ಸಿದ್ದಾಪುರ, ಏ. 26: ಡಿಸೆಂಬರ್ 7 ರಂದು ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ತೆರವುಗೊಳಿಸಿದ ದಿಡ್ಡಳ್ಳಿ ಅರಣ್ಯ ಪ್ರದೇಶದೊಳಗೆ ಮತ್ತೆ ಗುಡಿಸಲು ನಿರ್ಮಿಸಲು ಆದಿವಾಸಿಗಳು ಮುಂದಾಗಿದ್ದಾರೆ ಎಂದು ಸುದ್ದಿ ಹಬ್ಬಿದ್ದ ಹಿನ್ನೆಲೆಯಲ್ಲಿ ದಿಡ್ಡಳ್ಳಿ ವ್ಯಾಪ್ತಿಯ ಅರಣ್ಯ ಪ್ರದೇಶದೊಳಗೆ ರಾತ್ರಿ ಬಿಗಿ ಪೊಲೀಸ್ ಸರ್ಪಗಾವಲು ಸುತ್ತುವರಿದಿತ್ತು. ಅಂದಾಜು 70 ರಷ್ಟು ಮಂದಿ ಪೊಲೀಸರು 3 ಠಾಣಾಧಿಕಾರಿಗಳು ಹಾಗೂ ಅರಣ್ಯ ಇಲಾಖೆಯ 40 ಸಿಬ್ಬಂದಿಗಳು ರಾತ್ರಿ ಪೂರ್ತಿ ಜಾಗರಣೆ ಕುಳಿತರು ಆದರೆ ಯಾರು ಕೂಡ ಅರಣ್ಯ ಪ್ರದೇಶದೊಳಗೆ ಗುಡಿಸಲು ನಿರ್ಮಾಣ ಮಾಡಲು ಮುಂದಾಗಲಿಲ್ಲ.

ವಿಫಲಗೊಂಡ ಮನವೊಲಿಕೆ !

ದಿಡ್ಡಳ್ಳಿ ಅರಣ್ಯ ಪ್ರದೇಶದೊಳಗೆ ಗುಡಿಸಲು ನಿರ್ಮಾಣ ಮಾಡಿಕೊಂಡ 577 ಕುಟುಂಬಗಳನ್ನು ಡಿ 7 ರಂದು ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ, ಗುಡಿಸಲುಗಳನ್ನು ತೆರವುಗೊಳಿಸಿತ್ತು.

ನಂತರ ಗುಡಿಸಲು ಕಳೆದುಕೊಂಡ ಆದಿವಾಸಿಗಳು ಸಮೀಪದ ಆಶ್ರಮ ಶಾಲೆಯ ಎದುರು ಪ್ಲಾಸ್ಟಿಕ್ ಹೊದಿಕೆ ಕಟ್ಟಿಕೊಂಡು ವಾಸಮಾಡಿಕೊಂಡಿದ್ದಂತೆ ಹೋರಾಟಗಳನ್ನು ಮಾಡಿದರು. ಅಲ್ಲದೇ ಮಡಿಕೇರಿ ಚಲೋ, ಬೆಂಗಳೂರು ಚಲೋ ಕಾರ್ಯಕ್ರಮ, ಬಹಿರಂಗ ಸಭೆಗಳನ್ನು ನಡೆಸುವ ಮೂಲಕ ರಾಜ್ಯದ ವಸತಿ ವಂಚಿತ ಹೋರಾಟ ಸಮಿತಿಯ ನೇತೃತ್ವದಲ್ಲಿ ಮುಖ್ಯಮಂತ್ರಿಗಳನ್ನು ಕೂಡ ಭೇಟಿ ಮಾಡಲಾಯಿತು.

ದಿಡ್ಡಳ್ಳಿಗೆ ಭೇಟಿ ನೀಡಿದ ಸಮಾಜ ಕಲ್ಯಾಣ ಸಚಿವ ಆಂಜನೇಯರವರು ಮೂಲಭೂತ ಸೌಕರ್ಯ ಒದಗಿಸಿಕೊಡುವಂತೆ ರೂ. 1 ಕೋಟಿ ಚೆಕ್‍ಅನ್ನು ಜಿಲ್ಲಾಧಿಕಾರಿಗಳಿಗೆ ಹಸ್ತಾಂತರಿಸಿದರು. ನಂತರ ದಿಡ್ಡಳ್ಳಿ ನಿರಾಶ್ರಿತರಿಗೆ ತಾತ್ಕಲಿಕ ಶೌಚೌಲಯ ನೀರಿನ ವ್ಯವಸ್ಥೆ, ಅಕ್ಕಿ ಇನ್ನಿತರ ದಿನಬಳಕೆ ಸಾಮಗ್ರಿಗಳನ್ನು ಐ.ಟಿ.ಡಿ.ಪಿ. ಇಲಾಖೆಯ ಮುಖಾಂತರ ನೀಡಲಾಗುತ್ತಿತ್ತು ಹಾಗೂ 3 ತಿಂಗಳಲ್ಲಿ ಶಾಶ್ವತ ಸೂರು ಒದಗಿಸುವ ಭರವಸೆ ನೀಡಲಾಯಿತು.

ಆದರೆ ಭೂಮಿ ಮತ್ತು ವಸತಿ ವಂಚಿತ ಹೋರಾಟ ಸಮಿತಿಯ ರಾಜ್ಯ ಪ್ರಮುಖರು, ಜಿಲ್ಲಾ ಸಂಘಟಕರು ಅಲ್ಲೇ ನಿವೇಶನ ನೀಡಿ ಎಂದು ಪಟ್ಟು ಹಿಡಿದರು. ಈತನ್ಮಧ್ಯೆ ಜಿಲ್ಲಾಡಳಿತವು ಜಿಲ್ಲೆಯ 3 ತಾಲೂಕುಗಳಲ್ಲಿ ನಿವೇಶನ ಗುರುತಿಸಿ, ನಿರಾಶ್ರಿತರ ಪಟ್ಟಿ ತಯಾರಿಸಿ ಹೆಸರುಗಳನ್ನು ಲಾಟರಿ ಎತ್ತುವ ಮೂಲಕ ಫಲಾನುಭವಿಗಳನ್ನು ಗುರುತಿಸಿತು. ಆದರೆ, ಯಾರೊಬ್ಬ ನಿರಾಶ್ರಿತರೂ ಅತ್ತ ಸುಳಿಯದೆ ಸಾರಾಸಗಟಾಗಿ ಜಿಲ್ಲಾಡಳಿತ ನೀಡಿದ್ದ ನಿವೇಶನವನ್ನು ತಿರಸ್ಕರಿಸಿದರು.

ಅಲ್ಲದೇ ಹೋರಾಟವನ್ನು ತೀವ್ರಗೊಳಿಸಿದರು. ನಂತರ ಇತ್ತೀಚೆಗೆ ಬೆಂಗಳೂರು ಚಲೋ ಕಾಲ್ನಡಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಇದು ಪ್ರಾರಂಭಿಸಿ 10.ಕಿ.ಲೋ ದೂರಕ್ಕೆ ತಲಪುವಷ್ಟರಲ್ಲಿ ಮುಖ್ಯಮಂತ್ರಿಗಳ ಆದೇಶದಂತೆ ಅರ್ಧದಲ್ಲೇ ಮೊಟಕುಗೊಳಿಸಲಾಯಿತು. ಏ. 15 ರಂದು ದಿಡ್ಡಳ್ಳಿಗೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ಖುದ್ದು ಭೇಟಿ ನೀಡಿ ತೆರವುಗೊಳಿಸಿದ ಸ್ಥಳ ಪರಿಶೀಲಿಸಿದರು. ಅಲ್ಲದೇ ಸಭೆ ನಡೆಸಿ ಆದಿವಾಸಿಗಳ ಸ್ಥಿತಿಗತಿಯ ಬಗ್ಗೆ ವಿಷಾದ ವ್ಯಕ್ತಪಡಿಸಿದರು.

ಆದರೆ ದಿಡ್ಡಳ್ಳಿಯಲ್ಲಿ ನಿವೇಶನ ನೀಡುವ ಬಗ್ಗೆ ಎಲ್ಲಿಯೂ ಪ್ರಸ್ತಾಪಿಸದೆ ಬದಲೀ ವ್ಯವಸ್ಥೆಯ ಬಗ್ಗೆ ಹೇಳಿಕೆ ನೀಡಿದರು.

ಕಂದಾಯ ಸಚಿವರ ಹೇಳಿಕೆ ವಿರುದ್ಧ ಅಸಮಾಧಾನಗೊಂಡ ಭೂಮಿ ಮತ್ತು ವಸತಿ ವಂಚಿತ ಹಕ್ಕು ಹೋರಾಟ ಸಮಿತಿಯು ಕಾಗೋಡುರವರ ವಿರುದ್ಧ ಕಿಡಿಕಾರಿದರು ನಂತರ ಇತ್ತೀಚೆಗೆ ಐ.ಟಿ.ಡಿ.ಪಿ. ಇಲಾಖೆಯ ಅಧಿಕಾರಿಗಳು ಹಾಗೂ ಪಂಚಾಯಿತಿ ಅಧಿಕಾರಿಗಳು ದಿಡ್ಡಳ್ಳಿ ನಿರಾಶ್ರಿತರ ಬಳಿ ತೆರಳಿ ನೀವುಗಳು ಜಿಲ್ಲಾಡಳಿತ ಗುರುತಿಸಿದ ಸ್ಥಳಕ್ಕೆ ತೆರಳುವಂತೆ ತಿಳಿಸಿದರು ಎನ್ನಲಾಗಿದೆ. ಆದರೆ ಆದಿವಾಸಿಗಳು ಅಧಿಕಾರಿಗಳ ಮಾತಿಗೆ ಮನ್ನಣೆ ನೀಡದೆ ನಮಗೆ ದಿಡ್ಡಳ್ಳಿ ವ್ಯಾಪ್ತಿಯಲ್ಲೇ ಶಾಶ್ವತ ಸೂರು ನೀಡಬೇಕೆಂದು ಒತ್ತಾಯಿಸಿ ಅಧಿಕಾರಿಗಳ ಮಾತನ್ನು ನಯವಾಗಿ ತಿರಸ್ಕರಿಸಿದರು. - ಎ.ಎನ್. ವಾಸು ಆಚಾರ್ಯ