ವೀರಾಜಪೇಟೆ, ಏ. 24: ವೀರಾಜಪೇಟೆಯ ಹಿಂದೂ ಅಗ್ನಿದಳದಿಂದ ಹಿಂದೂ ಬಾಂಧವರಿಗೆ ಸೀಮಿತಗೊಂಡಂತೆ ತಾ. 27 ರಿಂದ 30ರ ವರೆಗೆ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ಸಂಚಾಲಕ ದಿನೇಶ್ ನಾಯರ್ ತಿಳಿಸಿದ್ದಾರೆ.

ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ದಿನೇಶ್ ನಾಯರ್ ಅವರು ಸಂಘಟನೆಯ ದ್ವಿತೀಯ ವರ್ಷದ ವಾರ್ಷಿಕೋತ್ಸವ ಹಾಗೂ ಯುಗಾದಿ ಹಬ್ಬದ ಅಂಗವಾಗಿ ಈ ಪಂದ್ಯಾಟವನ್ನು ಆಯೋಜಿಸಲಾಗಿದೆ. ಕಳೆದ ಒಂದು ವರ್ಷದಿಂದ ನಮ್ಮ ಸಂಘಟನೆ ಹಿಂದೂ ಬಾಂಧವರ ಅನೇಕ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುತ್ತಿದ್ದು ಸಮಾಜ ಸೇವೆಗೂ ಆದ್ಯತೆ ನೀಡುತ್ತಿದೆ. ಗ್ರಾಮೀಣ ಪ್ರದೇಶದಲ್ಲಿಯೂ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವದು ಸಂಘಟನೆಯ ಉದ್ದೇಶ ಎಂದರು.

ಸಂಘಟನೆಯ ಕಾನೂನು ಸಲಹೆಗಾರ ವಕೀಲ ಟಿ.ಪಿ. ಕೃಷ್ಣ ಮಾತನಾಡಿ ತಾ. 27 ರಿಂದ ಇಲ್ಲಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಪಂದ್ಯಾಟ ನಡೆಯಲಿದ್ದು ಅಂತಿಮ ಪಂದ್ಯಾಟದಲ್ಲಿ ಸೆಣಸಾಡುವ ಎರಡು ತಂಡಗಳಿಗೂ ಟ್ರೋಫಿಗಳೊಂದಿಗೆ ವೈಯಕ್ತಿಕ ಬಹುಮಾನ ಹಾಗೂ ನೆನಪಿನ ಕಾಣಿಕೆ ನೀಡÀಲಾಗುವದು. ತಾ. 27 ರಂದು ಬೆಳಿಗ್ಗೆ 10 ಗಂಟೆಗೆ ಬಿಜೆಪಿಯ ಜಿಲ್ಲಾ ಸಮಿತಿ ಉಪಾಧ್ಯಕ್ಷ ರಘು ನಾಣಯ್ಯ ದೀಪ ಬೆಳಗಿಸುವರು. ಪಂದ್ಯಾಟವನ್ನು ಕ್ರಿಕೆಟ್‍ನ ಮಾಜಿ ಆಟಗಾರ ಪಾಲೇಕಂಡ ಮನು ಚಂಗಪ್ಪ ಉದ್ಘಾಟಿಸುವರು. ಸಂಘಟನೆಯ ದಿನೇಶ್ ನಾಯರ್ ಅಧ್ಯಕ್ಷತೆ ವಹಿಸಲಿರುವರು. ಅನೇಕ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿರುವರು ಎಂದು ಹೇಳಿದರು.

ಗೋಷ್ಠಿಯಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಬಿ.ಪಿ. ಸೋಮಣ್ಣ, ಮಣಿ, ರಂಜಿತ್ ಮತ್ತಿತರರು ಉಪಸ್ಥಿತರಿದ್ದರು.