ಮಡಿಕೇರಿ, ಏ. 27: ಕೊಡಗು ಜಿಲ್ಲೆಯಲ್ಲಿ ಕಾಡಾನೆ ಧಾಳಿಗೆ ಸಾಕು ಪ್ರಾಣಿಗಳು ಸಾವಿಗೀಡಾಗುತ್ತಿದ್ದು, ಪ್ರಸ್ತುತ ಹೊಸೂರು, ಕಳತ್ಮಾಡು ಗ್ರಾಮದಲ್ಲಿ ಹಸು ಬಲಿಯಾಗಿರುತ್ತದೆ. ಹಸು ಬಹು ಉಪಯೋಗಿಯಾಗಿದ್ದು, ಇದನ್ನು ಸಾಕುತ್ತಿರುವ ರೈತರಿಗೆ ಇದು ಜೀವನೋಪಾಯವಾಗಿರುತ್ತದೆ. ಪ್ರತಿ ದಿನಕ್ಕೆ ಸುಮಾರು 15 ಲೀಟರ್ ಹಾಲು ಕೊಡುತ್ತಿದ್ದು, ಇದರ ಜೀವಿತಾವಧಿಯಲ್ಲಿ ಸುಮಾರು 50,000 ಲೀಟರ್ ಹಾಲನ್ನು ನೀಡುತ್ತದೆ. 10 ವರ್ಷಕ್ಕೆ 17.50 ಲಕ್ಷ ರೈತನಿಗೆ ಆದಾಯ ನೀಡುತ್ತದೆ. ಇದಕ್ಕೆ ಸರ್ಕಾರದಿಂದ ಸಿಗುತ್ತಿರುವ ಪರಿಹಾರ ಮೊತ್ತ 10ರಿಂದ 15 ಸಾವಿರ ಮಾತ್ರ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಆದ್ದರಿಂದ ಪರಿಹಾರ ಮೊತ್ತವನ್ನು ವೈಜ್ಞಾನಿಕವಾಗಿ ಪರಿಷ್ಕರಿಸಬೇಕಾಗಿ ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ. ವಿಜು ಸುಬ್ರಮಣಿ ರಾಜ್ಯ ಅರಣ್ಯ ಸಚಿವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.