ಮಡಿಕೇರಿ, ಏ. 26: ಜಿಲ್ಲೆಯನ್ನು ತಂಬಾಕು ನಿಯಂತ್ರಣ ಕಾಯ್ದೆಯ ಅನುಷ್ಠಾನದಲ್ಲಿ ಅತ್ಯುತ್ತಮ ಜಿಲ್ಲೆಯಾಗಿಸುವ ನಿಟ್ಟಿನಲ್ಲಿ, ಪೊಲೀಸ್ ಅಧಿಕಾರಿಗಳಿಗೆ ನಗರದಲ್ಲಿಂದು ತರಬೇತಿ ಕಾರ್ಯಾಗಾರ ನಡೆಸಲಾಯಿತು. ಪೊಲೀಸ್ ಮೈತ್ರಿ ಸಮುದಾಯ ಭವನದಲ್ಲಿಂದು ನಡೆದ ತರಬೇತಿ ಕಾರ್ಯಾಗಾರದಲ್ಲಿ ತಾವು ಕಾರ್ಯನಿರ್ವಹಿಸುತ್ತಿರುವ ವಲಯದಲ್ಲಿ ಕೋಟ್ಪಾ-2003 (ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ ನಿಯಂತ್ರಣ ಕಾಯ್ದೆ) ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಎಲ್ಲಾ ಪೊಲೀಸ್ ಠಾಣೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸಲಹೆ-ಸೂಚನೆ ನೀಡಲಾಯಿತು.

ಈ ಸಂದರ್ಭ ಜಿಲ್ಲಾ ಪೊಲೀಸ್ ಅಧೀಕ್ಷಕ ಹಾಗೂ ಕೋಟ್ಪಾ ಕಾಯ್ದೆಯ ಅನುಷ್ಠಾನದ ನೋಡಲ್ ಅಧಿಕಾರಿಯೂ ಆದ ಪಿ. ರಾಜೇಂದ್ರ ಪ್ರಸಾದ್ ಮಾತನಾಡಿ, ಯುವಜನತೆ ತಂಬಾಕು ಚಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ದಾಸರಾಗುತ್ತಿದ್ದಾರೆ, ಅದರಲ್ಲೂ ಶಾಲಾ ಕಾಲೇಜುಗಳ ಮುಂದೆ ಅಕ್ರಮ ಮಾರಾಟ ಹೆಚ್ಚುತ್ತಿದ್ದು ಇವುಗಳ ಮೇಲೆ ಕಡಿವಾಣ ಹಾಕುವದು ಅತ್ಯವಶ್ಯಕ ವಾಗಿದೆ. ಕೇಂದ್ರ ಸರ್ಕಾರದ ಸೂಚನೆ ಹಿನ್ನೆಲೆ ಕೋಟ್ಪಾ ಕಾಯ್ದೆಯನ್ನು ಉಲ್ಲಂಘಿಸುವ ಪ್ರಕರಣಗಳನ್ನು ಪೊಲೀಸ್ ಪ್ರಕರಣಗಳ ತಿಂಗಳ ಪಟ್ಟಿಯಲ್ಲಿ ಸೇರ್ಪಡೆ ಮಾಡುವ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದರು. ಅದರಂತೆ ಬಹುತೇಕ ಜಿಲ್ಲೆಗಳು ಮತ್ತು ವಲಯಗಳಲ್ಲಿ ಈ ಸಂಬಂಧ ಪೊಲೀಸ್ ಇಲಾಖೆ ಕಾರ್ಯ ಪ್ರವೃತ್ತವಾಗಿದೆ ಎಂದರು.

ನಮ್ಮ ಜಿಲ್ಲೆಯನ್ನು ಸದ್ಯದಲ್ಲೇ ಅತ್ಯುತ್ತಮ ಕೋಟ್ಪಾ ಕಾಯ್ದೆ ಅನುಷ್ಠಾನಿತ ಜಿಲ್ಲೆಯನ್ನಾಗಿ ಮಾಡುವ ಉದ್ದೇಶ ಹೊಂದಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾಯ್ದೆಯ ಸಮರ್ಪಕ ಜಾರಿಗೆ ಶ್ರಮವಹಿಸಬೇಕೆಂದು ಆ ಮೂಲಕ ಸಾರ್ವಜನಿಕರ ಆರೋಗ್ಯ ರಕ್ಷಣೆಯಲ್ಲಿ

(ಮೊದಲ ಪುಟದಿಂದ) ಪೊಲೀಸರು ತಮ್ಮ ಸಾಮಾಜಿಕ ಬದ್ಧತೆ ತೋರಬೇಕೆಂದು ತಿಳಿಸಿದರು. ಕೋಟ್ಪಾ ಕಾಯ್ದೆಯಲ್ಲಿನ ಪ್ರಮುಖ ನಿಯಮಗಳ ಮಹತ್ವ ಮತ್ತು ಅವುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಬಗ್ಗೆ ಪೊಲೀಸರಿಗೆ ಅರಿವು ಮೂಡಿಸುವ ಉದ್ದೇಶ ಈ ಕಾರ್ಯಾಗಾರದ್ದಾಗಿದೆ ಎಂದು ತಿಳಿಸಿದರು.

ಕಾರ್ಯಾಗಾರದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಓ.ಆರ್. ಶ್ರೀರಂಗಪ್ಪ ಮಾತನಾಡಿ, ಅಪರ ಜಿಲ್ಲಾಧಿಕಾರಿಗಳ ಸೂಚನೆಯನ್ವಯ ಪೊಲೀಸ್ ಹಾಗೂ ಆರೋಗ್ಯ ಇಲಾಖೆಗಳ ನೇತೃತ್ವದಲ್ಲಿ ಜಿಲ್ಲೆಯ ಪ್ರಮುಖ ಇಲಾಖೆಗಳ ಸಹಯೋಗದೊಂದಿಗೆ ಮೇ 8 ರಿಂದ ನಿಯಮಿತವಾಗಿ ಜಿಲ್ಲೆಯಾದÀ್ಯಂತ ವಿಶೇಷ ಕಾರ್ಯಾಚರಣೆಯನ್ನು ನಡೆಸಲು ಉದ್ದೇಶಿಸಿದ್ದು, ಈ ಕಾರ್ಯಾಚರಣೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಇನ್‍ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್‍ನ ಡಾ. ಜಾನ್ ಕೆನಡಿ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಡಾ. ಹನುಮಂತ ರಾಯಪ್ಪ, ಕೋಟ್ಪಾ ಕಾಯ್ದೆಯ ಬಗ್ಗೆ ಹಾಗೂ ತಂಬಾಕಿನಿಂದ ಉಂಟಾಗುವ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ತಯಾರಿಸಲಾದ ವಿಶೇಷ ದೃಶ್ಯ-ಶ್ರಾವ್ಯ ಪ್ರಾತ್ಯಕ್ಷಿಕೆಯ ಮೂಲಕ ಕಾರ್ಯಾಗಾರದಲ್ಲಿ ಅರಿವು ಮೂಡಿಸಿದರು.

ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಭಾರತೀಯ ವೈದ್ಯಕೀಯ ಪರಿಷತ್‍ನ ಕೊಡಗು ಘಟಕದ ಅಧ್ಯಕ್ಷ ಡಾ. ಮೋಹನ್ ಅಪ್ಪಾಜಿ ತಂಬಾಕಿನ ಸೇವನೆಯಿಂದುಂಟಾಗುವ ದುಷ್ಪರಿಣಾಮಗಳ ಕುರಿತು ಉಪನ್ಯಾಸ ನೀಡಿದರು.

=ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಪಾಲನೆಯಾಗುತ್ತಿರುವದನ್ನು ಖಾತ್ರಿ ಮಾಡುವದು. ಉಲ್ಲಂಘನೆ ಕಂಡುಬಂದಲ್ಲಿ ರೂ. 200ರ ವರೆಗೂ ದಂಡ ಹಾಕುವದಲ್ಲದೇ ಸೂಕ್ತ ಕ್ರಮಕೈಗೊಳ್ಳುವದು.

=ಎಲ್ಲಾ ವಿಧದ ತಂಬಾಕು ಉತ್ಪನ್ನಗಳ ಜಾಹೀರಾತುಗಳು ಕಾನೂನುಬಾಹಿರವಾಗಿದ್ದು, ಈ ಜಾಹೀರಾತುಗಳ ಪ್ರದರ್ಶಕರ ವಿರುದ್ಧ ಕ್ರಮಕೈಗೊಳ್ಳುವದು.

=ಶಾಲಾ ಕಾಲೇಜುಗಳ ಆವರಣದ 100 ಗಜಗಳ ಸುತ್ತಮುತ್ತಲ ಪ್ರದೇಶದಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಹಾಗೂ ಸೇವನೆ ಕಾನೂನು ಬಾಹಿರವಾಗಿದ್ದು, ಉಲ್ಲಂಘನೆ ಕಂಡುಬಂದಲ್ಲಿ ಅಂತಹ ಅಂಗಡಿಗಳನ್ನು ತೆರವುಗೊಳಿಸಿ ಮಾಲೀಕರ ಮೇಲೆ ಸೂಕ್ತ ಕ್ರಮ ಜರುಗಿಸುವದು.

=ಶಾಸನ ವಿಧಿಸಿದ ಚಿತ್ರ ಸಹಿತ ಎಚ್ಚರಿಕೆ ಮುದ್ರಣ ಮಾಡಿರದ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಕಡಿವಾಣ ಹಾಕುವದು.

=ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳ ಹಾಗೂ ಪ್ರತಿ ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿ ಕೋಟ್ಪಾ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ನಿಯಮಿತವಾಗಿ ವಿಶೇಷ ಕಾರ್ಯಾಚರಣೆಯನ್ನು ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಜಾರಿಗೆ ತರುವದು.

ಜಿಲ್ಲೆಯು ಪ್ರಸಿದ್ಧ ಪ್ರವಾಸಿ ತಾಣಗಳನ್ನು ಹೊಂದಿದ್ದು, ಇಂತಹ ಪ್ರಮುಖ ಸ್ಥಳಗಳನ್ನು ಕಾನೂನಿನನ್ವಯ ಧೂಮಪಾನ ಮುಕ್ತ ವಲಯಗಳಾಗಿ ಪರಿವರ್ತಿಸುವದು. ಪೊಲೀಸ್ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಬೆಂಗಳೂರಿನ ಇನ್‍ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ ಈ ಕಾರ್ಯಾಗಾರವನ್ನು ಹಮ್ಮಿಕೊಂಡಿತ್ತು. ಇಂದು ನಡೆದ ಕಾರ್ಯಾಗಾರದಲ್ಲಿ ಕೊಡಗು ಜಿಲ್ಲಾ ವ್ಯಾಪ್ತಿಗೆ ಒಳಪಡುವ 35ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.