರು, ದಾದಿಯರು, ಅರೆಕಾಲಿಕ ವೈದ್ಯರು ಇದ್ದು, ಹಿರಿಯ ನಾಗರಿಕರ ಯೋಗ ಕ್ಷೇಮ ನೋಡಿಕೊಳ್ಳಲಿದ್ದಾರೆ ಎಂದು ಹಿರಿಯ ನಾಗರಿಕ ಕಲ್ಯಾಣ ಇಲಾಖೆಯ ಜಗದೀಶ್ ತಿಳಿಸಿದ್ದಾರೆ.
ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಜಿ.ಟಿ. ರಾಘವೇಂದ್ರ, ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ, ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್, ಶ್ರೀ ಮಹಾಲಿಂಗೇಶ್ವರ ವಿದ್ಯಾಸಂಸ್ಥೆಯ ಕಾರ್ಯದರ್ಶಿ ನಿರಂಜನ್, ಸುಷ್ಮ ನಿರಂಜನ್ ಇತರರು ಇದ್ದರು.