ಗೋಣಿಕೊಪ್ಪಲು, ಏ. 25: ಕಾಡಾನೆ ಧಾಳಿಗೆ ಹಸುವೊಂದು ಸಾವನ್ನಪ್ಪಿದ ಘಟನೆ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಳತ್ಮಾಡುವಿನಲ್ಲಿ ತಾ.24 ರಂದು ಬೆಳಗ್ಗಿನ ಜಾವ 5 ಗಂಟೆ ಸುಮಾರಿಗೆ ನಡೆದಿದೆ.ಕಳತ್ಮಾಡುವಿನ ಕತ್ರಿಕೊಲ್ಲಿ ಕಾಳಪ್ಪ (ಮಣಿ) ಎಂಬವರಿಗೆ ಸೇರಿದ ಹಸುವನ್ನು ಮನೆಯ ಮುಂಭಾಗದ ಬೇಲಿಗೆ ಕಟ್ಟಲಾಗಿದ್ದು, ಹಸುವಿಗೆ ನೆರಳು ಛಾವಣಿ ಅಳವಡಿಸಿದ್ದರು.ಸೋಮವಾರ ಬೆಳಿಗ್ಗೆ 5 ಗಂಟೆ ಸುಮಾರಿಗೆ ಆನೆಯು ಘೀಳಿಡುವ ಶಬ್ಧ ಹಾಗೂ ಹಸುವಿನ ಕೂಗು ಕಾಳಪ್ಪ ಅವರಿಗೆ ಕೇಳಿ ಬಂದಿದೆ. ಕಾಡಾನೆ ನಡೆದು ಬರುವ ಹಾದಿಗೆ ಹಸು ಅಡ್ಡಲಾದ ಹಿನ್ನೆಲೆ ತನ್ನ ಸೊಂಡಿಲಿನಿಂದ ಹಸುವನ್ನು ತಳ್ಳುವ ಪ್ರಯತ್ನ ಆನೆ ಮಾಡಿರಬಹುದು. ಇದೇ ಸಂದರ್ಭ ಹಸುವಿನ ಕೋಡು ಆನೆಯ ಸೊಂಡಿಲಿಗೆ ತಾಗಿ ನೋವಾದ ಸಂದರ್ಭ ಆನೆ ಘೀಳಿಟ್ಟಿದೆ ಮತ್ತು ಹಸುವಿನ ಕುತ್ತಿಗೆ ಭಾಗಕ್ಕೆ ಆನೆಯ ತುಳಿತ ಉಂಟಾಗಿ ಸಾವಿಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.

ಆನೆಯ ಧಾಳಿ ತಿಳಿಯುತ್ತಿದ್ದಂತೆ ಫಾರೆಸ್ಟರ್ ದೇವಯ್ಯ, ಹೊಸೂರು ಗ್ರಾ.ಪಂ.ಅಧ್ಯಕ್ಷ ಕೊಲ್ಲೀರ ಗೋಪಿ ಚಿಣ್ಣಪ್ಪ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಕೊಲ್ಲೀರ ಧರ್ಮಜ ಅವರುಗಳು ಸ್ಥಳಕ್ಕೆ ಭೇಟಿ ನೀಡಿದ್ದರು.

ಈ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಆನೆ ಉಪಟಳ ತೀವ್ರವಾಗಿದ್ದು ಕಾಫಿ,ಬಾಳೆ, ಅಡಿಕೆ, ತೆಂಗು ಇತ್ಯಾದಿ ಕೃಷಿ ಬೆಳೆಗಳ ನಷ್ಟ ಉಂಟಾಗಿದ್ದರೂ ಅರಣ್ಯ ಇಲಾಖೆ ಯಾವದೇ ಪರಿಹಾರ ನೀಡಿರುವದಿಲ್ಲ ಎಂದು ಕತ್ರಿಕೊಲ್ಲಿ ಮಣಿ ಕಾಳಪ್ಪ ಹಾಗೂ ಪತ್ನಿ ಲಲಿತಾ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಕೃಷಿಕರಿಗೆ ಸೂಕ್ತ ಪರಿಹಾರ ಸಿಗದ ಹಿನ್ನೆಲೆ ಪರಿಹಾರಕ್ಕಾಗಿ ಇಲಾಖೆಗೆ ಅರ್ಜಿ ಸಲ್ಲಿಸುವದನ್ನೆ ಹಲವು ಗ್ರಾಮಸ್ಥರು ಕೈಬಿಟ್ಟಿದ್ದಾರೆ ಎಂದು ಹೊಸೂರು ಗ್ರಾ.ಪಂ.ಅಧ್ಯಕ್ಷ ಕೊಲ್ಲೀರ ಗೋಪಿ ಚಿಣ್ಣಪ್ಪ ಅವರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಹಸುವನ್ನು ಕಳೆದುಕೊಂಡ ರೈತರಿಗೆ ಕೂಡಲೇ ಪರಿಹಾರ ನೀಡುವಂತೆ ಒತ್ತಾಯಿಸಿರುವ ದಾಗಿಯೂ ತಿಳಿಸಿದ್ದಾರೆ.

ಹಸುವಿನ ಮರಣೋತ್ತರ ಪರೀಕ್ಷೆಯನ್ನು ಡಾ. ಶಾಂತೇಶ್ ನೆರವೇರಿಸಿದರು. ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಅವರೂ ತುರ್ತು ಪರಿಹಾರ ನೀಡಲು ಅರಣ್ಯ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದ್ದು, ಕಳತ್ಮಾಡು ವ್ಯಾಪ್ತಿಯಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ಸೆರೆಹಿಡಿದು ಬೇರೆಡೆಗೆ ಸಾಗಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಲು ಉನ್ನತ ಮಟ್ಟದ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಗ್ರಾಮಸ್ಥರಾದ ಕಂಬೀರಂಡ ಬೋಪಣ್ಣ, ಕತ್ರಿಕೊಲ್ಲಿ ನಂಜುಂಡಕುಮಾರ್ ಘಟನೆ ಬಗ್ಗೆ ತಮ್ಮ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

- ವರದಿ : ಟಿ.ಎಲ್.ಶ್ರೀನಿವಾಸ್