ಮಡಿಕೇರಿ, ಏ. 25: ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಜನಸಾಮಾನ್ಯರಿಗೆ ಅನುಕೂಲ ಒದಗಿಸುವ ನಿಟ್ಟಿನಲ್ಲಿ 3 ತಿಂಗಳೊಳಗಾಗಿ ರಾಜೀವ್ ಗಾಂಧಿ ಸೇವಾ ಕೇಂದ್ರಗಳನ್ನು ಕಡ್ಡಾಯವಾಗಿ ನಿರ್ಮಾಣ ಮಾಡಬೇಕೆಂದು ಸಂಸದ ಪ್ರತಾಪ್ ಸಿಂಹ ಸಂಬಂಧಿಸಿದ ಇಲಾಖೆಗೆ ಸೂಚನೆ ನೀಡಿದ್ದಾರೆ.ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ ಸಂಸದ ಪ್ರತಾಪ್ ಸಿಂಹ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಗೆ ಜಿಲ್ಲಾ ಪಂಚಾಯಿತಿ ಸಿಇಓ ಚಾರುಲತ ಸೋಮಲ್ ಅವರು ಗೈರು ಹಾಜರಾಗಿದ್ದ ಬಗ್ಗೆ ಅಸಮಾಧಾನ ಗೊಂಡ ಸಂಸದರು ಜಿಲ್ಲೆಯ ಅಭಿವೃದ್ಧಿ ಕುರಿತಾದ ಸಭೆಗೆ ಜವಾಬ್ದಾರಿ ಸ್ಥಾನದಲ್ಲಿರುವ ಸಿಇಓ ಅವರು ಗೈರು ಹಾಜರಾಗಿರುವದು ಸರಿಯಲ್ಲ ಎಂದರು.

ಜಿಲ್ಲೆಯಲ್ಲಿ ಶೌಚಾಲಯದ ಕೊರತೆಯಿಲ್ಲ ಎಂಬ ಅಧಿಕಾರಿಯ ಮಾಹಿತಿಗೆ ಆಕ್ರೋಶ ವ್ಯಕ್ತಪಡಿಸಿದ ಶಾಸಕ ಅಪ್ಪಚ್ಚುರಂಜನ್ ಅವರು ವಾಸ್ತವ ಅರಿಯದೆ ತಪ್ಪು ಮಾಹಿತಿ ನೀಡಬೇಡಿ, ನನ್ನೊಂದಿಗೆ ಬನ್ನಿ ಇನ್ನೂ ಕೂಡ ಶೌಚಾಲಯ ಕೊರತೆಯಿರುವ ಗ್ರಾಮಗಳನ್ನು ನಾನು ತೋರಿಸುತ್ತೇನೆ ಎಂದು ಹೇಳಿದರು. ಶೌಚಾಲಯಗಳ ಕೊರತೆ ಇರುವ ಗ್ರಾಮಗಳ ವರದಿ ತರಿಸಿಕೊಂಡು ಶೀಘ್ರವಾಗಿ ಶೌಚಾಲಯ ವ್ಯವಸ್ಥೆ ಕಲ್ಪಿಸುವಂತೆ ಸಂಸದರು ಸೂಚಿಸಿದರು.

ಕಡಮಕಲ್ಲು ರಸ್ತೆ ನಿರ್ಮಾಣ ಸಂಬಂಧ 6 ಎಕರೆ ಜಾಗಕ್ಕೆ ಪರ್ಯಾಯವಾಗಿ 48 ಎಕರೆ ಜಾಗವನ್ನು ಅರಣ್ಯ ಇಲಾಖೆಗೆ ನೀಡಲಾಗಿದ್ದರೂ ಇದುವರೆಗೂ ಕಾರ್ಯ ಪೂರ್ಣಗೊಂಡಿಲ್ಲ ಎಂದು ಅಸಮಾಧಾನಗೊಂಡ ಶಾಸಕ ರಂಜನ್ ಮುಂದಿನ ಸಭೆಯಲ್ಲಿ ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತೆ ಅರಣ್ಯಾಧಿಕಾರಿಗೆ ಹೇಳಿದರು.

ದಿಡ್ಡಳ್ಳಿ ನಿರಾಶ್ರಿತರಿಗೆ ಜಾಗ ಹಂಚಿಕೆ ಸಂಬಂಧ 611 ಮಂದಿ ನೋಂದಾವಣೆ ಮಾಡಿಕೊಂಡಿದ್ದ ಅದರಲ್ಲಿ 528 ಅರ್ಹರನ್ನು ಆಯ್ಕೆ ಮಾಡಿ ಲಾಟರಿ ಮೂಲಕ ಬಸವನಹಳ್ಳಿಯಲ್ಲಿ 180, ರಾಂಪುರ ಬ್ಯಾಡಗೊಟ್ಟ 170, ಕೆದಮುಳ್ಳೂರಿನಲ್ಲಿ 178 ಮಂದಿಗೆ ಜಾಗ ಹಂಚಲಾಗಿದೆ ಎಂದು ಐಟಿಡಿಪಿ ಅಧಿಕಾರಿ ಪ್ರಕಾಶ್ ಮಾಹಿತಿಯಿತ್ತರು.

ಕೊಡಗಿನಲ್ಲಿ ಸೆಸ್ಕಾಂ ವತಿಯಿಂದ 2,80,000 ಸಿಎಫ್‍ಎಲ್ ಬಲ್ಬ್‍ಗಳನ್ನು ವಿತರಿಸಲಾಗಿದೆ ಎಂದು ಸೆಸ್ಕಾಂ ಅಧಿಕಾರಿ ಮಾಹಿತಿಯಿತ್ತರು. ಮುಂದಿನ ಬಾರಿ ಬಲ್ಬ್‍ಗಳನ್ನು ವಿತರಿಸುವ ಸಂದರ್ಭ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಸೂಚಿಸಿದ ಸಂಸದರು ಆ ಮೂಲಕ ಬಲ್ಬ್ ವಿತರಣೆ ಕೇಂದ್ರ ಸರ್ಕಾರದ ಯೋಜನೆ ಎಂಬ ಬಗ್ಗೆ ಜನಜಾಗೃತಿ ಮೂಡಿಸು ವಂತೆ ಹೇಳಿದರು.

ಕಾಡಾನೆಗಳ ಹಾವಳಿ ನಿಯಂತ್ರಣಕ್ಕೆ ಸಂಬಂಧಿಸಿದಂತೆ 242 ಕೋಟಿ ರೂ.ಗಳ ಯೋಜನೆ ತಯಾರಿಸಿ ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದು ಅರಣ್ಯಾಧಿಕಾರಿ ಮಾಹಿತಿ ಯಿತ್ತರು. ಮೋದೂರು ತೋಟದಲ್ಲಿ ಸುಮಾರು 10 ಕಾಡಾನೆಗಳು ಬೀಡುಬಿಟ್ಟಿದ್ದು, ಅವುಗಳನ್ನು ಓಡಿಸಲು ಕೂಡಲೇ ಕ್ರಮ ಕೈಗೊಳ್ಳುವಂತೆ ಶಾಸಕ ರಂಜನ್ ಸೂಚಿಸಿದರು.

ಶಿಕ್ಷಕರಾಗಿದ್ದುಕೊಂಡು ಪತ್ರಿಕೆಗಳಿಗೆ ವರದಿಗಾರರಾಗಿ ಕಾರ್ಯನಿರ್ವ ಹಿಸುವವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವಂತೆ

(ಮೊದಲ ಪುಟದಿಂದ) ಪ್ರತಾಪ್ ಸಿಂಹ ಶಿಕ್ಷಣ ಇಲಾಖಾಧಿಕಾರಿಗೆ ನಿರ್ದೇಶನವಿತ್ತರು. ಹತ್ತನೇ ತರಗತಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬರುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳುವಂತೆ ತಾಕೀತು ಮಾಡಿದರು.

ಜಿಲ್ಲೆಯ ಅಭಿವೃದ್ಧಿ ಸಂಬಂಧಿಸಿದಂತೆ ಕಳೆದ ಎರಡು ಮುಕ್ಕಾಲು ವರ್ಷದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗಿದೆ. ಇನ್ನೂ ಕೂಡ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ಆಗಬೇಕಿದೆ. ಆ ದಿಸೆಯಲ್ಲಿ ನಿರೀಕ್ಷಿತ ಫಲಿತಾಂಶ ದೊರೆಯಬೇಕು. ಸಾರ್ವಜನಿಕರಿಗೆ ಸ್ಪಂದಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಪ್ರತಾಪ್ ಸಿಂಹ ಹೇಳಿದರು. ನಾಗರಹೊಳೆ ಹುಲಿಯೋಜನಾ ವ್ಯಾಪ್ತಿಯಲ್ಲಿ ವಸತಿ ಕಲ್ಪಿಸಲು ಬರುವದಿಲ್ಲ. ಆದ್ದರಿಂದ ಅಲ್ಲಿನ ನಿವಾಸಿಗಳಿಗೆ ಮನಃಪರಿವರ್ತನೆ ಮಾಡಿ ಪುನರ್‍ವಸತಿ ಕಲ್ಪಿಸುವಂತೆ ಐಟಿಡಿಪಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಮಾತನಾಡಿ ದಿಡ್ಡಳ್ಳಿಯಿಂದ ಸ್ಥಳಾಂತರವಾಗುವ ಗಿರಿಜನರಿಗೆ ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ತರಬೇತಿಯನ್ನು ನೀಡಿ ಸ್ವ ಉದ್ಯೋಗ ಕಲ್ಪಿಸಲು ಪ್ರಯತ್ನಿಸಲಾಗುತ್ತದೆ ಎಂದು ಹೇಳಿದರು. ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೆ ಏರಿಸಲು ನಿರ್ಧರಿಸಲಾಗಿದೆ. ಈ ಸಂಬಂಧ ಅಗತ್ಯ ಮಾಹಿತಿಯನ್ನು ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಂಸದರು ಸೂಚನೆ ನೀಡಿದರು.

ಸರ್ಕಾರದ ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸರಿಯಾದ ದಾಖಲೆಗಳನ್ನು ಜತನ ಮಾಡಿಕೊಂಡಿರಬೇಕು. ಗ್ರಾ.ಪಂ. ಮಟ್ಟದಲ್ಲಿ ಪಿಡಿಓಗಳು ತಮ್ಮ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲು ಮುಕ್ತ ವಾತಾವರಣ ನಿರ್ಮಾಣ ಮಾಡಬೇಕು ಎಂದು ಅಪ್ಪಚ್ಚುರಂಜನ್ ಅವರು ಸಲಹೆ ಮಾಡಿದರು.

ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಕಳೆದ ಹಲವು ವರ್ಷಗಳಿಂದ ಬಾಕಿ ಇರುವ ರಸ್ತೆ ಕಾಮಗಾರಿಗಳನ್ನು ಪೂರ್ಣಗೊಳಿಸದಿರುವದಕ್ಕೆ ಅತೃಪ್ತಿ ವ್ಯಕ್ತಪಡಿಸಿದ ಸಂಸದರು ಇಂತಹ ಟೆಂಡರ್‍ದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಕ್ರಮವಹಿಸುವಂತೆ ಎಂಜಿನಿಯರ್‍ಗಳಿಗೆ ಸೂಚನೆ ನೀಡಿದರು.

ಕುಡಿಯುವ ನೀರು ಕಾಮಗಾರಿಗಳಿಗೆ ವಿದ್ಯುತ್ ಸಂಪರ್ಕ ಕೂಡಲೇ ಕಲ್ಪಿಸಬೇಕು. ಸೋಮವಾರಪೇಟೆ ತಾಲೂಕಿನಲ್ಲಿ 13 ಕಡೆ ಕುಡಿಯುವ ನೀರು ಕಾಮಗಾರಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಬಾಕಿ ಇದ್ದು, ಕೂಡಲೇ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಸೆಸ್ಕ್ ಅಧಿಕಾರಿ ಅವರಿಗೆ ಶಾಸಕರು ನಿರ್ದೇಶನ ನೀಡಿದರು.

ಸಮಿತಿ ಸದಸ್ಯ ಸುಭಾಸ್ ಸೋಮಯ್ಯ ಅವರು ರೇಷನ್ ಕಾರ್ಡ್ ಸಂಬಂಧಿಸಿದಂತೆ ಗೊಂದಲವಿದ್ದು, ಇದನ್ನು ಸರಿಪಡಿಸುವಂತಾಗಬೇಕು. ಕಾಲ ಕಾಲಕ್ಕೆ ಸೀಮೆ ಎಣ್ಣೆ ವಿತರಿಸುವಂತಾಗಬೇಕು ಎಂದು ಮನವಿ ಮಾಡಿದರು.

ಸಮಿತಿ ಸದಸ್ಯೆ ತೆಕ್ಕಡೆ ಶೋಭಾ ಮೋಹನ್ ಮಾತನಾಡಿ, ನರೇಗಾ ಕಾರ್ಯಕ್ರಮಗಳು ಪ್ರಗತಿ ಕಾಣಬೇಕು. ಇನ್ನೂ ಹಲವು ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕಿದೆ. ಶೌಚಾಲಯ ನಿರ್ಮಾಣ ಬಾಕಿ ಇದೆ ಎಂದು ಗಮನ ಸೆಳೆದರು. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವಂತಾಗಬೇಕು. ಆರ್.ಟಿ.ಇಯಡಿ ಶೇ.25 ರಷ್ಟು ಪ್ರವೇಶಕ್ಕೆ ಖಾಸಗಿ ಶಾಲೆಗಳಲ್ಲಿ ಅವಕಾಶವಾಗಬೇಕು ಎಂದು ಸಂಸದರು ಸೂಚನೆ ನೀಡಿದರು. ಗುಣಮಟ್ಟದ ರಸಗೊಬ್ಬರ ಪೂರೈಕೆ ಮಾಡಬೇಕು. ರಸಗೊಬ್ಬರ ಪೂರೈಕೆಯಲ್ಲಿ ಯಾವದೇ ವ್ಯತ್ಯಯ ಉಂಟಾಗಬಾರದು ಎಂದು ಸೂಚನೆ ನೀಡಿದರು.

ಕಾಫಿ ಬೆಳೆ ನಷ್ಟ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಸಂಸದರು ಕಾಫಿ ಬೆಳೆ ಯೋಜನೆಗಳ ಬಗ್ಗೆ ವಿವರಣೆ ಪಡೆದು ಕಾಫಿ ಬೆಳೆಗಾರರಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸಲು ಕಾಫಿ ಮಂಡಳಿಯ ಉಪ ನಿರ್ದೇಶಕರಿಗೆ ಸೂಚನೆ ನೀಡಿದರು. ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ನಗರಸಭೆ ವತಿಯಿಂದ ಒಳಚರಂಡಿ ಕಾಮಗಾರಿ ಕೈಗೊಳ್ಳಲಾಗಿದ್ದು, ಈ ಸಂಬಂಧ ಅಗತ್ಯ ಮಾಹಿತಿ ಒದಗಿಸುವಂತೆ ಪೌರಾಯುಕ್ತರಿಗೆ ಸೂಚನೆ ನೀಡಿದರು. ವಿವಿಧ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆ ವ್ಯಾಪ್ತಿಗೆ ಸಂಬಂಧಿಸಿದ ಹಲವು ಮಾಹಿತಿ ನೀಡಿದರು. ಸಭೆಯಲ್ಲಿ ಎಂಎಲ್‍ಸಿ ಸುನಿಲ್ ಸುಬ್ರಮಣಿ, ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಇದ್ದರು.