ಕೂಡಿಗೆ, ಕುಶಾಲನಗರ, ಏ. 26: ಮದುವೆ ದಿಬ್ಬಣದಂತೆ ಸುಮಾರು 13 ಅಲಂಕೃತ ಕಾರುಗಳಲ್ಲಿ ಆಗಮಿಸಿದ ಆದಾಯ ತೆರಿಗೆ ನಿಗ್ರಹ ದಳ (ಐಟಿ) ಕುಶಾಲನಗರದ ಪ್ರತಿಷ್ಠಿತ ಎಸ್‍ಎಲ್‍ಎನ್ ಗ್ರೂಪ್ ಸಂಸ್ಥೆಯ ಮಾಲೀಕರಿಗೆ ಸೇರಿದ ಸುಮಾರು 11 ಕಡೆಗಳ ಕಚೇರಿ ಹಾಗೂ ಮನೆಗಳಿಗೆ ಏಕಕಾಲದಲ್ಲಿ ಧಾಳಿ ನಡೆಸಿತು. ಮದುವೆ ದಿಬ್ಬಣ ಬಂದಂತೆ ಅಲಂಕೃತ ಕಾರುಗಳಲ್ಲಿ ಬಂದಾಗ ಕೆಲ ಕಾಲ ಕುಶಾಲನಗರದ ಈ ಖ್ಯಾತ ಉದ್ಯಮಿಗಳು ವಿಚಲಿತರಾದರು.ಮೈಸೂರಿನ ಪೊಲೀಸ್ ವ್ಯವಸ್ಥೆಯನ್ನು ಮುಂದಿರಿಸಿಕೊಂಡು ಯಾವದೇ ಪೂರ್ವ ಸೂಚನೆಯಿಲ್ಲದೆ ತಮ್ಮದೇ ಮಾರ್ಗದರ್ಶನದಲ್ಲಿ ಆದಾಯ ತೆರಿಗೆ ನಿಗ್ರಹ ದಳ ಕೂಡ್ಲೂರಿನ ಕೈಗಾರಿಕಾ ಬಡಾವಣೆ ಯಲ್ಲಿರುವ ಎಸ್‍ಎಲ್‍ಎನ್‍ಗೆ ಸೇರಿದ ಕಾಫಿ ಸಂಸ್ಕರಣಾ ಘಟಕ ಮತ್ತು ಕಾಫಿ ಇನ್ಸ್‍ಸ್ಟೆಂಟ್ ಘಟಕದ ಕಚೇರಿ ಸೇರಿದಂತೆ ಒಂದೆಡೆ ಧಾಳಿ ನಡೆಸಿದರೆ, ಅವರದ್ದೇ ಆದ ಮಂಗಳೂರು-ಕುಶಾಲನಗರ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಟಿಂಬರ್ ಡಿಪೋ, ಪೆಟ್ರೋಲ್ ಬಂಕ್, ಐಶಾರಾಮಿ ಹೋಟೇಲ್

(ಮೊದಲ ಪುಟದಿಂದ) ಪರ್ಪಲ್ ಪಾಮ್ ಮತ್ತು ಇಬ್ಬರು ಎಸ್‍ಎಲ್‍ಎನ್ ಗ್ರೂಪ್ ಮಾಲೀಕರು ಹಾಗೂ ಸಹೋದರರಾದ ವಿಶ್ವನಾಥನ್ ಮತ್ತು ಸಾತಪ್ಪನ್‍ನವರ ಮನೆಗಳ ಮೇಲೆ ಹಾಗೂ ಪಾಲಿಬೆಟ್ಟ ಸಮೀಪದ ಗ್ಲೋಬ್ ಎಸ್ಟೇಟ್, ಕೊಪ್ಪದಲ್ಲಿನ ಎಸ್ಟೇಟ್ ಮತ್ತು ಎಸ್‍ಎಲ್‍ಎನ್ ಎಸ್ಟೇಟ್‍ನ ಕಚೇರಿಗಳು, ಕುಶಾಲನಗರ ಸಮೀಪದ ಗುಡ್ಡೆಹೊಸೂರಿನ ಬಳಿ ಇರುವ ಈಡನ್ ಗಾರ್ಡನ್ ಹೋಂ ಸ್ಟೇ ಕಚೇರಿಗಳ ಮೇಲೆ ಏಕಕಾಲದಲ್ಲಿ ಬೆ. ಸುಮಾರು 8 ಗಂಟೆÉ ಸಮಯದಲ್ಲಿ ಏಕಾಏಕಿ ಧಾಳಿ ನಡೆಸಿತು.

ಈ ಧಾಳಿಯಲ್ಲಿ ಎಲ್ಲಾ ಕಚೇರಿಗಳಲ್ಲ್ಲಿ ಮತ್ತು ಅವರ ನಿವಾಸಗಳಲ್ಲ್ಲಿ ಕೆಲವು ದಾಖಲೆಗಳು ದೊರೆತಿದ್ದು, ಅಧಿಕಾರಿಗಳು ಬೆಳಗ್ಗಿನಿಂದಲೂ ಪರಿಶೀಲಿಸಿದರು. ಪೂರ್ವ ಯೋಜಿತವಾಗಿ ವ್ಯವಸ್ಥಿತವಾಗಿ ಮೊದಲೆ ಕಾರ್ಯತಂತ್ರವನ್ನು ರೂಪಿಸಿ ಧಾಳಿ ನಡೆಸಿದ ಅಧಿಕಾರಿಗಳು ಒಂದೊಂದು ತಂಡಗಳನ್ನು ರಚಿಸಿಕೊಂಡು ಕಾರ್ಯಾಚರಣೆಯಲ್ಲಿ ತೊಡಗಿದ್ದರು.

ಕಳೆದ ಕೆಲ ದಿನಗಳಿಂದಷ್ಟೆ ಚೆನೈನಲ್ಲಿ ಕೇಂದ್ರ ಮಾಜಿ ಅರ್ಥ ಸಚಿವ ಪಿ. ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಮನೆಯ ಮೇಲೆ ಐಟಿ ಧಾಳಿ ನಡೆದಿತ್ತು. ಅಲ್ಲಿ ದೊರೆತ ಕೆಲವು ದಾಖಲೆಗಳ ಆಧಾರದ ಮೇಲೆ ಕುಶಾಲನಗರದಲ್ಲಿ ಧಾಳಿ ನಡೆದಿರುವದಾಗಿ ಶಂಕಿಸಲಾಗಿದೆ. ಕುಶಾಲನಗರದ ಈ ಉದ್ಯಮಿಗಳು ಚಿದಂಬರಂ ಅವರಿಗೆ ದೂರ ಸಂಬಂಧಿಗಳೆಂದೂ ಹೇಳಲಾಗಿದೆ. ಅಲ್ಲದೆ, ತಮಿಳುನಾಡುವಿನ ಚೆಟ್ಟಿನಾಡುವಿನಲ್ಲಿ ಸಾತಪ್ಪನ್ ಸಹೋದರರ ಪೋಷಕರು ವಾಸಿಸುತ್ತಿದ್ದು ಇಂದು ಏಕಕಾಲದಲ್ಲಿ ಅಲ್ಲಿಯೂ ಧಾಳಿ ನಡೆದಿರುವದಾಗಿ ತಿಳಿದುಬಂದಿದೆ.

ಐಟಿ ಧಾಳಿಯ ಸಂದರ್ಭ ಸುಮಾರು ಮೂರು ಗಂಟೆಗಳ ಕಾಲ ಪೆಟ್ರೋಲ್ ಬಂಕ್ ಮೇಲೆ ಧಾಳಿ ಮಾಡಿದ ಅಧಿಕಾರಿಗಳು ಲೆಕ್ಕಪತ್ರಗಳನ್ನು ಪರಿಶೀಲನೆ ಮಾಡುತ್ತಿದ್ದ ಕಾರಣ ಪೆಟ್ರೋಲ್ ಬಂಕ್ ಸೇವೆಯನ್ನು ಸ್ಥಗಿತಗೊಳಿಸಲಾಯಿತು. ಅದೇ ರೀತಿ ಕೂಡ್ಲೂರು ಕೈಗಾರಿಕಾ ವಲಯದಲ್ಲಿರುವ ಎಸ್‍ಎಲ್‍ಎನ್ ಕಾಫಿ ಸಂಸ್ಕರಣಾ ಘಟಕ ಸಂಪೂರ್ಣ ಕಾರ್ಯಚಟುವಟಿಕೆಗಳನ್ನು ಸ್ಥಗಿತಗೊಳಿಸಲು ಐಟಿ ಅಧಿಕಾರಿಗಳು ಸೂಚಿಸಿದರು.

ಕಾರ್ಯನಿರ್ವಹಿಸಲು ಬಂದ ಎಲ್ಲಾ ಕಾರ್ಮಿಕರ ಮತ್ತು ಗುಮಾಸ್ತರುಗಳ ಮೊಬೈಲ್‍ಗಳನ್ನು ವಶಪಡಿಸಿಕೊಂಡು ಯಾವದೇ ಮಾಹಿತಿ ಹೊರಹೋಗದಂತೆ ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸಿದರು. ಗೇಟಿನ ಮುಂಭಾಗದಲ್ಲಿ ಸಂಸ್ಥೆ ಕಸವನ್ನು ಸಾಗಿಸುವ ಟ್ರ್ಯಾಕ್ಟರ್‍ಗಳನ್ನು ಸಹ ಹೊರಬಿಡದಂತೆ ಅವರೇ ಕರೆತಂದ ಪೊಲೀಸರಿಗೆ ಸೂಚಿಸಿದ್ದರು. ಸಾತಪ್ಪನ್ ಸಹೋದರರ ಸ್ನೇಹಿತರು ಇಂದು ಅವರನ್ನು ಸಂಪರ್ಕಿಸಲು ಮಾಡಿದ ಪ್ರಯತ್ನಗಳೆಲ್ಲ ವಿಫಲವಾದವು. ಏಕೆಂದರೆ ಧಾಳಿ ಸಂದರ್ಭ ಅವರ ಮೊಬೈಲ್‍ಗಳನ್ನು ಐಟಿ ತಂಡ ವಶಕ್ಕೆ ತೆಗೆದುಕೊಂಡಿತ್ತು. ಕೈಗಾರಿಕಾ ಘಟಕದ ಕೇಂದ್ರದಲ್ಲಿರುವ ಜವಹಾರ್ ಎಂಬವರ ಮಾಲೀಕತ್ವದ ಸಿಪಿ ಎಕ್ಸ್‍ಪೋರ್ಟ್ ಕಾಫಿ ಘಟಕಕ್ಕೂ ಬೆಳಿಗ್ಗೆ 8.30ಕ್ಕೆ ನವೀನ ಮಾದರಿಯ ಇನೋವ ಕಾರಿನಲ್ಲಿ ಮದುಮಗನ ದಿಬ್ಬಣದಂತೆ ದಿವಾನ ಮತ್ತು ಕೋಮಲ ಎಂಬ ಪೋಸ್ಟರ್ ಅಂಟಿಸಿದ ಕಾರುಗಳು ಘಟಕದ ಒಳಗೆ ಹೋದ ತಕ್ಷಣ ಪೊಲೀಸರನ್ನು ಅವರವರ ಗೇಟಿನಲ್ಲಿ ನಿಲ್ಲಿಸಿ ಯಾವದೇ ವಾಹನ ಮತ್ತು ಜನರನ್ನು ಒಳಬಿಡದೆ ಅಲ್ಲಿನ ಆಡಳಿತದ ಕಡತಗಳನ್ನು ಪರಿಶೀಲಿಸುತ್ತಿರುವದು ಕಂಡುಬಂದಿತು.

ಬೆಳಿಗ್ಗೆ 7 ಗಂಟೆಯಿಂದ ಕೂಡಿಗೆ ವ್ಯಾಪ್ತಿಯಲ್ಲಿ ಮದುವೆಗೆ ತೆರಳುವ ವಾಹನಗಳಂತೆ ಸಿಂಗರಿಸಿದ್ದ ಇನೋವ ಕಾರುಗಳು ಓಡಾಡುತ್ತಿದ್ದುದು ಕಂಡುಬಂದಾಗ ಈ ವ್ಯಾಪ್ತಿಯ ಜನರಿಗೆ ಈ ದಿನ ಯಾವದೋ ದೊಡ್ಡ ರಾಜಕಾರಣಿಯ ಮದುವೆ ಇರಬಹುದೆನ್ನುವ ಕಲ್ಪನೆ ಮೂಡಿದ್ದುದು ಸಹಜ.