ಪೊನ್ನಂಪೇಟೆ, ಏ. 25: 19 ಮತ್ತು 20ನೇ ಶತಮಾನದಲ್ಲಿ ದೇಶಸೇವೆಗೈದ ಕೊಡಗಿನ ಸಮಸ್ತ ಯೋಧರ ಅಪ್ರತಿಮ ತ್ಯಾಗದ ಸ್ಮರಣಾರ್ಥ ಕಾವೇರಿ ಜನ್ಮಭೂಮಿ ಟ್ರಸ್ಟ್ ವತಿಯಿಂದ ಕಳೆದ ವರ್ಷ ಚೇರಂಗಾಲದಲ್ಲಿ ಸ್ಥಾಪಿಸಲಾಗಿರುವ ಯುದ್ಧ ಸ್ಮಾರಕ ‘ಅಮರ್‍ಜವಾನ್’ ಯೋಜನೆ ಇದೀಗ ಪೂರ್ಣಗೊಂಡಿದೆ.ಭಾಗಮಂಡಲ ಸಮೀಪದ ಕುಗ್ರಾಮವಾಗಿರುವ ಚೇರಂಗಾಲದ ತಳಾರಬಾಣೆಯಲ್ಲಿ ಸಿದ್ಧಗೊಂಡಿರುವ ಪರಿಪೂರ್ಣವಾದ ಯುದ್ಧ ಸ್ಮಾರಕದ ಅಂತಿಮ ಸ್ಪರ್ಶದ ಕಾರ್ಯವು ಮುಕ್ತಾಯಗೊಂಡು ಲೋಕಾರ್ಪಣೆಗೆ ತಯಾರಾಗಿದೆ.

ಜಿಲ್ಲೆಯಲ್ಲೇ ಪ್ರಥಮ ಎಂಬಂತೆ ಕಾರ್ಯನಿರತ ಯೋಧನ ಪ್ರತಿಮೆಯನ್ನು ಸ್ಮಾರಕ ಮೇಲ್ಭಾಗದಲ್ಲಿ ಅಳವಡಿಸಿದ್ದು, ಇದರಿಂದಾಗಿ ಯುದ್ದ ಸ್ಮಾರಕದ ಗೌರವ, ಪ್ರತಿಷ್ಠೆ ಮತ್ತು ವರ್ಚಸ್ಸು ಹೆಚ್ಚಾದಂತಾಗಿದೆ. ಸ್ಮಾರಕದ ಸಮೀಪದಲ್ಲೆ ರಾಷ್ಟ್ರ ಲಾಂಛನವಾದ ಆಶೋಕ ಸ್ತಂಭವನ್ನು ಆಕರ್ಷಕವಾಗಿ ಅಳವಡಿಸಲಾಗಿದ್ದು, ಇದು ಸ್ಮಾರಕದ ಹಿರಿಮೆಯನ್ನು ಮತ್ತಷ್ಟು ಹಿಗ್ಗಿಸಿದೆ.

ಕಾವೇರಿ ಜನ್ಮಭೂಮಿ ಟ್ರಸ್ಟ್‍ನ ಕನಸಿನ ಯೋಜನೆಯಾಗಿದ್ದ ಯುದ್ಧ ಸ್ಮಾರಕವನ್ನು ಕಳೆದ 2 ವರ್ಷಗಳ ಹಿಂದೆ ಆರಂಭಿಸಲಾಗಿತ್ತು. ಚೇರಂಗಾಲದ ತಳಾರಬಾಣೆ ಎಂಬ ವಿಶಾಲವಾದ ಮೈದಾನದ ಮೇಲ್ಭಾಗದಲ್ಲಿ ಸ್ಥಾಪಿಸಲಾಗಿದ್ದ 19 ಮತ್ತು 20ನೇ ಶತಮಾನದ ಇಂಡಿಯನ್ ಟೆರಿಟೋರಿಯಲ್ ಪೋರ್ಸ್, 14ನೇ ಕೂರ್ಗ್ ಬೆಟಾಲಿಯನ್, ಬ್ರಿಟೀಷ್ ಇಂಡಿಯನ್ ಆರ್ಮಿ, ರಾಯಲ್ ಇಂಡಿಯನ್ ಏರ್‍ಫೋರ್ಸ್, ರಾಯಲ್ ಇಂಡಿಯನ್ ನೇವಿ, ಇಂಡಿಯನ್ ಆರ್ಮಿ, ನೇವಿ, ಏರ್‍ಫೋರ್ಸ್, ಗಡಿಭದ್ರತಾಪಡೆ (ಬಿ.ಎಸ್.ಎಫ್), ಅರೆಸೇನಾಪಡೆ ಮತ್ತು ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಹುತಾತ್ಮರಾದ ಮತ್ತು ನಿವೃತ್ತರಾದ ಯೋಧರ ತ್ಯಾಗ, ಬಲಿದಾನ ಮತ್ತು ಧೈರ್ಯದ ಪ್ರತೀಕವಾಗಿ ಸ್ಮರಣಾರ್ಥ ಸ್ಥಾಪಿಸಲಾದ ಮೊದಲ ಹಂತದ ‘ಅಮರ್ ಜವಾನ್’ ಯುದ್ಧ ಸ್ಮಾರಕವನ್ನು ಕಳೆದ ವರ್ಷದ ಏಪ್ರಿಲ್ 30ರಂದು ಉದ್ಘಾಟಿಸಲಾಗಿತ್ತು. ಆದರೆ ಸ್ಮಾರಕದ ಮೇಲ್ಭಾಗದಲ್ಲಿ ಯೋಧರ ಪ್ರತಿಮೆ ಸ್ಥಾಪನೆ

(ಮೊದಲ ಪುಟದಿಂದ) ಕಾರ್ಯ ಪೂರ್ಣಗೊಳ್ಳದೆ ಅದನ್ನು 2ನೇ ಹಂತದ ಯೋಜನೆಯಲ್ಲಿ ಸಿದ್ಧಪಡಿಸಲು ಟ್ರಸ್ಟ್ ನಿರ್ಧರಿಸಿತು.

ಮೊಹಾಲಿಯಿಂದ ತಂದ ಯೋಧನ ಪ್ರತಿಮೆ : ಸ್ಮಾರಕದ ಮೇಲ್ಭಾಗದಲ್ಲಿ ಯೋಧರೊಬ್ಬರ ಯಾವ ರೀತಿಯ ಪ್ರತಿಮೆ ಅಳವಡಿಸಬೇಕು ಎಂಬ ಸುದೀರ್ಘ ಚಿಂತನೆ ನಡೆಸಿದ ಕಾವೇರಿ ಜನ್ಮಭೂಮಿ ಟ್ರಸ್ಟ್ ಅಂತಿಮವಾಗಿ ಕಾರ್ಯನಿರತ ಯೋಧನೊಬ್ಬನ ಮನಸೆಳೆಯುವ ಪ್ರತಿಮೆ ಸ್ಥಾಪಿಸಲು ತೀರ್ಮಾನ ತೆಗೆದುಕೊಂಡಿತು. ಈ ಹಿನ್ನೆಲೆಯಲ್ಲಿ ಆಧುನಿಕ ತಂತ್ರಜ್ಞಾನ ದಲ್ಲಿ ನಿರ್ಮಿತಗೊಂಡಿರುವ ಕಾರ್ಯನಿರತ ಯೋಧರೊಬ್ಬರ 6 ಅಡಿ ಎತ್ತರದ ಫೈಬರ್ ಪುತ್ಥಳಿಯನ್ನು ಪಂಜಾಬ್ ರಾಜ್ಯದ ಮೊಹಾಲಿಯಿಂದ ತರಿಸಲಾಯಿತು. ಒಟ್ಟು 2 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಯುದ್ಧ ಸ್ಮಾರಕಕ್ಕೆ ಕಾರ್ಯನಿರತ ಯೋಧರೊಬ್ಬರ ಪ್ರತಿಮೆ ವಿಶೇಷ ಕಳೆಯೊಂದನ್ನು ನೀಡಿದೆ.

ಸ್ಮಾರಕದ ನಾಲ್ಕು ಭಾಗಗಳಲ್ಲೂ ಮಾರ್ಬಲ್ ಅಳವಡಿಸಲಾಗಿದ್ದು, ಸ್ಮಾರಕದ ಭಾಗವೊಂದರಲ್ಲಿ ವಿಶೇಷವಾಗಿ ಚೇರಂಗಾಲ ಗ್ರಾಮದಿಂದ ದೇಶ ಸೇವೆಗೈದ ಪ್ರತಿಯೊಬ್ಬರ ಹೆಸರನ್ನು ಕೆತ್ತಲಾಗಿದೆ. ಪ್ರತಿಮೆಯನ್ನು ನೋಡಿದ ಕೂಡಲೇ ದೇಶ ಸೇವಕರಾದ ಯೋಧರ ಬಗ್ಗೆ ಮತ್ತು ದೇಶದ ಸೇನೆಯ ಬಗ್ಗೆ ಅಭಿಮಾನ ಮೂಡಿಸುವಂತೆ ಈ ಸ್ಮಾರಕವನ್ನು ರೂಪುಗೊಳಿಸಲಾಗಿದೆ.

ಗಮನ ಸೆಳೆಯುವ ರಾಷ್ಟ್ರ ಲಾಂಛನ : ಯುದ್ಧ ಸ್ಮಾರಕದ ಬಲ ಬದಿಯಲ್ಲಿ ಆಕರ್ಷಕವಾದ ರಾಷ್ಟ್ರ ಲಾಂಛನ 2.5 ಅಡಿ ಎತ್ತರದದ ‘ಅಶೋಕ ಸ್ತಂಭ’ವನ್ನು ವಿಶೇಷವಾಗಿ ವಿನ್ಯಾಸಗೊಳಿಸಿ ಸ್ಥಾಪಿಸಲಾಗಿದೆ. ತಳಾರಬಾಣೆ ಸಮೀಪಿಸುತ್ತಿದ್ದಂತೆ ದೂರದಿಂದಲೇ ಗಮನ ಸೆಳೆಯುವ ಲಾಂಛನ ಸ್ತಂಭವನ್ನು ಕೂಡ ಪಂಜಾಬಿನ ಮೊಹಾಲಿಯಿಂದ ತರಿಸಿಕೊಳ್ಳಲಾಗಿದೆ. ಲಾಂಛನ ಸ್ತಂಭದ 4 ಬದಿಗಳಲ್ಲೂ ಕೂಡ ಮಾರ್ಬಲ್‍ನಲ್ಲಿ ಉಪಯುಕ್ತ ಮಾಹಿತಿಯನ್ನು ಕೆತ್ತಲಾಗಿದೆ. ಮುಂಭಾಗದಲ್ಲಿ ಕವಿ ಪ್ರದೀಪ್ ಅವರಿಂದ ರಚಿತಗೊಂಡಿರುವ ಗಾನ ಕೋಗಿಲೆ ಎಂದೇ ಪ್ರಖ್ಯಾತರಾದ ರಾಷ್ಟ್ರದ ಹೆಸರಾಂತ ಗಾಯಕಿ ಲತಾ ಮಂಗೇಶ್ಕರ್ ಹಾಡಿ ಜನಪ್ರಿಯಗೊಳಿಸಿದ ‘ಹೇ ಮೇರೆ ವತನ್ ಕೆ ಲೋಗೋ’ ಹಾಡಿನ ಪೂರ್ಣ ಭಾಗವನ್ನು ಮಾರ್ಬಲ್‍ನಲ್ಲಿ ಕೆತ್ತಿ ಅಳವಡಿಸಿರುವದು ವಿಶೇಷ ವಾಗಿದೆ. ಮತ್ತೊಂದು ಬದಿಯಲ್ಲಿ ಬಂಕಿಂ ಚಂದ್ರ ಚಟರ್ಜಿ ಅವರು ಬರೆದ ‘ವಂದೇ ಮಾತರಂ’ ಪೂರ್ಣ ಭಾಗವನ್ನು, ಇನ್ನೊಂದು ಬದಿಯಲ್ಲಿ ಪ್ರಖ್ಯಾತ ಕವಿ ಮೊಹಮ್ಮದ್ ಇಕ್ಬಾಲ್ ಅವರು ಬರೆದ ‘ಸಾರೆ ಜಹಾನ್ ಸೆ ಅಚ್ಚಾ ಹಿಂದೂಸ್ತಾನ್ ಹಮಾರ’ ಎಂಬ ಜನಪ್ರಿಯ ಹಾಡನ್ನು ಯತಾವತ್ತಾಗಿ ಕೆತ್ತಲಾಗಿದೆ. ಉಳಿದೊಂದು ಬದಿಯಲ್ಲಿ ನೋಬೆಲ್ ಪುರಸ್ಕøತರಾದ ಭಾರತದ ಹೆಮ್ಮೆಯ ರವೀಂದ್ರನಾಥ್ ಠಾಗೋರ್ ಅವರು ಸ್ವ್ವಾತಂತ್ರ್ಯ ಪೂರ್ವದಲ್ಲಿ ದೇಶದಲ್ಲಿನ ಸತ್ಯತೆ ಮತ್ತು ಪ್ರಾಮಾಣಿಕತೆ ಕುರಿತು ಹೊಂದಿದ್ದ ದೂರದೃಷ್ಟಿತ್ವದ ವಾಕ್ಯವನ್ನು ಕ್ರಾಂತಿವಾಕ್ಯವಾಗಿ ಕೆತ್ತಲಾಗಿದೆ. ಆದ್ದರಿಂದ ಪ್ರಸಕ್ತ ಪೀಳಿಗೆಗೆ ಇದೊಂದು ಅತ್ಯಂತ ಉಪಯುಕ್ತ ಮಾಹಿತಿ ಸ್ತಂಭವೂ ಆಗಿ ರೂಪುಗೊಂಡಿದೆ. ಯುದ್ಧ ಸ್ಮಾರಕ ಮತ್ತು ಲಾಂಛನ ಸ್ತಂಭದ ಸುತ್ತು ಅತ್ಯಾಧುನಿಕ ಎಲ್.ಇ.ಡಿ. ವಿದ್ಯುತ್ ದೀಪ ಅಳವಡಿಸಲಾಗಿದ್ದು, ರಾತ್ರಿ ವೇಳೆ ವಿಶೇಷವಾಗಿ ಕಂಗೊಳಿ ಸುತ್ತಲ್ಲದೇ, ತಲಕಾವೇರಿಯ ದೇವಸ್ಥಾನದ ಸನ್ನಿಧಿಯಿಂದಲೂ ರಾತ್ರಿ ವೇಳೆ ಈ ಬೆಳಕನ್ನು ನೋಡಿ ಆಸ್ವಾಧಿಸಬಹುದಾಗಿದೆ. ನಯನ ಮನೋಹರವಾದ ಪ್ರಕೃತಿಯ ರಮ್ಯ ತಾಣದಲ್ಲಿ ರೂಪುಗೊಂಡಿರುವ ಯುದ್ಧ ಸ್ಮಾರಕದ ಬಳಿ ನಿಂತು ಕಣ್ಣೇತ್ತಿ ನೋಡಿದರೆ ದೂರದಲ್ಲಿ ತಲಕಾವೇರಿಯ ದೇವಸ್ಥಾನ ಕಾಣಬಹುದಾಗಿದೆ. ತಳಾರಬಾಣೆ ಯಲ್ಲಿ ಅಪರೂಪದ ಯುದ್ಧ ಸ್ಮಾರಕವೊಂದು ತಲೆ ಎತ್ತಿರುವ ಹಿನ್ನಲೆಯಲ್ಲಿ ಮುಂದೊಂದು ದಿನ ದೇಶಪ್ರೇಮಿಗಳ ಪಾಲಿಗೆ ಇದೊಂದು ಪ್ರೇಕ್ಷಣೀಯ ತಾಣವಾಗಲಿದೆ. ಸ್ಮಾರಕದ ಅನತಿ ದೂರದಲ್ಲಿ ಕಾವೇರಿ ಜನ್ಮಭೂಮಿ ಟ್ರಸ್ಟ್‍ನ ಸುಸ್ಸಜ್ಜಿತ ಅತಿಥಿ ಗೃಹವೊಂದಿದ್ದು, ಪ್ರಕೃತಿ ಸೌಂದರ್ಯ ವನ್ನು ಆಸ್ವಾದಿಸುವ ಆಸಕ್ತರ ಪಾಲಿಗೆ ಇದು ಹೇಳಿ ಮಾಡಿಸಿದಂತಿದೆ.

29 ರಂದು ಲೋಕಾರ್ಪಣೆ: ಈ ಪೂರ್ಣ ಪ್ರಮಾಣದ ಯುದ್ಧ ಸ್ಮಾರಕ ಮತ್ತು ಲಾಂಛನ ಸ್ತಂಭವನ್ನು ಇದೇ ತಿಂಗಳ 29 ರಂದು ಶನಿವಾರ ಬೆಳಗ್ಗೆ 10.30 ಗಂಟೆಗೆ ಕಾವೇರಿ ಜನ್ಮ ಭೂಮಿ ಟ್ರಸ್ಟ್ ವತಿಯಿಂದ ತಳಾರಬಾಣೆ ಆವರಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನಿವೃತ್ತ ಏರ್‍ಮಾರ್ಷಲ್ ಕೆ.ಸಿ. ಕಾರ್ಯಪ್ಪ ಅವರು ಲೋಕಾರ್ಪಣೆಗೊಳಿಸ ಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಿವೃತ್ತ ಲೆ.ಜನರಲ್ ಕದಂಬಿ ಅವರು ಭಾಗವಹಿಸಲಿದ್ದಾರೆ. ಟ್ರಸ್ಟ್‍ನ ಅಧ್ಯಕ್ಷರಾದ ಹೈಕೋರ್ಟ್ ವಕೀಲ ಮೊಟ್ಟನ ಸಿ. ರವಿಕುಮಾರ್ ಅವರ ಅಧ್ಯಕ್ಷತೆಯಲ್ಲಿ ಜರುಗುವ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಟಯೋಟ ಕಿರ್ಲೋಸ್ಕರ್‍ನ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಕೆ.ಕೆ.ಸ್ವಾಮಿ , ಬೆಂಗಳೂರಿನ ಉದ್ಯಮಿ ರಮೇಶ್ ಜಿ.ಪಟೇಲ್, ಕೊಡಗು ಜಿ.ಪಂ. ಅಧ್ಯಕ್ಷರಾದ ಬಿ.ಎ. ಹರೀಶ್, ಮಡಿಕೇರಿ ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಮತ್ತು ಮಡಿಕೇರಿ ತಾ.ಪಂ. ಅಧ್ಯಕ್ಷರಾದ ಶೋಭಾ ಮೋಹನ್ ಅವರು ಪಾಲ್ಗೊಳ್ಳಲಿದ್ದಾರೆ.

ವಿಶೇಷ ವರದಿ-ರಫೀಕ್ ತೂಚಮಕೇರಿ