ಮಡಿಕೇರಿ, ಏ. 26: ಮನೆಯೊಂದರಲ್ಲಿ ಕಳ್ಳತನ ನಡೆಸಿ ನಗದು ಹಾಗೂ ಚಿನ್ನ ಅಪಹರಿಸಿ ಪರಾರಿಯಾಗಿದ್ದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಟ್ಟೆಮಾಡು ಗ್ರಾಮದ ಕಟ್ಟೆಮನೆ ಮುರಳಿ ಎಂಬವರ ಮನೆಗೆ ತಾ. 18ರಂದು ಯಾರೂ ಇಲ್ಲದ ಸಂದರ್ಭ ನುಗ್ಗಿದ್ದ ಕಳ್ಳರು ಆಸ್ಪತ್ರೆ ಚಿಕಿತ್ಸೆಗೆಂದು ಅವರು ಕೂಡಿಟ್ಟಿದ್ದ ರೂ. 2.50 ಲಕ್ಷ ನಗದು ಹಾಗೂ 48 ಗ್ರಾಂ. ಚಿನ್ನವನ್ನು ಅಪಹರಿಸಿದ್ದರು. ತಾ. 23ರಂದು ಇದು ಬೆಳಕಿಗೆ ಬಂದಿತ್ತು. ಈ ಬಗ್ಗೆ ದೊರೆತ ದೂರಿನಂತೆ ತನಿಖೆ ಆರಂಭಿಸಿದ್ದ ಪೊಲೀಸರು ಬೈಲುಕುಪ್ಪೆ ಹಂದಿಗುಡ್ಡ ಕಾವಲಿನ ಚಂದ್ರ ಹಾಗೂ ಆನಂದ ಎಂಬವರನ್ನು ಬಂಧಿಸಿದ್ದಾರೆ. ಬಂಧಿತರಿಂದ ರೂ. 94 ಸಾವಿರ ನಗದು ಹಾಗೂ ಕಳವು ಮಾಡಿದ್ದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ರೂ. 75 ಸಾವಿರದಷ್ಟು ಹಣವನ್ನು ಆರೋಪಿಗಳು ಖರ್ಚು ಮಾಡಿದ್ದು, ಉಳಿದ ಮೊತ್ತವನ್ನು ಮಹಿಳೆ ಯೊಬ್ಬರಿಗೆ ನೀಡಿದ್ದಾರೆನ್ನಲಾಗಿದೆ. ಈಕೆ ಇನ್ನೂ ಪತ್ತೆಯಾಗಿಲ್ಲ. ಎಸ್ಪಿ ರಾಜೇಂದ್ರ ಪ್ರಸಾದ್, ಡಿವೈಎಸ್ಪಿ ಚಬ್ಬಿ, ಸಿ.ಐ. ಪ್ರದೀಪ್ ಮಾರ್ಗದರ್ಶನದಲ್ಲಿ ಎಸ್.ಐ. ಶಿವಪ್ರಕಾಶ್, ಹೆಡ್‍ಕಾನ್ಸ್ ಟೇಬಲ್ ತೀರ್ಥಕುಮಾರ್, ಇಬ್ರಾಹಿಂ, ಕಾಶಿಯಪ್ಪ, ಸಿಬ್ಬಂದಿಗಳಾದ ದಿನೇಶ್, ಸತೀಶ್, ಸೌಮ್ಯ, ಚಾಲಕ ಅರುಣ್ ಕುಮಾರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.