ಕುಶಾಲನಗರ, ಏ. 25: ಕಳೆದ ಹಲವು ವರ್ಷಗಳಿಂದ ಆಮೆಗತಿ ಯಲ್ಲಿ ಸಾಗುತ್ತಿರುವ ಕುಶಾಲನಗರದ ಕಲಾಭವನ ಕಟ್ಟಡಕ್ಕೆ ಕುಶಾಲನಗರ ಕುಡಾ ಅಧ್ಯಕ್ಷ ಬಿ.ಜಿ. ಮಂಜುನಾಥ್ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿದರು.
ಕಾಮಗಾರಿ ಆರಂಭವಾಗಿ 5 ವರ್ಷ ಕಳೆದರೂ ಪೂರ್ಣಗೊಳ್ಳದ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ ಅವರು ಸ್ಥಳದಲ್ಲಿದ್ದ ಲೋಕೋಪ ಯೋಗಿ ಇಲಾಖೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಪ್ರಾಧಿಕಾರದ ವ್ಯಾಪ್ತಿಯಲ್ಲಿ ಯಾವದೇ ಕಟ್ಟಡ ನಿರ್ಮಿಸ ಬೇಕಿದ್ದರೂ ಪ್ರಾಧಿಕಾರದ ಅನುಮೋದನೆ ಪಡೆದುಕೊಳ್ಳಬೇಕು. ಆದರೆ ಕಲಾಭವನ ಕಟ್ಟಡ ಕಾಮಗಾರಿಗೆ ಯಾವದೇ ರೀತಿಯ ಅನುಮೋದನೆ ಪಡೆದುಕೊಳ್ಳದೆ ನಿರ್ಮಿಸಲಾಗುತ್ತಿದೆ. ಈ ಪ್ರದೇಶಕ್ಕೆ ಪೂರಕವಲ್ಲದ ವಿನ್ಯಾಸವನ್ನು ಕಲಾ ಭವನಕ್ಕೆ ಬಳಸಿಕೊಳ್ಳಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪಿಡಬ್ಲ್ಯುಡಿ ಅಧಿಕಾರಿ ರಘು, ಕಾಮಗಾರಿ ವೇಳೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿದೆ. ವೈಜ್ಞಾನಿಕ ಮಾನದಂಡಗಳ ಅನ್ವಯವೇ ಕಟ್ಟಡ ನಿರ್ಮಿಸಲಾಗುತ್ತಿದೆ. ಪಿಡಬ್ಲ್ಯುಡಿ ಗುಣಮಟ್ಟ ವಿಭಾಗದ ಅಧಿಕಾರಿಗಳೇ ಪ್ರಮಾಣಿಕರಿಸಿದ್ದಾರೆ ಎಂದರು.
ಈ ಸಂದರ್ಭ ಸುದ್ದಿಗಾರ ರೊಂದಿಗೆ ಮಾತನಾಡಿದ ಕುಡಾ ಅಧ್ಯಕ್ಷರು ಕಲಾಭವನ ನಿರ್ಮಾಣ ವೇಳೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ತೋರಿಸಿದ್ದಾರೆ. ಅವರ ತಾತ್ಸರ ದಿಂದಾಗಿಯೇ ಕಾಮಗಾರಿ ವಿಳಂಬವಾಗಿದೆ ಎಂದರು.
ಈ ಸಂದರ್ಭ ಪಟ್ಟಣ ಪಂಚಾಯಿತಿ ಸದಸ್ಯ ಪ್ರಮೋದ್ ಮುತ್ತಪ್ಪ, ಮಾಜಿ ಸದಸ್ಯರಾದ ಅಬ್ದುಲ್ ಖಾದರ್, ಜೋಸೆಫ್ ವಿಕ್ಟರ್ ಸೋನ್ಸ್ ಹಾಗೂ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀಧರ್ ಇದ್ದರು.