ಸಿದ್ದಾಪುರ, ಏ. 26: ದಿಡ್ಡಳ್ಳಿಯಲ್ಲಿ ವಾಸವಿರುವ ನಿರಾಶ್ರಿತರ ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಬುಧವಾರ ಭೇಟಿ ನೀಡಿ ನಿರಾಶ್ರಿತರನ್ನು ಜಿಲ್ಲಾಡಳಿತ ಗುರುತಿಸಿದ ನಿವೇಶನಗಳಿಗೆ ತೆರಳುವಂತೆ ಮನವೊಲಿಸಿದರು. ಆದರೆ ಕೆಲವು ನಿರಾಶ್ರಿತರು ಜಿಲ್ಲಾಧಿಕಾರಿಗಳ ಮಾತನ್ನು ನಯವಾಗಿ ತಿರಸ್ಕರಿಸಿದ ಪ್ರಸಂಗ ನಡೆಯಿತು.ದಿಡ್ಡಳ್ಳಿಯ ಅರಣ್ಯ ಪ್ರದೇಶದಲ್ಲಿ ಗುಡಿಸಲು ಕಟ್ಟಿಕೊಂಡು ವಾಸವಿದ್ದ 577 ಕುಟುಂಬಗಳನ್ನು ಡಿ.7ರಂದು ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯಾ ಚರಣೆ ನಡೆಸಿ ತೆರವುಗೊಳಿಸಿತ್ತು. ನಂತರ ನಿರಾಶ್ರಿತರು ದಿಡ್ಡಳ್ಳಿಯ ಆಶ್ರಮ ಶಾಲೆಯ ಎದುರು ಪ್ಲಾಸ್ಟಿಕ್ ಹೊದಿಕೆ ಯಿಂದ ಗುಡಿಸಲು ನಿರ್ಮಿಸಿಕೊಂಡು ವಾಸವಿದ್ದರು. ಆದರೆ ದಿಡ್ಡಳ್ಳಿಯಲ್ಲಿಯೇ ಜಾಗ ನೀಡಬೇಕೆಂದು ಒತ್ತಾಯಿಸಿದ ನಿರಾಶ್ರಿತರು ಶಾಶ್ವತ ಸೂರಿನ ನಿರೀಕ್ಷೆಯಲ್ಲಿ ದಿಡ್ಡಳ್ಳಿಯಲ್ಲೆ ವಾಸವಿದ್ದಾರೆ.

ನಿರಾಶ್ರಿತರ ಹೋರಾಟದ ಕಾವು ಏರುತ್ತಿದ್ದಂತೆ ಸರ್ಕಾರವು ಜಿಲ್ಲಾಡಳಿತದ ಮುಖಾಂತರ ಜಿಲ್ಲೆಯ ಮೂರು ತಾಲೂಕಿನಲ್ಲಿ ಜಾಗ ಗುರುತಿಸಿ 528 ಮಂದಿ ಅರ್ಹರಿಗೆ ನಿವೇಶನ ಗುರುತಿಸಿ ಪಟ್ಟಿ ತಯಾರಿಸಿತು. ಆದರೆ ಈವರೆಗೂ ಜಿಲ್ಲಾಡಳಿತ

(ಮೊದಲ ಪುಟದಿಂದ) ಗುರುತಿಸಿದ ಸ್ಥಳಕ್ಕೆ ತೆರಳಲು ನಿರಾಶ್ರಿತರು ಹಿಂದೇಟು ಹಾಕುತ್ತಿರುವದು ಸರ್ಕಾರಕ್ಕೆ ಹಾಗೂ ಜಿಲ್ಲಾಡಳಿತಕ್ಕೆ ತಲೆ ನೋವಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಹಾಗೂ ಜಿಲ್ಲಾಡಳಿತದ ಪರವಾಗಿ ಬುಧವಾರ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಭೇಟಿ ನೀಡಿ ಆದಿವಾಸಿಗಳ ಬಳಿ ಮಾತನಾಡಿ, ಸರ್ಕಾರ ಈಗಾಗಲೇ ಗುರುತಿಸಿದ ಸ್ಥಳಕ್ಕೆ ತೆರಳುವಂತೆ ಮನವೊಲಿಸಿದರು. ಆದರೆ ಕೆಲವು ನಿರಾಶ್ರಿತರು ಡಿ.ಸಿ.ರವರ ಬಳಿ ತಮಗೆ ದಿಡ್ಡಳ್ಳಿಯಲ್ಲಿಯೇ ನಿವೇಶನ ಬೇಕೆಂದು ಒತ್ತಾಯಿಸಿದರು. ಜಿಲ್ಲಾಡಳಿತ ಗುರುತಿಸಿದ ಸ್ಥಳಕ್ಕೆ ತೆರಳುವದಿಲ್ಲವೆಂದರು. ಈ ಸಂದರ್ಭದಲ್ಲಿ ಗ್ರಾಮೀಣ ಅಭಿವೃದ್ಧಿ ಪಂಚಾಯಿತ್ ರಾಜ್ ರಾಜ್ಯ ಕಾರ್ಯದರ್ಶಿ ಕಲ್ಪನ ಹಾಗೂ ಜಿಲ್ಲಾ ಐ.ಟಿ.ಡಿ.ಪಿ. ಇಲಾಖೆಯ ಅಧಿಕಾರಿ ಪ್ರಕಾಶ್, ತಾಲೂಕು ಅಧಿಕಾರಿ ಚಂದ್ರಶೇಖರ್, ಠಾಣಾಧಿಕಾರಿ ಸುಬ್ರಮಣ್ಯ ಹಾಜರಿದ್ದರು.

ಕಳೆದ 2 ದಿನಗಳ ಹಿಂದೆ ಬಿಗಿ ಪೊಲೀಸ್ ಬಂದೋಬಸ್ತ್ ಅನ್ನು ದಿಡ್ಡಳ್ಳಿಯಲ್ಲಿ ಕೈಗೊಂಡ ಜಿಲ್ಲಾಡಳಿತವು ಮತ್ತೊಮ್ಮೆ ನಿರಾಶ್ರಿತರ ಮನವೊಲಿಸುವ ಪ್ರಯತ್ನ ಮಾಡುತ್ತಿದೆ. ಇದನ್ನು ಗಮನಿಸಿದರೆÀ ಮಳೆಗಾಲಕ್ಕೆ ಮುಂಚಿತ ತೆರವುಗೊಳಿಸುವ ಕಾರ್ಯ ಕೈಗೊಳ್ಳುತ್ತಾರೆ ಎಂಬ ಸುಳಿವು ವ್ಯಕ್ತವಾಗುತ್ತಿದೆ.