ಸಿದ್ದಾಪುರ, ಏ. 26: ಎಲ್ಲೆಂದರಲ್ಲಿ ಕಸದ ರಾಶಿ ಬಸ್ ನಿಲ್ದಾಣ, ಮುಖ್ಯ ರಸ್ತೆಗಳು, ಸರ್ಕಾರಿ ಶಾಲೆ, ಗ್ರಾ.ಪಂ. ಆವರಣ, ಒಟ್ಟಿನಲ್ಲಿ ಇಡೀ ಸಿದ್ದಾಪುರವೇ ತ್ಯಾಜ್ಯದಿಂದ ತುಂಬಿದ್ದು ಸಂಪೂರ್ಣ ಪಟ್ಟಣವೆ ಗಬ್ಬೆದ್ದು ನಾರುತ್ತಿದೆ. ಇಲ್ಲಿ ಗ್ರಾ.ಪಂ. ಆಡಳಿತ ನಡೆಸುತ್ತಿದೆಯೋ... ಇಲ್ಲವೋ... ಎಂಬ ಪ್ರಶ್ನೆ ಕೂಡ ಸಾರ್ವಜನಿಕರಲ್ಲಿ ಮೂಡುತ್ತಿದೆ.

ಪಟ್ಟಣದಲ್ಲಿ ಕಳೆದ ಕೆಲವು ವಾರಗಳಿಂದ ಕಸ ವಿಲೇವಾರಿಯಾಗದೆ ಅಲ್ಲಲ್ಲಿ ರಾಶಿ ಹಾಕಿರುವದರಿಂದ ತ್ಯಾಜಗಳು ಕೊಳೆತು ದುರ್ವಾಸನೆ ಬೀರುತ್ತಿದೆ. ಕೊಳೆತ ತ್ಯಾಜ್ಯಗಳಿಂದ ಹುಳುಗಳು ಮತ್ತು ನೊಣಗಳು ಉತ್ಪತ್ತಿಯಾಗಿ ಸಾರ್ವಜನಿಕರು ಮೂಗುಮುಚ್ಚಿಕೊಂಡು ನಡೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಸ ವಿಲೇವಾರಿಯಾಗದ ಬಗ್ಗೆ ಅಧ್ಯಕ್ಷರ ಬಳಿ ಕೇಳಿದರೆ ಜಾಗವಿಲ್ಲ ನೀವೇನಾದರು ಜಾಗ ತೋರಿಸಿ ಅಲ್ಲಿ ವಿಲೇವಾರಿ ಮಾಡುತ್ತೇನೆ ಎಂಬ ಉತ್ತರ ನೀಡುತ್ತಿದ್ದಾರೆ. ಅಲ್ಲದೆ ಆಡಳಿತ ಮಂಡಳಿಯು ಸಹ ಇದಾವದನ್ನು ಲೆಕ್ಕಿಸದೆ ಹರಾಜು ಲೈಸೆನ್ಸ್ ಎಂದು ಸಭೆಗಳನ್ನು ನಡೆಸುತ್ತಾ ಕಾಲಕಳೆಯುತ್ತಿದ್ದಾರೆ. ಸಂಘ-ಸಂಸ್ಥೆಗಳ ಸಭೆಗಳಲ್ಲಿ ಭಾಗವಹಿಸಿ ಭಾಷಣ ಬಿಗಿಯುವÀ ಅಧ್ಯಕ್ಷರು ಎಲ್ಲಾ ಸಂಘ-ಸಂಸ್ಥೆಗಳಿಗೆ ಸ್ವಂತ ಕಟ್ಟಡ ಕಟ್ಟಲು ಗ್ರಾ.ಪಂ.ಯಿಂದ ಜಾಗ ನೀಡುವ ಭರವಸೆಗಳನ್ನು ನೀಡುತ್ತಿದ್ದು, ಸ್ವತಃ ಗ್ರಾ.ಪಂ.ಗೆ ಕಸ ವಿಲೇವಾರಿಗೆ ಜಾಗವಿಲ್ಲದಿರುವದು ವಿಪರ್ಯಾಸವೆ ಸರಿ. ಗ್ರಾ.ಪಂ. ಸಮಾನ್ಯ ಸಭೆಗಳಲ್ಲಿ ಕಸ ವಿಲೇವಾರಿ ಸಮಸ್ಯೆಯ ಬಗ್ಗೆ ಕೆಲ ಸದಸ್ಯರು ದನಿ ಎತ್ತಿದರೆ, ತನಗೆ ಇಷ್ಟೇ ಕೆಲಸ ಮಾಡಲು ಸಾಧ್ಯ ಎಂದು ಅಧ್ಯಕ್ಷರು ಉತ್ತರ ನೀಡುತ್ತಿದ್ದಾರೆ ಎಂದು ಕೆಲ ಗ್ರಾ.ಪಂ. ಸದಸ್ಯರು ದೂರಿದ್ದಾರೆ.

ಒಂದೆಡೆ ಕಸದ ವಿಲೇವಾರಿ ಆಗದೆ ರಸ್ತೆಗಳಲ್ಲಿ ಕಸದ ತ್ಯಾಜ್ಯ ಕೊಳೆಯುತ್ತಿದ್ದರೂ, ಗ್ರಾ.ಪಂ. ಸಾಮಾನ್ಯ ಸಭೆಗಳ ಜಮೆ ಖರ್ಚಿನಲ್ಲಿ ಕಸ ವಿಲೇವಾರಿಗೆ ಎಂದು ಸಾವಿರಾರು ರೂಪಾಯಿ ಬಿಲ್ ಪಾವತಿ ಮಾಡಲಾಗುತ್ತಿದೆ ಎಂದು ಮಾಹಿತಿ ಲಭ್ಯವಾಗಿದೆ. ಕಾವೇರಿ ನದಿಯ ಸಮೀಪದಲ್ಲೇ ಇತ್ತೀಚೆಗೆ ಹೊಂಡ ತೋಡಲಾಗಿದ್ದು, ಗ್ರಾಮಸ್ಥರ ಒತ್ತಾಯದ ಮೇರೆಗೆ ಗುಂಡಿಯನ್ನು ಮುಚ್ಚಲಾಗಿತ್ತು. ಮಾತ್ರವಲ್ಲದೇ ಕಾವೇರಿ ನದಿ ಸೇರಿದಂತೆ ವಿವಿಧೆಡೆಗಳಲ್ಲಿ ಅವೈಜ್ಞಾನಿಕವಾಗಿ ಹೊಂಡ ತೋಡಲಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.ಗ್ರಾ.ಪಂ ಅಧ್ಯಕ್ಷರು ಕಸದ ವಿಲೇವಾರಿಗೆ ಸೂಕ್ತ ಜಾಗವನ್ನು ಹುಡುಕುವ ಇಚ್ಛಾಶಕ್ತಿ ಇಲ್ಲವಾಗಿದ್ದು, ಗ್ರಾಮಸ್ಥರ ಕಣ್ಣಿಗೆ ಮಣ್ಣೆರೆಚಲು ಸಿದ್ದಾಪುರ ಬಂದ್ ಮಾಡುವ ನಾಟಕವಾಡಿದಲ್ಲದೆ ರಾಜೀನಾಮೆ ನೀಡುವ ನಾಟಕವಾಡಿರುವದಾಗಿ ಸಿದ್ದಾಪುರದ ಸಿ.ಪಿ.ಐ.ಎಂ. ಪಕ್ಷ ಆರೋಪಿಸಿದೆ.

ವಾಸನೆಯ ಸ್ವಾಗತ

ಜಿಲ್ಲೆಯ ದೊಡ್ಡ ಪಟ್ಟಣಗಳಲ್ಲಿ ಒಂದಾದ ಸಿದ್ದಾಪುರಕ್ಕೆ ವಿವಿಧೆಡೆಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಇದೀಗ ವಿದ್ಯಾರ್ಥಿಗಳಿಗೆ ರಜಾ ದಿನವಾಗಿದ್ದು, ಸಿದ್ದಾಪುರದ ಪ್ರತಿಷ್ಠಿತ ರೆಸಾರ್ಟ್ ಸೇರಿದಂತೆ ವಿವಿಧೆಡೆಗಳಿಗೆ ಪ್ರವಾಸಿಗರ ದಂಡು ಆಗಮಿಸುತ್ತಿದೆ. ಜಿಲ್ಲೆಯ ಪ್ರಮುಖ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಸಿದ್ದಾಪುರ ಪಟ್ಟಣಕ್ಕೆ ಬರುವ ಪ್ರವಾಸಿಗರಿಗೆ ಕಸದ ತ್ಯಾಜ್ಯಗಳ ದುರ್ನಾತ ಸ್ವಾಗತ ಕೋರುತ್ತಿದೆ. ಕಾವೇರಿ ನದಿಯ ಸೇತುವೆ ಸೇರಿದಂತೆ ಪಟ್ಟಣದೆಲ್ಲೆಡೆ ದುರ್ನಾತ ಬೀರುತ್ತಿದೆ. - ವಾಸು ಆಚಾರ್ಯ