ಸುಂಟಿಕೊಪ್ಪ, ಏ. 26: ಒಬ್ಬ ವ್ಯಕ್ತಿಯ ಮುಖವನ್ನು ನೋಡಿ ಮುಗುಳ್ನಗಬೇಕೇ ವಿನಹ, ಅಪಹಾಸ್ಯ ನಗುವನ್ನು ಬೀರಿ ಬೇಸರಪಡುವಂತೆ ಮಾಡಬೇಡಿ ಎಂದು ‘ಶಕ್ತಿ’ ಸಲಹಾ ಸಂಪಾದಕ ಬಿ.ಜಿ. ಅನಂತಶಯನ ಹೇಳಿದರು.

ಫೇಸ್‍ಬುಕ್‍ನಲ್ಲಿ ಆರಂಭಿಸಿದ ‘ನಮ್ಮ ಸುಂಟಿಕೊಪ್ಪ ಬಳಗ’ದ ಪರಿಚಯ ಮತ್ತು ನೂರನೇ ದಿನದ ಸಂಭ್ರವದ ಅಂಗವಾಗಿ ಗುಂಪಿನ ಲಾಂಛನವನ್ನು ಮಂಗಳವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಮನುಷ್ಯನು ಕ್ರಿಯಾತ್ಮಕವಾಗಿರಬೇಕು. ಇಲ್ಲವಾದಲ್ಲಿ ಸಮಾಜವು ಬೇರೆ ದೃಷ್ಟಿಕೋನದಲ್ಲಿ ಗುರುತಿಸುತ್ತದೆ ಎಂದರಲ್ಲದೆ, ಇದೊಂದು ಅಪರೂಪದ ಕಾರ್ಯಕ್ರಮವಾಗಿದ್ದು, ಎಲ್ಲಿಯೂ ಈ ರೀತಿಯಾದ ವೈವಿಧ್ಯಮಯ ಕಾರ್ಯಕ್ರಮವು ನಡೆದಿರುವದಕ್ಕೆ ಸಾಧ್ಯವಿಲ್ಲ ಎಂದರು.

ಇಂತಹ ಗುಂಪನ್ನು ಮಾಡಿರುವದರಿಂದ ವಿದೇಶದಲ್ಲಿರುವ ಈ ಊರಿನವರು ಇಲ್ಲಿ ನಡೆಯುತ್ತಿರುವ ದಿನನಿತ್ಯದ ವಿಚಾರ ವಿನಿಮಯ, ಕಾರ್ಯಕ್ರಮಗಳು, ಸಂಸ್ಕøತಿಯನ್ನು ತಿಳಿಯಲು ಸಹಾಯಕವಾಗಲಿದೆ. ಆ ನಿಟ್ಟಿನಲ್ಲಿ ಈ ಬಳಗ ಟ್ರಸ್ಟ್ ಆರಂಭಿಸಿ ಸಮಾಜದ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸಬೇಕಾಗಿದೆ. ಅದಕ್ಕೆ ಸಂಪೂರ್ಣವಾದ ಸಹಕಾರ ನೀಡುವದಾಗಿ ಭರವಸೆ ನೀಡಿದರು.

ಹಿರಿಯರಾದ ಜಿ.ಎಲ್. ನಾಗರಾಜು ಮಾತನಾಡಿ, ಸುಂಟಿಕೊಪ್ಪ ತನ್ನದೇ ಆದ ಪರಂಪರೆಯನ್ನು ಹೊಂದಿದೆ. ತನ್ನದೇ ಆದ ಸಾಮರಸ್ಯ, ಸಂಸ್ಕøತಿಯನ್ನು ಹೊಂದಿದೆ, ಅದನ್ನು ಈ ಬಳಗ ಉಳಿಸಿ ಬೆಳೆಸುವಂತಹ ಕೆಲಸವನ್ನು ಮಾಡುವದಲ್ಲದೇ ಸಮಾಜಕ್ಕೆ ಕಂಟಕವಾಗಿರುವವರನ್ನು ಬದಿಗೊತ್ತಿ ಸಮಾಜದ ಏಳಿಗೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಈ ಸಂದರ್ಭ ನಮ್ಮ ಸುಂಟಿಕೊಪ್ಪ ಬಳಗದ ಡೇನಿಸ್ ಡಿಸೋಜ, ಜಾಯ್ದ್ ಅಹಮ್ಮದ್, ಕೆ.ಎಸ್.ಅನಿಲ್ ಕುಮಾರ್, ರಂಜಿತ್ ಕುಮಾರ್, ರಾಜೀವ್ ಕುಮಾರ್, ತಾ.ಪಂ. ಸದಸ್ಯೆ ಓಡಿಯಪ್ಪನ ವಿಮಲಾವತಿ, ಹಿರಿಯರಾದ ಜೆ.ಎಲ್. ರಮೇಶ್, ವಹೀದ್ ಜಾನ್, ಕೆ.ಡಿ. ರಾಮಯ್ಯ, ಸುದೇಶ್ ತಮ್ಮ ಸಲಹೆ ಸೂಚನೆಗಳನ್ನು ಹಂಚಿಕೊಂಡರು.

ಕೊನೆಯಲ್ಲಿ ಹಾ.ತಿ. ಜಯಪ್ರಕಾಶ್ ತಮ್ಮ ಚುಟುಕು ಸಾಹಿತ್ಯ, ಹನಿಗವನವನ್ನು ವಾಚಿಸುವ ಮೂಲಕ ನೆರೆದವರನ್ನು ರಂಜಿಸಿದರು.