ಮಡಿಕೇರಿ, ಏ. 26: ನಗರಸಭೆಯಲ್ಲಿ ಇನ್ನು ಮುಂದೆ ಫಾರಂ ನಂ. 3 ಅನ್ನು ಹದಿನೈದು ದಿನದೊಳಗೆ ವಿತರಿಸಿ ಕ್ರಮ ಕೈಗೊಳ್ಳಲಾಗುವದು ಎಂದು ಆಯುಕ್ತೆ ಶುಭ ಘೋಷಿಸಿದ್ದಾರೆ.ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ನಗರಸಭೆಯಲ್ಲಿ ಫಾರಂ ನಂ. 3 ವಿತರಣೆಗೆ ಸಂಬಂಧಿಸಿದಂತೆ ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ; ಕೆಲವರಿಗೆ ಶೀಘ್ರ ವಿತರಣೆ ಮಾಡಲಾಗುತ್ತದೆ, ಇನ್ನೂ ಕೆಲವರಿಗೆ ತಡ ಮಾಡಲಾಗುತ್ತಿದ್ದು, ಜನತೆ ರೋಸಿ ಗೋಗುವಂತಾಗಿದೆ ಎಂದು ಸದಸ್ಯರುಗಳು ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭ ಚರ್ಚೆ-ವಿಚರ್ಚೆಗಳು ನಡೆದು ಬಳಿಕ ಮಾತನಾಡಿದ ಆಯುಕ್ತೆ ಶುಭ ಅವರು ಫಾರಂ ನಂ. 3 ಅನ್ನು 15 ದಿನಗಳೊಳಗೆ ವಿತರಿಸಲು ನಗರಸಭೆ ಕಾರ್ಯಪ್ರವೃತ್ತವಾಗಲಿದೆ. ಪ್ರಸ್ತುತ ಇರುವ 260 ಅರ್ಜಿಗಳನ್ನು ಮುಂದಿನ ವಾರದೊಳಗೆ ಪೂರ್ಣ ಗೊಳಿಸಲಾಗುವದೆಂದು ಹೇಳಿದರು.

ರಾಜಕೀಯ ಬೇಡ

ನಗರಸಭಾ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗೆ ಕ್ರಿಯಾಯೋಜನೆ ರೂಪಿಸುವಾಗ ಎಲ್ಲಾ ವಾರ್ಡ್‍ಗಳಿಗೂ ಸಮಾನ ಆದ್ಯತೆ ನೀಡಬೇಕು. ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬೆರೆಸಬಾರದು ಎಂದು ಸದಸ್ಯರಾದ ಕೆ.ಎಂ. ಗಣೇಶ್, ಅಮೀನ್ ಮೊಯ್ಸಿನ್ ಹೇಳಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಸ್. ರಮೇಶ್ ಮಾತನಾಡಿ ಅಂದಾಜು ಪಟ್ಟಿ ತರಿಸಿಕೊಳ್ಳದೆ ತಾನು ಯಾವದೇ ಕಾಮಗಾರಿಗಳಿಗೂ ಮಂಜೂರಾತಿ ನೀಡುತ್ತಿಲ್ಲ. ಯಾವದೇ ಸದಸ್ಯರು ತಮ್ಮ ವಾರ್ಡ್‍ನ ಕಾಮಗಾರಿಗಳ ಬಗ್ಗೆ ನಿಸ್ಸಂಕೋಚದಿಂದ ಮಾಹಿತಿ ನೀಡಬಹುದು. ತಾನು ಸ್ಪಂದನೆ ನೀಡುತ್ತೇನೆ. ಇದನ್ನು ಬಿಟ್ಟು ವಿನಾಕಾರಣ ಆರೋಪ ಮಾಡುವದು ಸರಿಯಲ್ಲ ಎಂದರು.

ಕಳಪೆ ಕಾಮಗಾರಿ

ಗಾಂಧಿ ಮೈದಾನಕ್ಕೆ ತೆರಳುವ ರಸ್ತೆ, ಅಗ್ನಿ ಶಾಮಕ ಠಾಣೆಗೆ ತೆರಳುವ ರಸ್ತೆ, ಮಹದೇವಪೇಟೆ ರಸ್ತೆಗಳು ಗುಂಡಿ ಬಿದ್ದು ಹಾಳಾಗಿವೆ ಎಂದು ಸದಸ್ಯ ಪಿ.ಡಿ. ಪೊನ್ನಪ್ಪ ಸಭೆಯ ಗಮನ ಸೆಳೆದರು. ಗುಂಡಿ ಬಿದ್ದಿರುವ ರಸ್ತೆಗಳಿಗೆ ತೇಪೆ ಹಾಕಿ

(ಮೊದಲ ಪುಟದಿಂದ) ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡಲಾಗುತ್ತಿದೆ ಎಂದು ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್ ಹೇಳಿದರು. ಮಹದೇವಪೇಟೆಯ ರಸ್ತೆಯಂತೂ ತೀರಾ ಹದಗೆಡುತ್ತಿದೆ ಎಂದು ಸದಸ್ಯ ಉದಯಕುಮಾರ್ ನುಡಿದರು. ಎರಡನೇ ಹಂತದ ಕಾಮಗಾರಿಗಳು ಎಲ್ಲವೂ ಕಳಪೆಯಿಂದ ಕೂಡಿವೆ. ಯಾವದಕ್ಕೂ ಬಿಲ್ ಪಾವತಿ ಮಾಡಬಾರದೆಂದು ಸದಸ್ಯೆ ತಜಸ್ಸುಂ ಗಮನ ಸೆಳೆದರು. ಕಾಮಗಾರಿಗಳು ಪೂರ್ಣಗೊಂಡ ಬಳಿಕ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲನೆ ಮಾಡಿ ಬಳಿಕ ಹಣ ಪಾವತಿ ಮಾಡುವಂತೆ ಹೇಳಿದ ಸದಸ್ಯ ಉಣ್ಣಿಕೃಷ್ಣ ಕೂತಲ್ಲೆ ಇದ್ದರೆ ಪ್ರಯೋಜನವಿಲ್ಲ ಎಂದು ಆಯುಕ್ತರನ್ನು ಕುಟುಕಿದರು. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮಾಹಿತಿ ಸಲ್ಲಿಸುವ ಬಗ್ಗೆ ತೀರ್ಮಾನಿಸಲಾಯಿತು. ಮಾರುಕಟ್ಟೆಯಲ್ಲಿ ಕಸಾಯಿಖಾನೆ ನಿರ್ಮಾಣ ಅಗತ್ಯವಾಗಿದೆ. ಆದಷ್ಟು ಬೇಗ ಕಾಮಗಾರಿ ಆರಂಭಿಸುವಂತೆ ಸದಸ್ಯೆ ತಜಸ್ಸುಂ ಇದೇ ಸಂದರ್ಭ ಆಗ್ರಹಿಸಿದರು.

ಯುಜಿಡಿಗೆ ತಡೆ

ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಯುಜಿಡಿ (ಒಳಚರಂಡಿ) ಕಾಮಗಾರಿಯಿಂದಾಗಿ ರಸ್ತೆಗಳು ಹಾಳಾಗುತ್ತಿದ್ದು, ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ ಎಂಬ ಬಗ್ಗೆ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ನಂತರ ಸದ್ಯದ ಮಟ್ಟಿಗೆ ಯುಜಿಡಿ ಕಾಮಗಾರಿಯನ್ನು ತಡೆಹಿಡಿಯಲು ಸಭೆ ತೀರ್ಮಾನಿಸಿತು. ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಈ ಬಗ್ಗೆ ನಿರ್ಧಾರ ಪ್ರಕಟಿಸಿದರು. ಕಾಮಗಾರಿ ಮುಂದುವರೆಸುವದಾದರೆ ಕೆಲವೊಂದು ನಿರ್ಬಂಧಗಳನ್ನು ವಿಧಿಸಲು ಸಭೆ ನಿರ್ಣಯ ಕೈಗೊಂಡಿತು.

ಕಡಂಗ ಕಿರಿಕಿರಿ

ಸಂಪಿಗೆಕಟ್ಟೆಯಲ್ಲಿ ಮೂಡಾ ಮಾಜಿ ಅಧ್ಯಕ್ಷೆ ಸುರಯ್ಯ ಅಬ್ರಾರ್ ಅವರಿಂದ ಕಡಂಗ ಒತ್ತುವರಿಯಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕೆಲ ದಿನಗಳ ಹಿಂದೆ ನಡೆದಿದ್ದ ಸರ್ವೆಯ ವರದಿ ಕೈಸೇರಿದೆಯೆ ಎಂದು ಸದಸ್ಯೆ ಸಂಗೀತಾ, ಪೀಟರ್ ಆಯುಕ್ತರನ್ನು ಪ್ರಶ್ನಿಸಿದರು. ‘ಎಡಿಎಲ್‍ಆರ್ ಇನ್ನೂ ಕೂಡ ತನಗೆ ವರದಿ ನೀಡಿಲ್ಲ-ನಾನೇನು ಮಾಡ್ಲಿಕಾಗುತ್ತೆ’ ಎಂದು ಆಯುಕ್ತೆ ಶುಭ ಉತ್ತರಿಸಿದರು. ಈ ವಿಚಾರ ಸಭೆಯಲ್ಲಿ ಕೆಲಹೊತ್ತು ಗದ್ದಲ ಸೃಷ್ಟಿಸಿತ್ತು. ಸದಸ್ಯರಾದ ಉಸ್ಮಾನ್ ಹಾಗೂ ಕೆ.ಎಂ. ಗಣೇಶ್ ಮಾತನಾಡಿ, ನೀರು ಹರಿಯುವ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದರೆ ಅದನ್ನು ಸಂಬಂಧಿಸಿದವರು ಬಿಟ್ಟು ಕೊಡಬೇಕಾಗುತ್ತದೆ ಎಂದರು. ಅಲ್ಲಿರುವ ಕೆರೆಗೆ ಮಣ್ಣು ಹಾಕಿ ಮುಚ್ಚಲಾಗಿದೆ. ಅದನ್ನು ತಡೆಯಲು ಯಾರಿಂದಲೂ ಆಗಲಿಲ್ಲ. ಇದೀಗ ಕಡಂಗ ಒತ್ತುವರಿ ಮಾಡಿರುವದಾಗಿ ಅದನ್ನೇ ಬೊಟ್ಟು ಮಾಡಲಾಗುತ್ತಿದೆ ಎಂದು ಉಸ್ಮಾನ್ ಹರಿಹಾಯ್ದರು.

ಸದಸ್ಯ ಚುಮ್ಮಿ ದೇವಯ್ಯ ಮಾತನಾಡಿ, ಕುಡಿಯುವ ನೀರಿನ ವಿಚಾರದಲ್ಲಿ ರಾಜಕೀಯ ಬೇಡ. ನೀರಿನ ಮೂಲಕ್ಕೆ ಧಕ್ಕೆಯಾದರೆ ನಗರಸಭೆ ಅದನ್ನು ತಡೆಯಲೇ ಬೇಕಾಗುತ್ತದೆ ಎಂದರು. ಜಲಮೂಲ ಎಲ್ಲರಿಗೂ ಅಗತ್ಯವಾಗಿ ಬೇಕಾಗಿದ್ದು, ಅದಕ್ಕೆ ಧಕ್ಕೆ ತರುವವರ ಬಗ್ಗೆ ಮುಲಾಜಿಲ್ಲದೆ ಕ್ರಮಕೈಗೊಳ್ಳ ಬೇಕೆಂದರು. ಜಲಮೂಲದ ರಕ್ಷಣೆಗೆ ನಗರಸಭೆಯ ಮೊದಲ ಆದ್ಯತೆಯಾಗಬೇಕೆಂದು ಸದಸ್ಯೆ ಅನಿತಾ ಪೂವಯ್ಯ ಒತ್ತಾಯಿಸಿದರು.

3 ತಿಂಗಳಿಂದ ಎಲ್ಲಿದ್ರಿ?

ಸದಸ್ಯ ಅಮೀನ್ ಮೊಯ್ಸಿನ್ ಮಾತನಾಡಿ, 3 ತಿಂಗಳಿನಿಂದ ಅಲ್ಲಿ ಮಣ್ಣು ತಂದು ಸುರಿಯುವಾಗ ಸದಸ್ಯರಾದ ಕೆ.ಎಸ್. ರಮೇಶ್, ಸಂಗೀತ, ಚುಮ್ಮಿ ದೇವಯ್ಯ, ಪೀಟರ್ ಇವರುಗಳು ಎಲ್ಲಿ ಹೋಗಿದ್ದರು. ನಗರಸಭೆಯಿಂದ ಸುರಯ್ಯ ಅವರ ಜಾಗದ ಬೇಲಿ ತೆರವು ಮಾಡುವಾಗ ಕಾನೂನು ಪಾಲಿಸಲಾಗಿದೆಯೆ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಕೆ.ಎಸ್. ರಮೇಶ್, ಸಂಗೀತ, ಸಂಪಿಕೆ ಕಟ್ಟೆ ಜಲಮೂಲಕ್ಕೆ ಮಣ್ಣು ತಂದು ಸುರಿಯುತ್ತಿರುವ ಬಗ್ಗೆ ಈ ಹಿಂದೆ ನಗರಸಭೆ ಅಧಿಕಾರಿಗಳಿಗೆ ದೂರು ನೀಡಲಾಗಿತ್ತು. ಆದರೆ ಪ್ರಯೋಜನವಾಗಲಿಲ್ಲ. ಈ ಬಗ್ಗೆ ಮಾಹಿತಿಯಿಲ್ಲದೆ ಪ್ರಚಾರಕ್ಕಾಗಿ ಯಾರನ್ನೋ ಓಲೈಸಲು ಆರೋಪ ಮಾಡುವದು ಸರಿಯಲ್ಲ ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅಮೀನ್ ಮೊಯ್ಸಿನ್ ‘ನಾನು ಪ್ರಚಾರ ಪಡೆಯುವದಾದರೆ ನನಗೆ ನಗರಸಭೆಯೆ ಆಗಬೇಕೆಂದಿಲ್ಲ. ಪ್ರಚಾರಕ್ಕಾಗಿ ಮಾತನಾಡುವವರು ನೀವು ಎಂದು ಸಮರ್ಥಿಸಿಕೊಂಡರು.

ನಿಮ್ಮ ನ್ಯಾಯ ನೀತಿಯ ಬಗ್ಗೆ ನಮಗೆ ಗೊತ್ತು ಎಂದು ಕೆ.ಎಸ್. ರಮೇಶ್ ಕುಟುಕಿದರು. ಕೂಟುಹೊಳೆಯಲ್ಲಿ ಜಾಗ ಒತ್ತುವರಿ ಆಗುತ್ತಿದ್ದು, ಅದನ್ನು ತೆರವುಗೊಳಿಸಿ ನಿಮ್ಮ ಅಧಿಕಾರ ಚಲಾಯಿಸಿ ಅಧ್ಯಕ್ಷರೇ ಎಂದು ರಮೇಶ್ ಹೇಳಿದರು.

ಒತ್ತುವರಿ ಕ್ರಮ ಮಾಜಿ ಪುರಸಭಾ ಅಧ್ಯಕ್ಷ ರೊಬ್ಬರು ಅವರು ಸರ್ವೆ ನಂ. 512/4ರಲ್ಲಿ ಜಾಗ ಖರೀದಿಸಿ ಬಡಾವಣೆ ಮಾಡಿಸಿದ ಸೈಟ್ ಪಾಕಿರ್ಂಗ್ ರಸ್ತೆಗೆ ಜಾಗವನ್ನು ನಗರಸಭೆಗೆ ಬಿಟ್ಟುಕೊಟ್ಟಿಲ್ಲ. ಈ ಬಗ್ಗೆ ಕ್ರಮಕೈಗೊಳ್ಳಬೇಕು. ನಗರಸಭಾ ಸದಸ್ಯ ನಂದಕುಮಾರ್ ಅವರು ಜಾಗ ಒತ್ತುವರಿ ಮಾಡಿಕೊಂಡಿದ್ದು, ದಾಖಲಾತಿ ನಮ್ಮ ಬಳಿ ಇದೆ. ಇದರ ಬಗ್ಗೆ ಕ್ರಮಕೈಗೊಳ್ಳಬೇಕೆಂದು ಬಿಜೆಪಿ ಸದಸ್ಯರುಗಳಾದ ರಮೇಶ್, ಉಣ್ಣಿಕೃಷ್ಣ, ಪಿ.ಡಿ. ಪೊನ್ನಪ್ಪ ಆಗ್ರಹಿಸಿದರು.ಮಾರುಕಟ್ಟೆಯಲ್ಲಿ ಹರಾಜು ಮೂಲಕ ಅಂಗಡಿ ಪಡೆಯುವವರು ನಗರಸಭೆಗೆ ಲಕ್ಷಾಂತರ ರೂ. ಪಾವತಿಸುತ್ತಾರೆ. ಆದರೆ ಖಾಸಗಿಯವರು ಕೇವಲ 15-20 ಸಾವಿರ ಮಾತ್ರ ಪಾವತಿಸುತ್ತಿದ್ದಾರೆ. ಆದ್ದರಿಂದ ಖಾಸಗಿಯಾಗಿ ಕುರಿ ಹಾಗೂ ಕೋಳಿ ಮಾಂಸ ಮಾರಾಟಗಾರರಿಗೆ ವರ್ಷಕ್ಕೆ 30 ಸಾವಿರ ರೂ.ಗಳನ್ನು ಪರವಾನಗಿ ಶುಲ್ಕವಾಗಿ ವಿಧಿಸಬೇಕೆಂದು ಸದಸ್ಯ ಉದಯಕುಮಾರ್ ಹೇಳಿದರು. 50 ಸಾವಿರ ನಿಗದಿ ಮಾಡುವ ಬಗ್ಗೆ ಉಪಾಧ್ಯಕ್ಷ ಪ್ರಕಾಶ್ ಪ್ರಸ್ತಾಪಿಸಿದರು.ನಗರಸಭೆಗೆ ದೂರು ನೀಡಿದರೆ ಸ್ಪಂದನ ಸಿಗುವದೇ ಇಲ್ಲ ಎಂದು ಸದಸ್ಯ ಪೀಟರ್ ಅಸಮಾಧಾನ ವ್ಯಕ್ತಪಡಿಸಿದರೆ, ಕಮಿಷನರ್ ಅವರು ಸದಸ್ಯರ ದೂರವಾಣಿ ಕರೆಗಳಿಗೆ ಸ್ಪಂದಿಸುವಂತೆ ಸವಿತಾ ರಾಕೇಶ್ ಮನವಿ ಮಾಡಿದರು