ಕೂಡಿಗೆ, ಏ. 26: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆಹೊಸೂರು ಗ್ರಾಮಕ್ಕೆ ಸಮೀಪವಿರುವ ಬಾಣಾವರ-ಸೋಮವಾರಪೇಟೆ ಮೀಸಲು ಅರಣ್ಯದ ಅಂಚಿನಲ್ಲಿ ಹುಣಸೆಪಾರೆ ಜೇನುಕುರುಬರ ಹಾಡಿಯೊಂದಿದ್ದು, ಈ ಹಾಡಿಯಲ್ಲಿ 16ಕ್ಕೂ ಅಧಿಕ ಕುಟುಂಬಗಳಿದ್ದು ಬಿಸಿಲಿನ ಧಗೆ ಹೆಚ್ಚಾದಂತೆ ಕುಡಿಯುವ ನೀರಿನ ತತ್ವಾರ ಎದುರಾಗಿದೆ. ಈ ಹಾಡಿಯ ಜನರು ದಿನನಿತ್ಯ ಕಿ.ಮೀ. ದೂರ ತೆರಳಿ ಕುಡಿಯಲು ಯೋಗ್ಯವಲ್ಲದ ನೀರನ್ನು ತರುವಂತಹ ಪರಿಸ್ಥಿತಿ ಉಂಟಾಗಿದೆ.

ಹಾಡಿಯ ಸಮೀಪದಲ್ಲಿ ಸೋಮವಾರಪೇಟೆಯ ಕಕ್ಕೆಹೊಳೆಯು ಮಳೆಗಾಲದಲ್ಲಿ ತುಂಬಿ ಹರಿಯುವದರಿಂದ ಜನರಿಗೆ ನೀರಿನ ಸೌಲಭ್ಯವಿರುತ್ತದೆ. ಇದೀಗ ಕಕ್ಕೆಹೊಳೆಯಲ್ಲಿ ನೀರಿನ ಹರಿಯುವಿಕೆಯು ಇಲ್ಲದೆ ಈ ಹಾಡಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಸಂಬಂಧಪಟ್ಟ ಇಲಾಖೆಯವರು ಒದಗಿಸದೇ ಇರುವದರಿಂದ ಒಂದು ಕಿ.ಮೀ. ದೂರದವರೆಗೆ ತೆರಳಿ ಹೊಳೆಯ ದಡದಲ್ಲಿ ಗುಂಡಿಯನ್ನು ತೆಗೆದು ಅಲ್ಲಿ ಸಂಗ್ರಹವಾದ ನೀರನ್ನು ಕುಡಿಯಲು ಬಳಸುತ್ತಿದ್ದಾರೆ. ಕಕ್ಕೆಹೊಳೆಯ ಗುಂಡಿಗಳಲ್ಲಿ ನಿಂತಿರುವ ಕೊಳಕು ನೀರನ್ನೇ ತಂದು ಸೋಸಿಕೊಂಡು ಕುಡಿಯುವ ಪ್ರಸಂಗವನ್ನು ಹುಣಸೆಪಾರೆ ಹಾಡಿಯಲ್ಲಿ ಕಾಣಬಹುದಾಗಿದೆ.

ಜೇನುಕುರುಬರ ಹಾಡಿಯನ್ನು ಅಭಿವೃದ್ಧಿ ಪಡಿಸುತ್ತೇವೆ ಎಂದು ಲಕ್ಷಾಂತರ ರೂಪಾಯಿಗಳನ್ನು ವ್ಯಯಮಾಡುತ್ತಿರುವ ಸಂಬಂಧಪಟ್ಟ ಇಲಾಖೆ, ಈ ಹಾಡಿಗೆ ಮೂಲಭೂತ ಸೌಕರ್ಯ, ಕುಡಿಯುವ ನೀರಿನ ವ್ಯವಸ್ಥೆಯನ್ನು ನೀಡಿಲ್ಲ ಎಂದು ಹಾಡಿಯ ಪ್ರಮುಖರಾದ ಜೇನುಕುರುಬರ ಮುತ್ತಮ್ಮ, ತಿಮ್ಮಪ್ಪ, ರಾಜು, ಕೃಷ್ಣ, ಸಣ್ಣಪ್ಪ, ಗಣೇಶ್, ಬಸವರಾಜು, ಜಯಮ್ಮ, ಸಣ್ಣವ್ವ, ಶ್ವೇತ, ರವಿ, ಶಿವ, ಕಾಳವ್ವ ಮೊದಲಾದವರು ತಮ್ಮ ಅಳಲನ್ನು ತೋಡಿಕೊಂಡರು.

ಈ ಹಾಡಿಯಲ್ಲಿರುವ 15 ಕುಟುಂಬಗಳ ಕುಡಿಯುವ ನೀರಿನ ಸ್ಥಿತಿ ಈ ಪರಿಯಾದರೆ, ಸ್ನಾನ ಮತ್ತು ಬಟ್ಟೆ ತೊಳೆಯಲು ಕಕ್ಕೆಹೊಳೆಯ ಕಲ್ಲುಗಳ ಮಧ್ಯೆ ನಿಂತಿರುವ ನೀರನ್ನೇ ಅವಲಂಬಿಸಿ ದಿನನಿತ್ಯ ಬದುಕನ್ನು ಸಾಗಿಸುವಂತಾಗಿದೆ.

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಈ ಹಾಡಿಯ ಕುಟುಂಬಗಳಿಗೆ ಕೆಲವು ಮನೆಗಳನ್ನು ಒಂದು ವರ್ಷದ ಹಿಂದೆ ನಿರ್ಮಿಸಿದ್ದರು, ಇದೀಗ ಆ ಮನೆಗಳು ಬಿರುಕು ಬಿಟ್ಟು ಬೀಳುವ ಹಂತವನ್ನು ತಲಪಿವೆ.

ಹಾಡಿಯ ಮುಖಂಡ ತಿಮ್ಮಪ್ಪ ಮಾತನಾಡಿ, ಮನೆಗಳನ್ನು ಅಧಿಕಾರಿಗಳು ನಿರ್ಮಿಸಿಕೊಡಲು ಗುತ್ತಿಗೆದಾರರಿಗೆ ಸೂಚಿಸಿದರು. ಗುತ್ತಿಗೆದಾರ ನಿರ್ಮಿಸಿರುವ ಕಳಪೆ ಕಾಮಗಾರಿಯಿಂದಾಗಿ ಮನೆಯು ಬೀಳುವಂತಾಗಿದೆ. ನಮಗೆ ಶೌಚಾಲಯ ಹಾಗೂ ಸ್ನಾನದ ಮನೆಗಳನ್ನು ನಿರ್ಮಿಸಿಕೊಡುವ ಯೋಜನೆ ಇಲಾಖೆಯಿಂದ ಮಂಜೂರಾಗಿದ್ದರು, ಇಲಾಖೆಯವರು ಶೌಚಾಲಯ ನಿರ್ಮಾಣ ಮಾಡಿಲ್ಲ. ಅದರ ಬದಲಾಗಿ ಗ್ರಾಮ ಪಂಚಾಯಿತಿ ವತಿಯಿಂದ ಶೌಚಾಲಯ ನಿರ್ಮಿಸಿಕೊಡಲಾಗಿದೆ ಎಂದರು.

ಸರ್ಕಾರ ವಿವಿಧ ಯೋಜನೆಗಳ ಮೂಲಕ ಹಣವನ್ನು ವಿನಿಯೋಗಿಸಿ, ಹಾಡಿಯ ಜನರ ಅಭಿವೃದ್ಧಿ ಪಡಿಸುತ್ತೇವೆ. ಮೂಲಭೂತ ಸೌಲಭ್ಯಗಳನ್ನು ನೀಡುತ್ತೇವೆ ಎಂದು ಹೇಳುವ ರಾಜಕಾರಣಿಗಳು, ಜನಪ್ರತಿನಿಧಿಗಳು ಇಂತಹ ಹಾಡಿಗಳತ್ತ ಚುನಾವಣೆಯ ಸಂದರ್ಭ ಮತದಾನಕ್ಕೆ ಹಾತೊರೆಯುತ್ತಾರೆ. ಆದರೆ, ಮೂಲಭೂತ ಸೌಲಭ್ಯವನ್ನು ಕಲ್ಪಿಸಲು ನಿರ್ಲಕ್ಷ್ಯ ಏಕೆ? ಎಂದು ಆಕ್ರೋಶದಿಂದ ಪ್ರಶ್ನಿಸಿದರು.

ನಮಗೆ ಮತದಾನದ ಹಕ್ಕಿದ್ದರೂ ಸೌಲಭ್ಯಗಳಿಂದ ವಂಚಿತರಾಗಿದ್ದೇವೆ. ಚುನಾವಣೆಯ ಸಂದರ್ಭ ಸಾಮಾನ್ಯ ಪ್ರಜೆಯಾಗಿ ಮತಚಲಾಯಿಸುತ್ತೇವೆ. ಮೂಲಭೂತ ಸೌಲಭ್ಯಗಳನ್ನು ನೀಡುತ್ತೇವೆ ಎಂದು ಭರವಸೆ ನೀಡಿ, ಪ್ರಮುಖವಾದ ಕುಡಿಯುವ ನೀರು, ಮನೆಗೆ ವಿದ್ಯುತ್ ಒದಗಿಸದೆ ಈ ಹಾಡಿಯನ್ನು ನಿರ್ಲಕ್ಷ್ಯಿಸಿದ್ದಾರೆ ಎಂದು ಹಾಡಿಯ ನಿವಾಸಿಗಳು ತಿಳಿಸಿದ್ದಾರೆ.

ಸಮೀಪದಲ್ಲಿ ಹುದುಗೂರು ಮೀಸಲು ಅರಣ್ಯವಿದ್ದು, ಬಲ ಭಾಗಕ್ಕೆ ಬಾಣಾವರ ಮೀಸಲು ಅರಣ್ಯ ಇದೆ. ಅರಣ್ಯಕ್ಕೆ ಸಂಬಂಧಿಸಿದಂತೆ ಎರಡು ಕಡೆಗಳಲ್ಲಿ ಕಂದಕಗಳನ್ನು ತೋಡಿದ್ದರೂ ಕಾಡಾನೆಗಳ ನಡುವೆ ಬದುಕು ನಡೆಸುತ್ತಿರುವ ಹುಣಸೆಪಾರೆ ಕುಟುಂಬಗಳಿಗೆ ಮೂಲಭೂತ ಸೌಲಭ್ಯವನ್ನು ಒದಗಿಸಲು ಸಮಾಜ ಕಲ್ಯಾಣ ಇಲಾಖೆ (ಐಟಿಡಿಪಿ) ಮುಂದಾಗದೆ ಭರವಸೆಗಳನ್ನೇ ನೀಡುತ್ತಾ ವಂಚಿಸುತ್ತಿರುವದು ಸರಿಯಾದ ಕ್ರಮವಲ್ಲ ಎಂದು ಹಾಡಿಯ ಜನರ ಅಳಲು.

ಈ ವ್ಯಾಪ್ತಿಯು ಕೂಡಿಗೆ ಗ್ರಾಮ ಪಂಚಾಯಿತಿಗೆ ಒಳಪಟ್ಟಿದ್ದು, ಗ್ರಾಮ ಪಂಚಾಯಿತಿಯಿಂದ ಬೀದಿ ದೀಪಗಳನ್ನು ಅಳವಡಿಸಿದ್ದರೂ ಕೆಲವು ದೀಪಗಳು ನಿರ್ವಹಣೆ ಇಲ್ಲದೆ ಸೊರಗಿವೆ. ಹಾಡಿ ರಸ್ತೆಯ ಅಂಚಿನಲ್ಲಿ ಕೊಳವೆ ಬಾವಿಯನ್ನು ಕೊರೆಸಲಾಗಿದ್ದು, ಇದೀಗ ಅಂತರ್ಜಲ ಕುಸಿತದಿಂದ ನೀರು ಸ್ಥಗಿತಗೊಂಡಿದೆ. ಈ ಹಾಡಿಯ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಮಾಸಿಕ ಸಭೆಯಲ್ಲಿ ಚರ್ಚಿಸಿ ತಾಲೂಕು ಸಮಾಜ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಲಾಗಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಟಿ.ಕೆ. ವಿಶ್ವನಾಥ್, ಮಂಜಯ್ಯ, ದಸ್ವಿ ತಿಳಿಸಿದ್ದಾರೆ.

ಐಟಿಡಿಪಿ ವತಿಯಿಂದ ಕುಡಿಯುವ ನೀರಿನ ಯೋಜನೆಗೆ ಪೈಪ್‍ಲೈನ್ ಹಾಗೂ ಸಣ್ಣ ಟ್ಯಾಂಕ್‍ಗಳನ್ನು ನಿರ್ಮಿಸಿ, ಬೋರ್‍ವೆಲ್‍ಗಳನ್ನು ಕೊರೆದು ವರ್ಷಗಳೇ ಕಳೆದರೂ ಇದುವರೆಗೂ ನೀರಿನ ವ್ಯವಸ್ಥೆ ತಲಪಿಲ್ಲ. ನೀರಿನ ವ್ಯವಸ್ಥೆಯನ್ನು ಕಲ್ಪಸಲು ವಿದ್ಯುತ್ ಸಂಪರ್ಕವನ್ನು ಕಲ್ಪಿಸಿಲ್ಲ.

ವರ್ಷಂಪ್ರತಿ ಹಾಡಿಯ ಜನರಿಗೆ ಮನೆ ನಿರ್ಮಿಸಿಕೊಡುವ ಯೋಜನೆಗಳನ್ನು ಹಮ್ಮಿಕೊಂಡರೂ ಇನ್ನೂ ಈ ಹಾಡಿಯ ಕೆಲವು ಮಂದಿಗೆ ಮನೆಯ ಭಾಗ್ಯವು ದೊರಕದೆ ಹುಲ್ಲಿನ ಗುಡಿಸಿಲಿನಲ್ಲಿ ತಮ್ಮ ಬದುಕನ್ನು ಸಾಗಿಸುವಂತಹ ಸನ್ನಿವೇಶ ಇಲ್ಲಿ ಕಾಣಬಹುದಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ, ಮೂಲಭೂತ ಸೌಲಭ್ಯಗಳನ್ನು ಈ ಹಾಡಿಗೆ ಒದಗಿಸಬೇಕೆಂದು ಹಾಡಿಯ ನಿವಾಸಿಗಳು ಆಗ್ರಹಿಸಿದ್ದಾರೆ.

- ಕೆ.ಕೆ. ನಾಗರಾಜಶೆಟ್ಟಿ