ಸಿದ್ದಾಪುರ, ಏ. 27: ಸಿದ್ದಾಪುರ ವ್ಯಾಪ್ತಿಯ ಗುಹ್ಯ, ಕರಡಿಗೋಡು, ಅವರೆಗುಂದ, ಭಾಗದಲ್ಲಿ ಕಾಡಾನೆಗಳೊಂದಿಗೆ ಕಾಡು ಕೋಣಗಳ ಉಪಟಳ ತೀವ್ರವಾಗಿದ್ದು ಗ್ರಾಮಸ್ಥರು ಭಯಭೀತರಾಗಿದ್ದಾರೆ.

ಸಿದ್ದಾಪುರದ ಗುಹ್ಯ ಗ್ರಾಮದ ಕಕ್ಕಟುಕಾಡು ಹಾಗೂ ಕರಡಿಗೋಡು ಗ್ರಾಮದ ಹೇರೂರು, ಪಾಲಿಬೆಟ್ಟ ವ್ಯಾಪ್ತಿಯ ಮೇಕೂರು ಹೊಸ್ಕೇರಿಯ ಕಾಫಿ ತೋಟಗಳಲ್ಲಿ ಕಾಡಾನೆಗಳ ಹಿಂಡು ಮರಿ ಆನೆಗಳೊಂದಿಗೆ ಬೀಡುಬಿಟ್ಟಿದ್ದು, ತೋಟ ಮಾಲೀಕರಿಗೆ ಹಾಗೂ ಕಾರ್ಮಿಕರಿಗೆ ತೋಟಕ್ಕೆ ತೆರಳಲು ಭಯ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಗುಹ್ಯ ಗ್ರಾಮದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಕೂಡಲೇ ಅರಣ್ಯಕ್ಕೆ ಅಟ್ಟಬೇಕೆಂದು ಕಾಫಿ ಬೆಳೆಗಾರ ಮಂಡೇಪಂಡ ಕಾರ್ಸನ್ ಅರಣ್ಯ ಇಲಾಖೆಯನ್ನು ಒತ್ತಾಯಿಸಿದರು. ಅಲ್ಲದೆ ಕರಡಿಗೋಡು ಗ್ರಾಮದ ಅವರೆಗುಂದದಲ್ಲಿ ಕಾಡಾನೆಗಳ ಉಪಟಳದೊಂದಿಗೆ ಕಾಡು ಕೋಣಗಳ ಹಿಂಡುಗಳು ಹೆಚ್ಚಾಗಿದ್ದು ಗ್ರಾಮಸ್ಥರು ಓಡಾಡಲು ಭಯವಾಗುತ್ತಿದೆ ಎಂದು ಅವರೆಗುಂದ ನಿವಾಸಿ ಸೋಲಿಗರ ಗಂಗಮ್ಮ ‘ಶಕ್ತಿ’ಗೆ ತಿಳಿಸಿದ್ದಾರೆ. ಹಾಡ ಹಗಲೇ ಕಾಡಾನೆಗಳು ಆಹಾರವನ್ನು ಅರಸಿಕೊಂಡು ಕಾಫಿ ತೋಟಗಳಲ್ಲಿರುವ ಹಲಸಿನ ಕಾಯಿಗಳನ್ನು ತಿನ್ನಲು ಬರುತ್ತಿದ್ದು ಆತಂಕ ಸೃಷ್ಟಿಯಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

-ವಾಸು