ಗೋಣಿಕೊಪ್ಪಲು, ಏ. 25: ಸುಮಾರು 50 ಯರವ ಕುಟುಂಬ ತಂಡಗಳ ನಡುವಿನ ಕುಪ್ಪಲೇರಂಡ ಕ್ರಿಕೆಟ್ ಕಪ್ ತಿತಿಮತಿ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ತಾ.27 ರಿಂದ ತಾ.30ರವರೆಗೆ ಜರುಗಲಿದೆ ಎಂದು ವೀರಾಜಪೇಟೆ ತಾಲೂಕು ಯರವ ಸಮಾಜ ಅಧ್ಯಕ್ಷ ವೈ.ಎಂ. ಶಾಂತಕುಮಾರ್ ತಿಳಿಸಿದ್ದಾರೆ.ಗೋಣಿಕೊಪ್ಪಲಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜೇತ ತಂಡಕ್ಕೆ ರೂ. 15 ಸಾವಿರ ನಗದು ಮತ್ತು ಟ್ರೋಫಿ, ರನ್ನರ್ಸ್ ತಂಡಕ್ಕೆ ರೂ.12 ಸಾವಿರ ನಗದು ಮತ್ತು ಟ್ರೋಫಿ ನೀಡಲಾಗುವದು. ಯರವ ಜನಾಂಗದ ನಡುವೆ ಸಾಮರಸ್ಯವನ್ನು ಬೆಳೆಸಲು ಈ ಬಾರಿ 6ನೇ ವರ್ಷದ ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿದೆ ಎಂದು ತಿಳಿಸಿದರು.

ತಾ. 30 ರಂದು ಅಂತಿಮ ಪಂದ್ಯಾಟ ನಡೆಯಲಿದ್ದು, ಮಹಿಳೆಯರಿಗೆ ಹಗ್ಗ ಜಗ್ಗಾಟ ಹಾಗೂ ಆದಿವಾಸಿಗಳ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮವನ್ನೂ ಏರ್ಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಕಾಫಿ ತೋಟ ಮಾಲೀಕರು ತಮ್ಮ ಲೈನ್ ಮನೆಯಲ್ಲಿರುವ ಯರವ ಕುಟುಂಬಗಳನ್ನು 4 ದಿನಗಳ ಕಾಲ ರಜೆ ನೀಡಿ ಸಹಕರಿಸುವಂತೆಯೂ ಶಾಂತಕುಮಾರ್ ಮನವಿ ಮಾಡಿದ್ದಾರೆ.

ತಾ.27 ರಂದು ಪೂರ್ವಾಹ್ನ 11 ಗಂಟೆಗೆ ಮಾಜಿ ಬಿಬಿಎಂಪಿ ಸದಸ್ಯ ಹಾಗೂ ಕೊಡಗು ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಮ್ ಅವರ ಆಪ್ತ ಕದ್ದಣಿಯಂಡ ಹರೀಶ್ ಬೋಪಣ್ಣ ಉದ್ಘಾಟನೆ ನೆರವೇರಿಸಲಿದ್ದು, ಕೊಡಗು ಜೆಡಿಎಸ್ ಪಕ್ಷದ ಅಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಪಂದ್ಯಾಟವನ್ನು ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಮಾಂಗೇರ ಪದ್ಮಿನಿ ಪೆÇನ್ನಪ್ಪ, ಜಿ.ಪಂ. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಮೂಕೋಂಡ ವಿಜು ಸುಬ್ರಮಣಿ, ಜಿ. ಪಂ. ಸದಸ್ಯೆ ಪಿ.ಆರ್. ಪಂಕಜ, ತಾ.ಪಂ. ಉಪಾಧ್ಯಕ್ಷ ನೆಲ್ಲೀರ ಚಲನ್, ತಾ.ಪಂ. ಸದಸ್ಯೆ ಆಶಾ ಜೇಮ್ಸ್, ಬಿಜೆಪಿ ಜಿಲ್ಲಾಧ್ಯಕ್ಷ ಭಾರತೀಶ್, ಜಿ.ಪಂ. ಸದಸ್ಯ ಸಿ.ಕೆ. ಬೋಪಣ್ಣ, ತಾ.ಪಂ. ಸದಸ್ಯ ಪ್ರಕಾಶ್, ಪೆÇನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ, ತಾ.ಪಂ. ಇಓ ಕಿರಣ್ ಪಡ್ನೇಕರ್ ಹಾಗೂ ತಿತಿಮತಿ ಸರ್ಕಾರಿ ಪ.ಪೂ.ಕಾಲೇಜು ಪ್ರಾಂಶುಪಾಲ ರಾಜಣ್ಣ ಪಾಲ್ಗೊಳ್ಳಲಿದ್ದಾರೆ. ವೈ.ಎಂ.ಶಾಂತಕುಮಾರ್ ಅಧ್ಯಕ್ಷತೆಯಲ್ಲಿ ಉದ್ಘಾಟನಾ ಸಮಾರಂಭ ನೆರವೇರಲಿದೆ ಎಂದರು.

ಗೋಷ್ಠಿಯಲ್ಲಿ ಯರವ ಸಮಾಜದ ಕಾರ್ಯದರ್ಶಿ ಸಂಜೀವ ವೈ.ಸಿ., ಉಪಾಧ್ಯಕ್ಷ ವೈ.ಎಂ.ಪ್ರಕಾಶ್, ಖಜಾಂಚಿ ವಸಂತ, ಸಂಚಾಲಕ ಸಿದ್ದಪ್ಪ ಪಿ.ಕೆ. ಇದ್ದರು.

- ಟಿ.ಎಲ್.ಎಸ್.