ವೀರಾಜಪೇಟೆ, ಏ. 26: ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ತಡೆಯಲು ವಿದ್ಯಾ ಸಂಸ್ಥೆಗಳಲ್ಲಿ ತೀವ್ರ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ದೌರ್ಜನ್ಯ ನಡೆಯದಂತೆ ನೋಡಿಕೊಳ್ಳುವದು ಶಾಲೆಯಲ್ಲಿ ಶಿಕ್ಷಕರು, ಮನೆಯಲ್ಲಿ ಪೋಷಕರ ಕರ್ತವ್ಯ ಎಂದು ವೀರಾಜಪೇಟೆ ಸಮುಚ್ಛಯ ನ್ಯಾಯಾಲಯಗಳ ಹಿರಿಯ ಸಿವಿಲ್ ನ್ಯಾಯಾಧೀಶ ಡಿ.ಆರ್. ಜಯಪ್ರಕಾಶ್ ಹೇಳಿದರು.

ತಾಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ವೀರಾಜಪೇಟೆ ವಕೀಲರ ಸಂಘದ ವತಿಯಿಂದ ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಶಿಕ್ಷಕರುಗಳಿಗೆ ಏರ್ಪಡಿಸಲಾಗಿದ್ದ ‘’ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯಿದೆ’ ಕುರಿತು ಕಾನೂನು ಅರಿವು ಉದ್ಘಾಟಿಸಿ ಮಾತನಾಡಿದರು.

ವಕೀಲರ ಸಂಘದ ಅಧ್ಯಕ್ಷ ಎನ್.ಜಿ. ಕಾಮತ್ ಅಧ್ಯಕ್ಷತೆ ವಹಿಸಿ ಮಾತನಾಡಿ ಇಂದಿನ ಆಧುನಿಕ ಯುಗದಲ್ಲಿ ಮಕ್ಕಳ ಮನಸನ್ನು ಅರ್ಥಮಾಡಿಕೊಳ್ಳುವಂತಹ ಶಿಕ್ಷಕರು ಮಕ್ಕಳ ಭವಿಷ್ಯದ ಮುಖ್ಯ ವಾಹಿನಿಯ ಕೇಂದ್ರ ಬಿಂದುವಾಗಿದ್ದಾರೆ. ಮಕ್ಕಳ ಉತ್ತಮ ಭವಿಷ್ಯವನ್ನು ರೂಪಿಸಲು ಶಿಕ್ಷಕರ ಜವಾಬ್ದಾರಿಯು ಪ್ರಮುಖ ಪಾತ್ರ ವಹಿಸಲಿದೆ ಎಂದರು.

ವಕೀಲೆ ಅನುಪಮ ಬಿ. ಕಿಶೋರ್ “ಮಕ್ಕಳ ಲೈಂಗಿಕ ದೌರ್ಜನ್ಯ ಕಾಯಿದೆ” ಎಂಬ ವಿಷಯದ ಬಗ್ಗೆ ಮಾತನಾಡಿ ಮಕ್ಕಳು ಶಿಕ್ಷಕರನ್ನು ದೇವರೆಂದು ನಂಬುವದರಿಂದ ಶಿಕ್ಷಕರು ಮಕ್ಕಳ ಮನಸನ್ನು ಮುಕ್ತವಾಗಿ ಅರಿತುಕೊಂಡು ದೌರ್ಜನ್ಯಗಳು ನಡೆಯದಂತೆ ನೋಡಿಕೊಳ್ಳುವದು ಸೂಕ್ತ ಎಂದರು.

ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಕೆ. ಪಾಂಡು ಸ್ವಾಗತಿಸಿ, ವೇದಿಕೆಯಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಪಿ. ಮಹಾದೇವ್, ತಾಲೂಕು ದೈಹಿಕ ಪರಿವೀಕ್ಷಕಿ ರತಿ, ಉಪಸ್ಥಿತರಿದ್ದರು. ಕೆ.ಸಿ. ಗೀತಾಂಜಲಿ ನಿರೂಪಿಸಿ, ಶಿಕ್ಷಣ ಸಂಯೋಜಕಿ ಅನಿತಾ ಪೊರ್ಟಾದೊ ವಂದಿಸಿದರು.