ಮಡಿಕೇರಿ, ಏ. 26: ನೇತಾಜಿ ಯುವಕ ಹಾಗೂ ಯುವತಿ ಮಂಡಳದ ಬೆಳ್ಳಿಮಹೋತ್ಸವ ಸ್ಮರಣ ಸಂಚಿಕೆ ‘ರಜತ ಪ್ರಭೆ’ ಲೋಕಾರ್ಪಣೆ ಮತ್ತು ಧನ್ಯವಾದ ಸಮರ್ಪಣಾ ಸಮಾರಂಭ ತಾಳತ್ತಮನೆಯ ಆಟದ ಮೈದಾನದಲ್ಲಿ ಭಾನುವಾರ ನಡೆದು ‘ಬೆಳ್ಳಿ ಮಹೋತ್ಸವ’ ಆಚರಣೆ ಸಮಾರೋಪಗೊಂಡಿತು.

ಬೆಳ್ಳಿ ಮಹೋತ್ಸವ ಆಚರಣಾ ನೆನಪಿನ ಸಂಚಿಕೆ ಸಮಿತಿಯ ಅಧ್ಯಕ್ಷ ಸಿ.ಕೆ. ಶ್ರೀಪತಿ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಮುಳಿಯ ಸಮೂಹ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಕೇಶವ ಪ್ರಸಾದ್ ಸ್ಮರಣ ಸಂಚಿಕೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ, ಯುವಕ ಮತ್ತು ಯುವತಿ ಮಂಡಳಿ ರಾಜ್ಯಮಟ್ಟದಲ್ಲಿ ಹೆಸರು ಮಾಡಿದ್ದು, ಮುಂದೆಯೂ ಅತ್ಯುತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳು ವಂತಾಗಬೇಕು ಎಂದು ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿದ್ದ ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ನೇತಾಜಿ ಯುವಕ ಮತ್ತು ಯುವತಿ ಮಂಡಳಿ ತಾಳತ್‍ಮನೆಗೆ ಮಾತ್ರ ಸೀಮಿತವಾಗದೇ ಮಡಿಕೇರಿ ಮತ್ತು ಜಿಲ್ಲಾಮಟ್ಟದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರಾಜ್ಯಟ್ಟದಲ್ಲಿ ಹೆಜ್ಜೆ ಗುರುತುಗಳನ್ನು ಮೂಡಿಸುವಂತಾಗಬೇಕೆಂದು ಕಿವಿ ಮಾತು ಹೇಳಿದರು.

ಮತ್ತೋರ್ವ ಮುಖ್ಯ ಅತಿಥಿ ಪತ್ರಕರ್ತ ಬಿ.ಸಿ. ದಿನೇಶ್ ಮಾತನಾಡಿ, ‘ರಜತ ಪ್ರಭೆ’ ಇತ್ತೀಚಿನ ದಿನಗಳಲ್ಲಿ ಬಂದಂತಹ ಒಂದು ಮಾದರಿ ಸ್ಮರಣ ಸಂಚಿಕೆ ಎಂದು ಹೇಳಿದರಲ್ಲದೇ ತಾಳತ್ತಮನೆಯ ಯುವಕ ಮತ್ತು ಯುವತಿ ಮಂಡಳಿಗಳು ಮುಂದೆ ಸ್ವರ್ಣ ಮಹೋತ್ಸವದೊಂದಿಗೆ ಶತಮಾನೋತ್ಸವದತ್ತ ದಾಪುಗಾಲು ಹಾಕಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ನೇತಾಜಿ ಯುವಕ ಹಾಗೂ ಯುವತಿ ಮಂಡಳ ತಾಳತ್ತಮನೆ ಇವರ 25 ವರ್ಷಗಳ ಸಮಾಜಮುಖಿ ಸೇವೆ ಮತ್ತು ‘ರಜತ ಪ್ರಭೆ’ ಸ್ವರ್ಣ ಸಂಚಿಕೆ ಕುರಿತು ಎಫ್.ಎಂ.ಸಿ. ಕಾಲೇಜಿನ ಹಿಂದಿ ಭಾಷಾ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ್ ಹೆಗಡೆ ಅವಲೋಕನ ಭಾಷಣ ಮಾಡಿದರು.

ಕಾರ್ಯಕ್ರಮದಲ್ಲಿ ಶೆಟ್ಟಿ ಗ್ರೂಪ್ ಮಾಲೀಕ ಕೆ. ಬಾಳಪ್ಪಶೆಟ್ಟಿ, ನೇತಾಜಿ ಯುವಕ ಮಂಡಲದ ಅಧ್ಯಕ್ಷ ದಿವೇಶ್ ರೈ, ಯುವತಿ ಮಂಡಳಿ ಅಧ್ಯಕ್ಷೆ ಎ.ಆರ್. ನೇತ್ರಾವತಿ ರೈ, ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ನವೀನ್ ದೇರಳ, ಪದಾಧಿಕಾರಿಗಳು, ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಬೆಳ್ಳಿ ಮಹೋತ್ಸವ ಆಚರಣ ಸ್ವಾಗತ ಸಮಿತಿಯ ಅಧ್ಯಕ್ಷ ಗಿರೀಶ್ ತಾಳತ್ತಮನೆ, 25 ವರ್ಷಗಳ ಯುವಕ ಮತ್ತು ಯುವತಿ ಮಂಡಳಿಯ ಇತಿಹಾಸವನ್ನು ಅವಲೋಕಿಸಿದರು. ರಜತ ಮಹೋತ್ಸವದ ಯಶಸ್ಸಿಗೆ ದುಡಿದ ಪ್ರತಿಯೊಬ್ಬರಿಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.