ಮಡಿಕೇರಿ, ಏ. 25: ಕೊಡವರನ್ನು ಬುಡಕಟ್ಟು ಜನಾಂಗವೆಂದು ಗುರುತಿಸುವದಕ್ಕಾಗಿ ಆರಂಭಗೊಂಡಿದ್ದ ಕೊಡವ ಕುಲಶಾಸ್ತ್ರ ಅಧ್ಯಯನವನ್ನು ತಡೆಹಿಡಿಯಲಾಗಿದ್ದು, ಇದನ್ನು ಮತ್ತೆ ಆರಂಭಿಸಬೇಕೆಂದು ಒತ್ತಾಯಿಸಿ ಮೇ 1 ರಿಂದ ಜಿಲ್ಲಾಧಿಕಾರಿಗಳ ಕಛೇರಿ ಎದುರಿನಲ್ಲಿ ಧರಣಿ ಸತ್ಯಾಗ್ರಹ ಆರಂಭಿಸುವದಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು. ನಾಚಪ್ಪ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡವ ಕುಲಶಾಸ್ತ್ರದ ಅಧ್ಯಯನವನ್ನು ಪುನರ್ ಆರಂಭಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಎರಡೂ ಸರ್ಕಾರಗಳಿಗೆ ಮನವಿ ಸಲ್ಲಿಸುವದಾಗಿ ತಿಳಿಸಿದರು. ಕೊಡವ ಬುಡಕಟ್ಟು ಕುಲವನ್ನು ಸಂವಿಧಾನದ 340 ಮತ್ತು 342ನೇ ವಿಧಿ ಪ್ರಕಾರ ಶೆಡ್ಯೂಲ್ ಪಟ್ಟಿಯಲ್ಲಿ ಸೇರಿಸಿ ರಾಜ್ಯಾಂಗ ಖಾತ್ರಿ ನೀಡಬೇಕೆಂದು ಒತ್ತಾಯಿಸಿ ಸಿಎನ್‍ಸಿ ಸಂಘಟನೆ ನಿರಂತರವಾಗಿ ನಡೆಸಿಕೊಂಡು ಬಂದ ಹೋರಾಟದ ಫಲವಾಗಿ ಕೇಂದ್ರ ಸರ್ಕಾರ ಕೊಡವರ ಸಮಗ್ರ ಕುಲಶಾಸ್ತ್ರ ಅಧ್ಯಯನಕ್ಕೆ ನಿರ್ದೇಶನ ನೀಡಿತ್ತು. ಇದಕ್ಕೆ ಸ್ಪಂದಿಸಿದ ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಮಂತ್ರಾಲಯ ಅಧ್ಯಯನದ ಜವಾಬ್ದಾರಿಯನ್ನು ಮೈಸೂರಿನ ಬುಡಕಟ್ಟು ಸಂಶೋಧನಾ ಸಂಸ್ಥೆ, ಟ್ರೈಬಲ್ ರಿಸರ್ಚ್ ಇನ್‍ಸ್ಟಿಟ್ಯೂಟ್‍ಗೆ ವಹಿಸಿತ್ತೆಂದು ತಿಳಿಸಿದರು.

ಈ ಸಂಸ್ಥೆಯು 2016 ನವೆಂಬರ್ 16 ರಿಂದ ಕೊಡಗಿನಲ್ಲಿ ಸರ್ವೆ ಕಾರ್ಯವನ್ನು ಆರಂಭಿಸಿತ್ತು. ಆದರೆ, ಡಿಸೆಂಬರ್ 16 ರಂದು ಮುಖ್ಯ ಮಂತ್ರಿಗಳ ದಿಢೀರ್ ಮೌಖಿಕ ಆದೇಶದ ಹಿನ್ನೆಲೆಯಲ್ಲಿ ಅಧ್ಯಯನ ಕಾರ್ಯ ಸ್ಥಗಿತಗೊಂಡಿತ್ತು. ಪಟ್ಟಭದ್ರ ಹಿತಾಸಕ್ತಿಗಳು ಷಡ್ಯಂತ್ರ ಹೂಡಿ, ಮುಖ್ಯ ಮಂತ್ರಿಗಳ ಮೇಲೆ ಪ್ರಭಾವ ಬೀರಿದ ಕಾರಣ ಈ ಬೆಳವಣಿಗೆ ಆಗಿದೆಯೆಂದು ಎನ್.ಯು. ನಾಚಪ್ಪ ಆರೋಪಿಸಿದರು.

ಇದನ್ನು ವಿರೋಧಿಸಿ ಸಿಎನ್‍ಸಿ ಪ್ರತಿಭಟನೆ ನಡೆಸಿ, ಶಾಸಕರಾದ ಕೆ.ಜಿ. ಬೋಪಯ್ಯ ಅವರ ಮೂಲಕ ಕುಲಶಾಸ್ತ್ರ ಅಧ್ಯಯನವನ್ನು ಪುನರಾರಂಭಿಸಬೇಕೆಂದು ಮನವಿ ಮಾಡಿಕೊಳ್ಳಲಾಗಿತ್ತು. ಇದಕ್ಕೆ ಒಪ್ಪಿಕೊಂಡ ಮುಖ್ಯ ಮಂತ್ರಿಗಳು ಬೋಪಯ್ಯ ಅವರಿಗೆ ಭರವಸೆಯ ಪತ್ರ ಕಳುಹಿಸಿದ್ದಾರೆ. ಅಲ್ಲದೆ, ವಿಧಾನ ಮಂಡಲದಲ್ಲಿ ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಸಚಿವರು ಮರು ಸರ್ವೇ ಕಾರ್ಯದ ಬಗ್ಗೆ ಭರವಸೆ ನೀಡಿದ್ದರು. ಆದರೆ, ತಿಂಗಳುಗಳು ಉರುಳಿದರೂ ಸರ್ವೆ ಪುನರಾರಂಭಗೊಳ್ಳÀದೆ ಇರುವದರಿಂದ ಮೇ1 ರಿಂದ ಧರಣಿ ಸತ್ಯಾಗ್ರಹ ಆರಂಭಿಸುವತ್ತಿರುವದಾಗಿ ಎನ್.ಯು. ನಾಚಪ್ಪ ತಿಳಿಸಿದರು. ಈ ಬೇಡಿಕೆಯೊಂದಿಗೆ ಕೊಡವ ಭಾಷೆಯನ್ನು ಸಂವಿಧಾನದ 8ನೇ ಶೆಡ್ಯೂಲ್‍ಗೆ ಸೇರಿಸುವಂತೆ ಒತ್ತಾಯಿಸಲಾಗುವದೆಂದರು. ದೇಶದ 22 ಭಾಷೆಗಳನ್ನು 8ನೇ ಶೆಡ್ಯೂಲ್‍ಗೆ ಸೇರಿಸಿದಂತೆ ಕೊಡವ ಭಾಷೆಯನ್ನು ಕೂಡ ಸೇರ್ಪಡೆಗೊಳಿಸಬೇಕೆಂದು ಅವರು ಹೇಳಿದರು.

ಗೋಷ್ಠಿಯಲ್ಲಿ ಕೂಪದಿರ ಸಾಬು ಉಪಸ್ಥಿತರಿದ್ದರು.