ಭಾಗಮಂಡಲ, ಏ. 25: ನಿನ್ನೆ ಹಗಲು ವೇಳೆ ಭಾಗಮಂಡಲ ಸನಿಹ ಚೇರಂಗಾಲ ಗ್ರಾಮದಲ್ಲಿ ಆರೋಪಿ ಚಿದಾನಂದನ ಗುಂಡೇಟಿಗೆ ಬಲಿಯಾದ ಪೂವಯ್ಯ ಅವರ ಪತ್ನಿ ಅಮರಾವತಿಯ ಮೃತದೇಹವನ್ನು ಮಡಿಕೇರಿಯ ಜಿಲ್ಲಾ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಯಿತು. ಬಳಿಕ ಚೇರಂಗಾಲದ ಸ್ವಗೃಹಕ್ಕೆ ಒಯ್ದು ಪತಿ ಪೂವಯ್ಯ, ಪುತ್ರ ಚರಣ್ ಮತ್ತು ಕುಟುಂಬಸ್ಥರು ಅಂತಿಮ ಸಂಸ್ಕಾರ ನೆರವೇರಿಸಿದರು. ಈ ನಡುವೆ, ಆರೋಪಿಯ ಮತ್ತೊಂದು ಗುಂಡೇಟಿನಿಂದ ತೊಡೆ ಭಾಗದಲ್ಲಿ ತೀವ್ರ ಗಾಯಗೊಂಡಿದ್ದ ಅಮರಾವತಿಯ ಹಿರಿಯ ಸಹೋದರಿ ಹಾಗೂ ದಿ. ಪಾಪಯ್ಯ ಅವರ ಪತ್ನಿ ರೇಣುಕಾ ಸ್ಥಿತಿ ಗಂಭೀರವಾಗಿದ್ದು ಅವರನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಯಿಂದ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳಾಂತರಿಸಲಾಗಿದೆ.

ಅಮರಾವತಿಯ ಕುಟುಂಬಸ್ಥರು ನಿನ್ನೆ ಪೊಲೀಸರಿಗೆ ನೀಡಿದ ದೂರಿನ ಅನ್ವಯ ಆರೋಪಿ ಹಾಗೂ ಸಂಬಂಧಿಯೇ ಆಗಿರುವ ಮೂಲೆಮಜಲು ಚಿದಾನಂದನು ಅಮರಾವತಿ ಹಾಗೂ ಆಕೆಯ ಸಹೋದರಿ ದಿ. ಪಾಪಯ್ಯ ಅವರ ಪತ್ನಿ ರೇಣುಕಾರನ್ನು ತನ್ನ ಮನೆಯ ಅಂಗಳಕ್ಕೆ ಎಳೆದೊಯ್ದು ಇಬ್ಬರ ಮೇಲೂ ಗುಂಡು ಹಾರಿಸಿದುದಾಗಿ ಆರೋಪಿಸಲಾಗಿತ್ತು .ಈ ಆರೋಪಕ್ಕೆ ಸಂತ್ರಸ್ಥ ಕುಟುಂಬಸ್ಥರು ಇಂದೂ ಬದ್ಧವಿರುವದಾಗಿ ಪೊಲೀಸರಿಗೆ ಸ್ಪಷ್ಟಪಡಿಸಿದ್ದಾರೆ.

ಈ ಮಧ್ಯೆ ನಿನ್ನೆ ಘಟನೆಯ ಬಳಿಕ ಕತ್ತಿ ಏಟಿನಿಂದ ಗಾಯಗೊಂಡು ಮಡಿಕೇರಿಯ ಜಿಲ್ಲಾಸ್ಪತ್ರೆÉಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರೋಪಿ ಚಿದಾನಂದ ಗುಣಮುಖನಾಗಲು ಇನ್ನೂ ನಾಲ್ಕೈದು ದಿನಗಳು

(ಮೊದಲ ಪುಟದಿಂದ) ಬೇಕಾಗಬಹುದಾಗಿ ಪೊಲೀಸರು ತಿಳಿಸಿದ್ದಾರೆ. ಆತನನ್ನು ಪೊಲೀಸ್ ಪಹರೆಯಲ್ಲಿಯೇ ಆಸ್ಪತ್ರೆÉಯಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿದೆ. ಆತ ಗುಣಮುಖನಾದ ಬಳಿಕ ಪೂರ್ಣ ಪ್ರಮಾಣದ ತನಿಖೆ ನಡೆಸುವದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ಆಸ್ಪತ್ರೆಯಲ್ಲಿ ಗಾಯಾಳು ಆರೋಪಿ ಚಿದಾನಂದನ ಪ್ರಾರಂಭಿಕ ಹೇಳಿಕೆಯನ್ನು ಇಂದು ಪೊಲೀಸರು ಪಡೆದಿದ್ದಾರೆ. ಆತನ ಹೇಳಿPಯ ಪ್ರಮುಖ ಅಂಶ ಹೀಗಿದೆ:-“ನನಗೂ ಮತ್ತು ಪೂವಯ್ಯ ಹಾಗೂ ದಿ. ಪಾಪಯ್ಯ ಕುಟುಂಬದ ನಡುವೆ ಜಾಗ ವಿವಾದವಿತ್ತು. ಆದರೆ, ನ್ಯಾಯಾಲಯದಲ್ಲಿ ಈ ವಿವಾದ ಬಗೆಹರಿದಿತ್ತು. ಸೋಮವಾರ ದಿನ ಅವರಿಗೆ ಸೇರಿದ ಮರವೊಂದು ನನ್ನ ತೋಟದಲ್ಲಿ ಬಿದ್ದಿತ್ತು. ಆಗ ಪೂವಯ್ಯ ,ಅವರ ಪತ್ನಿ ಅಮರಾವತಿ, ಪುತ್ರ ಚರಣ್ ಹಾಗೂ ಪಾಪಯ್ಯ ಅವರ ಪತ್ನಿ ರೇಣುಕಾ ನನ್ನ ಮನೆಗೆ ಧಾಳಿ ಮಾಡಿ ಕತ್ತಿಯಿಂದ ಕೈ ಹಾಗೂ ತೊಡೆ ಭಾಗದಲ್ಲಿ ಕಡಿದರು. ಬೆದರಿದ ನಾನು ನನ್ನ ಮನೆಯ ಅಟ್ಟಕ್ಕೆ ಓಟಿ ಹೋಗಿ ಅಲ್ಲ್ಲಿದ್ದ ಕೋವಿಯನ್ನು ತಂದೆ. ಮನೆಯ ಹಿÀಂಭಾUದಲ್ಲಿ ಪೂವಯ್ಯ ಮತ್ತು ಚರಣ್ ನನಗಾಗಿ ಮತ್ತೆ ಕಾಯುತ್ತಿದ್ದು, ಮುಂಭಾಗದಲ್ಲಿ ಅಮರಾವತಿ ಮತ್ತು ರೇಣುಕಾ ಇದ್ದರು. ನನ್ನ ಮನೆಯಲ್ಲಿ ಹೆಂಡತಿ, ಮಗು, ತಂದೆ , ತಾಯಿಗಳಿದ್ದುದರಿಂದ ಹಾಗೂ ಪೂವಯ್ಯ ಸಂಗಡಿಗರು ನನ್ನ ಮನೆಯ ಗಾಜುಗಳನ್ನು ಒಡೆದು ಹಾಕಲು ತೊಡಗಿದಾಗ ನನಗೆ ನನ್ನ ಮನೆಯವರ ಪ್ರಾಣಕ್ಕೂ ಅಪಾಯವುಂಟಾಗುವ ಭಯ ಮೂಡಿತು. ಕೋವಿಯಿಂದ ಅಮರಾವತಿಯತ್ತ ಒಂದು ಗುಂಡು ಹಾರಿಸಿದೆ. ಮತ್ತ್ತೊಂದು ಗುಂಡನ್ನು ರೇಣುಕಾಳತ್ತ ಹಾರಿಸಿದೆ. ಆ ಸಂದರ್ಭ ಇತರರೆಲ್ಲ್ಲ ಭಯದಿಂದ ಸ್ಥಳ ಬಿಟ್ಟು ಓಡಿಹೋದರು. ಬಳಿಕ ನಾನು ಚಿಕಿತ್ಸೆಗಾಗಿ ಮಡಿಕೇರಿ ಆಸ್ಪತ್ರೆಯತ್ತ ವಾಹನದಲ್ಲಿ ಧಾವಿಸಿದೆ” ಎಂದು ಆರೋಪಿ ಹೇಳಿಕೆಯಿತ್ತಿದ್ದಾನೆ.

ಸತ್ಯಾಸತ್ಯತೆ ಪೊಲೀಸರು ಮುಂದೆ ನಡೆಸುವ ಹೆಚ್ಚಿನ ತನಿಖೆಯಿಂದ ಬಯಲಾಗಲಿದೆ. - ಕುಯ್ಯಮುಡಿ ಸುನಿಲ್