ಮಡಿಕೇರಿ, ಏ. 27: ವಾಂಡರರ್ಸ್ ಸ್ಪೋಟ್ರ್ಸ್ ಕ್ಲಬ್ ಹಾಗೂ ಮ್ಯಾನ್ಸ್ ಹಾಕಿ ಅಕಾಡೆಮಿಯ ಜಂಟಿ ಆಶ್ರಯದಲ್ಲಿ 23ನೇ ವರ್ಷದ ಬೇಸಿಗೆ ಕ್ರೀಡಾ ತರಬೇತಿ ಶಿಬಿರದ ಅಂಗವಾಗಿ ಶಿಬಿರಾರ್ಥಿಗಳಿಗಾಗಿ ತಡಿಯಂಡಮೋಳ್ ಬೆಟ್ಟಕ್ಕೆ ಚಾರಣ ನಡೆಯಿತು.

ಸುಮಾರು 60 ಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರಕೃತಿ ರಮಣೀಯ ಹಸಿರ ಪರಿಸರವನ್ನು ತರಬೇತುದಾರರಿಂದ ಪರಿಚಯ ಮಾಡಿಕೊಂಡರು. ಕ್ರೀಡೆ ಮತ್ತು ದೈಹಿಕ ಸಾಮಥ್ರ್ಯದ ಬಗ್ಗೆ ಶಿಕ್ಷಕರು ವಿವರಿಸಿದರು.

ಇಂದು ಹಾಕಿ

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶಿಬಿರದಲ್ಲಿ ಪಾಲ್ಗೊಂಡಿರುವ ಪ್ರೌಢಶಾಲಾ ಬಾಲಕರಿಗಾಗಿ ಏ.28 ರಂದು ಸಾಯಿ ಟರ್ಫ್ ಹಾಕಿ ಮೈದಾನದಲ್ಲಿ ಬಿ.ಕೆ.ಸುಬ್ಬಯ್ಯ ಟ್ರೋಫಿ ಹಾಕಿ ಪಂದ್ಯಾಟ ನಡೆಯಲಿದೆ. ಅಂದು ಪ್ರೌಢಶಾಲಾ ಬಾಲಕಿಯರಿಗಾಗಿ ದಿ.ಶಂಕರ್ ಟ್ರೋಫಿ ಹಾಕಿ ಪಂದ್ಯಾಟವನ್ನು ಆಯೋಜಿಸಲಾಗಿದೆ. ಆಹ್ವಾನಿತ ತಂಡಗಳಿಗೆ ಮಾತ್ರ ಆಡಲು ಅವಕಾಶವಿದ್ದು, ಇದೇ ಮೊದಲ ಬಾರಿಗೆ ಬಾಲಕಿಯರಿಗಾಗಿ ಪಂದ್ಯಾಟವನ್ನು ಆಯೋಜಿಸಲಾಗಿದೆ ಎಂದು ತರಬೇತುದಾರರಾದ ವೆಂಕಟೇಶ್ ತಿಳಿಸಿದ್ದಾರೆ.

ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ಬೇಸಿಗೆ ಕ್ರೀಡಾ ಶಿಬಿರ ಮೇ 1 ರಂದು ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಗ್ಗೆ 7.30 ಗಂಟೆಗೆ ಸಮಾರೋಪಗೊಳ್ಳಲಿದ್ದು, ಹಾಕಿ ಕೊಡಗು ಸಂಸ್ಥೆಯ ಪ್ರಮುಖರಾದ ಪಾರ್ಥ ಚಂಗಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಿರಿಯರಾದ ಶ್ಯಾಂ ಪೂಣಚ್ಚ ಹಾಗೂ ಮೂಡಾ ಅಧ್ಯಕ್ಷರಾದ ಎ.ಸಿ.ಚುಮ್ಮಿದೇವಯ್ಯ ಪಾಲ್ಗೊಳ್ಳಲಿದ್ದಾರೆ. ಇದೇ ಮೇ 10 ರಿಂದ 20 ರವರೆಗೆ ಸಾರ್ವಜನಿಕರು ಹಾಗೂ ಹಿರಿಯ ನಾಗರೀಕರಿಗಾಗಿ ಉಚಿತ ಯೋಗ ಮತ್ತು ಪ್ರಾಣಾಯಾಮ ತರಬೇತಿ ನೀಡಲಾಗುತ್ತಿದ್ದು, ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಈ ಸಂಖ್ಯೆ 94488 73999 ನ್ನು ಸಂಪರ್ಕಿಸಬಹುದೆಂದು ವೆಂಕಟೇಶ್ ತಿಳಿಸಿದ್ದಾರೆ.