ಸೋಮವಾರಪೇಟೆ,ಏ.25: ‘ಇದೇ ತನ್ನ ಕೊನೆಯ ಚುನಾವಣೆ ಎಂದು ಕಳೆದ ನಾಲ್ಕೈದು ಚುನಾವಣೆಗಳಲ್ಲಿ ಸ್ಪರ್ಧಿಸಿರುವ ಜೀವಿಜಯ ಅವರು, ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಟಿಕೇಟ್ ನೀಡಿದರೂ ಸಹ ಆ ಪಕ್ಷದಿಂದ ಸ್ಪರ್ಧಿಸುವದಿಲ್ಲ ಎಂದು ಘೋಷಿಸಲಿ’ ಎಂದು ಸೋಮವಾರಪೇಟೆ ಭಾಗದ ಕಾಂಗ್ರೆಸ್ ಮುಖಂಡರು ಸವಾಲು ಹಾಕಿದ್ದಾರೆ.
ಇದೇ ತಮ್ಮ ಕೊನೆಯ ಚುನಾವಣೆ ಎಂದು ಹೇಳಿಕೊಳ್ಳುತ್ತಾ ನಾಲ್ಕೈದು ಚುನಾವಣೆಗಳಲ್ಲಿ ಸ್ಪರ್ಧಿಸಿರುವ ಜೀವಿಜಯ ಅವರು, ಮುಂಬರುವ ಚುನಾವಣೆಯಲ್ಲೂ ಜೆಡಿಎಸ್‍ನಿಂದ ತಾನೇ ಅಭ್ಯರ್ಥಿ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ಜೆಡಿಎಸ್ ಪಕ್ಷದ ಕಾರ್ಯಕರ್ತರೇ ಜೀವಿಜಯ ಅವರು ಸ್ಪರ್ಧಿಸುವದಿಲ್ಲ, ಚುನಾವಣೆಗೆ ಶಕ್ತರಾಗಿಲ್ಲ ಎಂದು ಹೇಳುತ್ತಿದ್ದಾರೆ. ಆದರೂ ಸಹ ಜೀವಿಜಯ ಅವರು ಕಾಂಗ್ರೆಸ್‍ನಲ್ಲಿ ಗೊಂದಲ ಸೃಷ್ಟಿಸುವ ಹೇಳಿಕೆ ನೀಡುತ್ತಿದ್ದಾರೆ ಎಂದು ನಾಗೇಶ್ ಅಸಮಾಧಾನ ವ್ಯಕ್ತಪಡಿಸಿದರು.
ಕಾಂಗ್ರೆಸ್‍ನಿಂದ ಅಧಿಕಾರ ಅನುಭವಿಸಿ ಜೆಡಿಎಸ್ ಸೇರ್ಪಡೆಗೊಂಡ ಜೀವಿಜಯ ಅವರು ಇದೀಗ ಕಾಂಗ್ರೆಸ್ ಮುಖಂಡರನ್ನು ಸಂಪರ್ಕಿಸುತ್ತಿದ್ದು, ಟಿಕೇಟ್‍ಗೆ ಬೇಡಿಕೆ ಇಡುತ್ತಿದ್ದಾರೆ. ಒಂದೊಮ್ಮೆ ಜೀವಿಜಯ ಅವರು ಮರಳಿ ಕಾಂಗ್ರೆಸ್‍ಗೆ ಬಂದರೆ ಕಾರ್ಯಕರ್ತರ ವಿರೋಧ ಇದೆ ಎಂದು ನಾಗೇಶ್ ತಿಳಿಸಿದರು.
ಕಳೆದ ಸಾಲಿನಲ್ಲಿ ಸ್ಪರ್ಧಿಸಿದ್ದ ಕೆ.ಎಂ. ಲೋಕೇಶ್‍ಕುಮಾರ್ ಅವರೇ ಈ ಬಾರಿಯೂ ಮಡಿಕೇರಿ ಕ್ಷೇತ್ರದ ಅಭ್ಯರ್ಥಿಯಾಗಬೇಕೆಂಬ ಅಭಿಲಾಷೆ ಕಾರ್ಯಕರ್ತರಲ್ಲಿದೆ. ಪಕ್ಷದಲ್ಲಿ ಆಕಾಂಕ್ಷಿಗಳ ಪಟ್ಟಿ ಅಧಿಕವಿದ್ದು, ಹೈಕಮಾಂಡ್ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿದ್ದೇವೆ ಎಂದು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ವಿ.ಎ. ಲಾರೆನ್ಸ್ ಹೇಳಿದರು.
ಕ್ಷೇತ್ರದಲ್ಲಿ ಕಾಂಗ್ರೆಸ್ ಬಲಯುತವಾಗಿದೆ. ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಗಳು ಜನರಿಗೆ ತಲುಪಿವೆ. ಕೆ.ಎಂ. ಲೋಕೇಶ್ ಸ್ಪರ್ಧಿಸಿದರೆ ಗೆಲುವು ಸಾಧ್ಯವಾಗಲಿದೆ ಎಂದು ಗೋಷ್ಠಿಯಲ್ಲಿದ್ದ ತಾ.ಪಂ. ಸದಸ್ಯ ಬಿ.ಬಿ. ಸತೀಶ್ ಅಭಿಪ್ರಾಯಪಟ್ಟರು.
ಯಡವನಾಡು ಮತ್ತು ಅತ್ತೂರು ಪ್ರದೇಶವನ್ನು ಕಂದಾಯ ಗ್ರಾಮಕ್ಕೆ ಸೇರ್ಪಡೆಗೊಳಿಸಲು ಕೆ.ಎಂ. ಲೋಕೇಶ್ ಶ್ರಮಿಸಿದ್ದಾರೆ. ಚುನಾವಣೆ ಮುಗಿದ ನಾಲ್ಕು ವರ್ಷ ಹೊರಗೆ ಬಾರದ ಜೆಡಿಎಸ್ ಮುಖಂಡರು, ಚುನಾವಣೆಗೆ ವರ್ಷವಿರುವಾಗ ಹೊರಬಂದು ಸುಳ್ಳು ಆರೋಪ, ಪೊಳ್ಳು ಭರವಸೆ ನೀಡುತ್ತಿದ್ದಾರೆ. ಎಂದು ಕೊಡ್ಲಿಪೇಟೆ ಹೋಬಳಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜನಾರ್ದನ್ ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಅಮಾನತು ಆದೇಶವನ್ನು ವರಿಷ್ಠರು ವಾಪಸ್ ಪಡೆಯಲಿದ್ದು, ಮೇ ಮೊದಲನೇ ವಾರದಲ್ಲಿ ಸೋಮವಾರಪೇಟೆಯಲ್ಲಿ ಮಡಿಕೇರಿ ಕ್ಷೇತ್ರ ವ್ಯಾಪ್ತಿಯ ಕಾರ್ಯಕರ್ತರ ಬೃಹತ್ ಸಮಾವೇಶ ನಡೆಸಲಾಗುವದು ಎಂದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನಂದಕುಮಾರ್ ತಿಳಿಸಿದರು.
ಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಉದಯಶಂಕರ್, ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಉಪಸ್ಥಿತರಿದ್ದರು.