ಮಡಿಕೇರಿ, ಏ. 25: ಕೊಡಗು ಹೆಗ್ಗಡೆ ವಿದ್ಯಾಭಿವೃದ್ಧಿ ಸಂಘ ಮತ್ತು ಸಮಾಜದ ವತಿಯಿಂದ ಏ. 29 ರಿಂದ ಮೇ 1 ರವರೆಗೆ ಮೂರ್ನಾಡು ವಿದ್ಯಾಸಂಸ್ಥೆಯ ಮೈದಾನದಲ್ಲಿ ಹೆಗ್ಗಡೆ ಸಮಾಜದ 16ನೇ ವರ್ಷದ ಕ್ರೀಡಾಕೂಟ ನಡೆಯಲಿದೆ. ಪ್ರಶಸ್ತಿಗಾಗಿ 26 ತಂಡಗಳು ಪೈಪೋಟಿ ನಡೆಸಲಿವೆ ಎಂದು ಸಮಾಜದ ಪ್ರಮುಖರು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕೊಡಗು ಹೆಗ್ಗಡೆ ಸಮಾಜದ ಅಧ್ಯಕ್ಷರಾದ ಪಡಿಞÁರಂಡ ಜಿ. ಅಯ್ಯಪ್ಪ, ಆರಂಭಿಕ ದಿನದಂದು ಬೆಳಗ್ಗೆ 10 ಗಂಟೆಗೆ ನಡೆಯುವ ಸಮಾರಂಭವನ್ನು ಕರ್ನಾಟಕ ರಾಜ್ಯ ಅಗ್ನಿ ಶಾಮಕ ದಳದ ನಿರ್ದೇಶಕರಾದ ಕೊಪ್ಪಡ ಯು. ರಮೇಶ್ ಉದ್ಘಾಟಿಸಲಿದ್ದು,. ಕ್ರೀಡಾಕೂಟಕ್ಕೆ ನಿವೃತ್ತ ಎಸ್‍ಪಿ ಪಂದಿಕಂಡ ಎಂ. ಪೆಮ್ಮಯ್ಯ ಚಾಲನೆ ನೀಡಲಿದ್ದಾರೆ ಎಂದರು.

ಸಮಾರಂಭದಲ್ಲಿ ರಾಜ್ಯ ಗುಪ್ತವಾರ್ತೆಯ ಸಬ್‍ಇನ್ಸ್‍ಪ್ಪೆಕ್ಟರ್ ಪಂದಿಕಂಡ ಪ್ರಕಾಶ್ ಸುಬ್ಬಯ್ಯ, ಹೆಗ್ಗಡೆ ಸಮಾಜದ ಶತಾಯುಷಿ ಅಜ್ಜೆಟ್ಟೀರ ಅಯ್ಯಪ್ಪ, ಪದವಿ ಪೂರ್ವ ಶಿಕ್ಷನ ಇಲಾಖೆಯ ರಾಜ್ಯ ಮಟ್ಟದ ಮತ್ತು ದಕ್ಷಿಣ ವಲಯದ 18 ವರ್ಷದೊಳಗಿನ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ವಿಜೇತ ಕಾಕೆÉೀರ ಪ್ರಜ್ವಲ್ ಮಂದಣ್ಣ ಅವರನ್ನು ಸನ್ಮಾನಿಸಿ ಗೌರವಿಸಲಾಗುತ್ತದೆ. ಮೇ 1 ರಂದು ಮಧ್ಯಾಹ್ನ 2.30ಕ್ಕೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ತಾವೇ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಡಾ. ತಂಬಾಂಡ ಪಿ. ಮೋಹನ್, ಮದ್ದೂರು ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಚಳಿಯಂಡ ಸವಿ, ಹಾನರೆರಿ ಕ್ಯಾಪ್ಟನ್ ತಂಬಾಂಡ ನಾಣಯ್ಯ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಕೊಡಗು ಹೆಗ್ಗಡೆ ಸಮಾಜದ ಉಪಾಧ್ಯಕ್ಷ ಕೊರಕುಟ್ಟೀರ ಸರಾ ಚಂಗಪ್ಪ ಮಾತನಾಡಿ, ಕ್ರೀಡಾಕೂಟದ ಹಿರಿಯರ ವಿಭಾಗದ ಕ್ರಿಕೆಟ್ ಪಂದ್ಯಾವಳಿಯಲ್ಲಿ 26 ತಂಡಗಳು ಪಾಲ್ಗೊಳ್ಳಲಿವೆ ಎಂದರು. ಎಸ್‍ಎಸ್‍ಎಲ್‍ಸಿ ಒಳಗಿನ ಕಿರಿಯರ ವಿಭಾಗದಲ್ಲಿ 10 ಮತ್ತು ಮಹಿಳೆಯರಿಗೆ ವಿಶೇಷವಾಗಿ ಏರ್ಪಡಿಸಲಾಗಿರುವ ಥ್ರೋಬಾಲ್ ಪಂದ್ಯಾವಳಿಯಲ್ಲಿ 8 ತಂಡಗಳು ಪಾಲ್ಗೊಳ್ಳಲಿವೆ. ಥ್ರೋಬಾಲ್ ಏ.30 ಮತ್ತು ಮೇ1 ರಂದು ನಡೆಯಲಿದೆ ಎಂದು ಮಾಹಿತಿ ನೀಡಿದರು.

ಹೆಗ್ಗಡೆ ಸಮಾಜದ ಸಂಘಟನೆಯ ಹಿನ್ನೆಲೆಯಲ್ಲಿ ಕ್ರೀಡಾಕೂಟವನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಜಿಲ್ಲೆಯಲ್ಲಿ ಹೆಗ್ಗಡೆ ಸಮೂಹಕ್ಕೆ ಸೇರಿದ 62 ಕುಟುಂಬಗಳಿವೆ. ಕಡಿಮೆ ಸಂಖ್ಯೆಯಲ್ಲಿರುವ ಎಲ್ಲ ಕುಟುಂಬಗಳು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವದಕ್ಕೆ ಅನುಕೂಲವಾಗಲೆಂದು ಜಿಲ್ಲೆಯ 10 ವಲಯ ಮತ್ತು ಜಿಲ್ಲೆಯ ಹೊರ ಭಾಗದ ಒಂದು ವಿಭಾಗ ಸೇರಿದಂತೆ ಒಟ್ಟು 11 ವಿಭಾಗಗಳಿಂದ ತಂಡಗಳನ್ನು ಆಹ್ವಾನಿಸಿ ಪಂದ್ಯಾವಳಿಯನ್ನು ಆಯೋಜಿಸಲಾಗುತ್ತಿದೆ. ಒಂದು ವಿಭಾಗದಿಂದ ಒಂದಕ್ಕಿಂತ ಹೆಚ್ಚಿನ ತಂಡಗಳನ್ನು ಕಳುಹಿಸಲು ಅವಕಾಶವಿದೆ ಎಂದರು.

ಅನುದಾನದ ಭರವಸೆ

ಹೆಗ್ಗಡೆ ಸಮಾಜದ ಕ್ರೀಡಾಕೂಟದ ಆಯೋಜನೆಗೆ ಅಗತ್ಯ ಸಹಕಾರ ನೀಡುವಂತೆ ಎಂಎಲ್‍ಸಿ ವೀಣಾ ಅಚ್ಚಯ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಟಿ.ಪಿ. ರಮೇಶ್ ಅವರ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿಕೊಳ್ಳಲಾಗಿದೆ. ರೂ. 5 ಲಕ್ಷ ನೆರವು ನೀಡುವ ಸಕಾರಾತ್ಮಕವಾದ ಭರವಸೆ ದೊರಕಿರುವದಾಗಿ ಸರಾ ಚಂಗಪ್ಪ ತಿಳಿಸಿದರು. ಕೊಡಗು ಹೆಗ್ಗಡೆ ಸಮಾಜದ ಈಗಿನ ಆಡಳಿತ ಮಂಡಳಿಯು ಸಮಾಜ ಬಾಂಧವರು ಮತ್ತು ದಾನಿಗಳಿಂದ ದೇಣಿಗೆಯನ್ನು ಸಂಗ್ರಹಿಸುವ ಮೂಲಕ ಮೂರು ವರ್ಷಗಳ ಹಿಂದೆ ವೀರಾಜಪೇಟೆ ತಾಲೂಕಿನ ಬಿಟ್ಟಂಗಾಲದ ನಾಂಗಾಲದಲ್ಲಿ 1.16 ಕೋಟಿ ರೂ. ವೆಚ್ಚದಲ್ಲಿ ಸಮಾಜದ ಭವನವನ್ನು ನಿರ್ಮಿಸಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಮಾಜದ ಕಾರ್ಯದರ್ಶಿ ಚಂಗಚಂಡ ಕಟ್ಟಿ ಕಾವೇರಪ್ಪ, ಕ್ರೀಡಾಸಮಿತಿ ಸಂಚಾಲಕರಾದ ಪಡಿಞÁರಂಡ ಪ್ರಭು ಕುಮಾರ್ ಹಾಗೂ ನಿರ್ದೇಶಕರಾದ ಚರ್ಮಂಡ ಅಪ್ಪುಣು ಪೂವಯ್ಯ ಉಪಸ್ಥಿತರಿದ್ದರು.