ಗೋಣಿಕೊಪ್ಪಲು, ಏ. 24: ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು ಭಾರತದಲ್ಲಿ ಹುಲಿಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಹುಲಿ ಸಂರಕ್ಷಿತ ಅರಣ್ಯ ವ್ಯಾಪ್ತಿಯಲ್ಲಿರುವ ವೀರಾಜಪೇಟೆ ತಾಲೂಕಿನ ಗಿರಿಜನರನ್ನು ಎತ್ತಂಗಡಿ ಮಾಡುವ ಹುನ್ನಾರ ನಡೆದಿದೆ ಎಂದು ಆರೋಪಿಸಿ ಅದಿವಾಸಿಗಳು ಬುಡಕಟ್ಟು ಕೃಷಿಕರ ಸಂಘದ ನೇತೃತ್ವದಲ್ಲಿ ತಿತಿಮತಿಯ ಚೇಣಿಹಡ್ಲುವಿನಲ್ಲಿ ಬೃಹತ್ ಸಭೆ ನಡೆಸಿ ಜಿಲ್ಲಾಡಳಿತ ಹಾಗೂ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಬುಡಕಟ್ಟು ಕೃಷಿಕರ ಸಂಘದ ಜಿಲ್ಲಾಧ್ಯಕ್ಷ ಜೆ.ಪಿ ರಾಜು, ಕಾರ್ಯದರ್ಶಿ ಚುಬ್ರು, ಜೆ.ಕೆ ತಿಮ್ಮ ಹಾಗೂ ಇತರ ಪ್ರಮುಖರ ಮುಂದಾಳತ್ವದಲ್ಲಿ ಸಭೆ ಸೇರಿದ ಅದಿವಾಸಿಗಳು ನಿರಂತರವಾಗಿ ಗಿರಿಜನರ ಮೇಲೆ ದೌರ್ಜನ್ಯಗಳು ನಡೆಯುತ್ತಿದೆ. ಈ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸುಮ್ಮನೆ ಕುಳಿತಿದೆ ಎಂದು ಆರೋಪಿಸಿದ ಪ್ರತಿಭಟನಾ ಕಾರರು ಇದೀಗ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು ಅದಿವಾಸಿಗಳ ಹಕ್ಕನ್ನು ಕಸಿದುಕೊಂಡು ಅದಿವಾಸಿ ಗಳನ್ನು ಕಾಡಿನಿಂದ ಸ್ಥಳಾಂತರಿಸುವ ಕೆಲಸ ಮಾಡುತ್ತಿದೆ. ಇನ್ನೂ ಗಿರಿಜನರು ಸುಮ್ಮನೆ ಕುಳಿತಿರಲು ಸಾಧ್ಯವಿಲ್ಲ. 10 ದಿನದೊಳಗೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು ಹೊರಡಿಸಿ ರುವ ಆದೇಶವನ್ನು ಹಿಂಪಡೆಯದಿದ್ದಲ್ಲಿ ವೀರಾಜಪೇಟೆ ತಾಲೂಕಿನ ಗಡಿ ಭಾಗ ಗಳನ್ನು ಬಂದ್ ಮಾಡಿ ನ್ಯಾಯಕ್ಕಾಗಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವದು ಎಂದು ಎಚ್ಚರಿಸಿದ್ದಾರೆ.

ಬುಡಕಟ್ಟು ಕೃಷಿಕರ ಸಂಘದ ಕಾರ್ಯದರ್ಶಿ ಚುಬ್ರು, ಅನಾದಿ ಕಾಲದಿಂದಲೂ ಆದಿವಾಸಿಗಳು ಕಾಡಿನಲ್ಲಿ ಪ್ರಾಣಿಯೊಂದಿಗೆ ಬೆರೆತು ಜೀವನ ಸಾಗಿಸುತ್ತಿದ್ದಾರೆ. ಇತ್ತೀಚೆಗೆ ಪರಿಸರ ವಾದಿಗಳಿಂದ ಅದಿವಾಸಿಗಳ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ನಾವು ಕಾಡನ್ನಾಗಲಿ ಅಥವಾ ಶ್ರೀಮಂತರ ಆಸ್ತಿಯನ್ನಾಗಲಿ ಒತ್ತುವರಿ ಮಾಡಿಕೊಂಡಿಲ್ಲ ಆದರೆ ಹುಲಿ ಸೂಕ್ಷ್ಮ ಪ್ರದೇಶದ ನೆಪದಲ್ಲಿ ಅರಣ್ಯದಲ್ಲಿರುವ ನಮ್ಮನ್ನು ಹೊರದಬ್ಬುವ ಪ್ರಯತ್ನ ಖಂಡನೀಯ ಎಂದ ಅವರು ನಾಗರಹೊಳೆಗೆ ಆಗಮಿಸುವ ದಾರಿಯನ್ನು ತಡೆದು ಪ್ರತಿಭಟಿಸಲಾಗುವದು ಎಂದರು.

ಬುಡಕಟ್ಟು ಕೃಷಿಕರ ಸಂಘದ ಮುಖಂಡ ರಾಯ್ ಡೇವಿಡ್ ಮಾತನಾಡಿ, ಕೇಂದ್ರ ಸರ್ಕಾರದ ಅಂಗ ಸಂಸ್ಥೆಯಾಗಿರುವ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು ಇಂತಹ ಆದೇಶವನ್ನು ಹೊರಡಿಸುವ ಮೂಲಕ ಅದಿವಾಸಿಗಳ ಬದುಕನ್ನು ಕಸಿದುಕೊಂಡಿದೆ ಇನ್ನೂ ಮುಂದೆ ಅದಿವಾಸಿಗಳು ಸರ್ಕಾರದ ವಿರುದ್ಧ ಗಂಭೀರ ಹೋರಾಟವನ್ನು ಮಾಡುವ ಮೂಲಕ ನಮ್ಮ ಹಕ್ಕುಗಳನ್ನು ಪಡೆಯುತ್ತೇವೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಪಿ.ಆರ್ ಪಂಕಜ ಮಾತನಾಡಿ, ಅದಿವಾಸಿಗಳ ಹಕ್ಕುಗಳನ್ನು ಕಸಿದುಕೊಂಡು ಬಡಜನರನ್ನು ಗುಡಿಸಲಿನಲ್ಲಿಯೇ ಜೀವನ ಕಳೆಯುವಂತೆ ಮಾಡುತ್ತಿದ್ದಾರೆ ಈ ಆದೇಶದಿಂದ ನೂರಾರೂ ಕುಟುಂಬ ಗಳು ಬೀದಿಪಾಲಾಗಲಿದ್ದು ಕೂಡಲೇ ಆದೇಶ ಹಿಂಪಡೆಯಬೇಕೆಂದು ಆಗ್ರಹಿಸಿದರು. ಪ್ರತಿಭಟನೆ ಸಂದರ್ಭ ಗ್ರಾ.ಪಂ. ಅಧ್ಯಕ್ಷ ಶಿವಕುಮಾರ್, ಸದಸ್ಯರಾದ ಅನೂಪ್, ಆದಿವಾಸಿ ಮುಖಂಡರುಗಳಾದ ಜೆ.ಕೆ ಸೋಮಯ್ಯ, ಪಿ.ಸಿ ರಾಮು, ಜೆ.ಕೆ ಸೋಮ, ಪಿ.ಎಂ ರಾಜು, ಪಿ.ಸಿ ರಮೇಶ್, ಮಲ್ಲಪ್ಪ, ಶಂಕರ, ಬಿ.ಎಂ ರಾಣಿ, ರಾಮು, ಗಣೇಶ ಇದ್ದರು.