ಸೋಮವಾರಪೇಟೆ, ಏ. 26: ಪಟ್ಟಣ ಪಂಚಾಯಿತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಅನುದಾನವನ್ನು ಸರಕಾರದ ಆದೇಶದ ವಿರುದ್ದವಾಗಿ ಇತರೆ ಯೋಜನೆಗಳಿಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ನಗರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವೇದಿಕೆ ಹಾಗೂ ಇಂದಿರಾಗಾಂಧಿ ಅಭಿಮಾನಿಗಳ ಸಂಘದ ವತಿಯಿಂದ ಪಟ್ಟಣ ಪಂಚಾಯಿತಿ ಎದುರು ಇಂದು ತಮಟೆ ಪ್ರತಿಭಟನೆ ನಡೆಯಿತು.

ಇಂದಿರಾಗಾಂಧಿ ಅಭಿಮಾನಿಗಳ ಸಂಘದ ಅಧ್ಯಕ್ಷ ಎಚ್.ಎ. ನಾಗರಾಜ್ ಅವರ ನೇತೃತ್ವದಲ್ಲಿ ವಿನೂತನ ಪ್ರತಿಭಟನೆ ನಡೆಯಿತು. ಪ್ರತಿಭಟನಾಕಾರರು ತಮಟೆ ಬಡಿಯುತ್ತ, ಪಂಚಾಯಿತಿ ವಿರುದ್ಧ ಹಾಗೂ ಅಧ್ಯಕ್ಷರ ವಿರುದ್ಧ ಘೋಷಣೆ ಕೂಗಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್, ಸ್ಥಾಯಿ ಸಮಿತಿ ಅಧ್ಯಕ್ಷೆ ಸುಶೀಲಾ, ವಿಪಕ್ಷ ಸದಸ್ಯರಾದ ಶೀಲಾ ಡಿಸೋಜ, ಕೆ.ಎ. ಆದಂ, ಇಂದ್ರೇಶ್, ಮುಖ್ಯಾಧಿಕಾರಿ ಪಿ.ಕೆ.ನಾಚಪ್ಪ, ಇಂಜಿನಿಯರ್ ವೀರೇಂದ್ರ, ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ಆಹವಾಲು ಆಲಿಸಿದರು.

ಸರಕಾರದಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಬಿಡುಗಡೆಯಾಗುವ ಅನುದಾನವನ್ನು ಇತರೆ ಯೋಜನೆಗಳಿಗೆ ಬಳಸಿಕೊಂಡು ದುರುಪಯೋಗ ಪಡಿಸಿಕೊಂಡಿರುವದು ತಿಳಿದು ಬಂದಿದ್ದು, ಮೇಲಧಿಕಾರಿಗಳಿಗೆ ದೂರು ನೀಡಲಾಗುವದು ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಎಚ್.ಎ. ನಾಗರಾಜ್ ಹೇಳಿದರು.

ಎಸ್‍ಸಿ ಎಸ್‍ಟಿ ಅನುದಾನವನ್ನು ದುರುಪಯೋಗಪಡಿಸಿಕೊಳ್ಳಲು ಸಾಧ್ಯವಾಗುವದಿಲ್ಲ. ಪಂಚಾಯಿತಿ ಕ್ರಮದ ಬಗ್ಗೆ ಪರ - ವಿರೋಧ ವ್ಯಕ್ತವಾಗಿರುವ ಹಿನ್ನೆಲೆ ಮತ್ತೊಮ್ಮೆ ಸಭೆ ಕರೆದು ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವದು ಎಂದು ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್ ಹೇಳಿದರು.