ಗೋಣಿಕೊಪ್ಪಲು, ಏ. 27 : ಕೊಡಗು ಯರವ ಸಮಾಜವು ಕ್ರೀಡೆಯ ಮೂಲಕ ತಮ್ಮ ಸಮುದಾಯವನ್ನು ಒಗ್ಗೂಡಿಸುವ ಯತ್ನ ಶ್ಲಾಘನೀಯ ಜಿಲ್ಲೆಯ ಶೋಷಿತ ವರ್ಗವು ಕ್ರೀಡೆ, ವಿದ್ಯೆ ಹಾಗೂ ಸಾಂಸ್ಕøತಿಕವಾಗಿ ಮುಂದೆ ಬರಬೇಕು ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಕದ್ದಣಿಯಂಡ ಹರೀಶ್ ಬೋಪಣ್ಣ ಕರೆ ನೀಡಿದರು.ತಿತಿಮತಿ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಇಂದಿನಿಂದ ಆರಂಭಗೊಂಡ 6ನೇ ವರ್ಷದ ಕುಪ್ಪೆಲೇರಂಡ ಯರವ ಕ್ರಿಕೆಟ್ ಕಪ್‍ಗೆ ವಿದ್ಯುಕ್ತ ಚಾಲನೆ ನೀಡಿ ಅವರು ಮಾತನಾಡಿದರು.ಜಿ.ಪಂ ಸದಸ್ಯೆ ಪಿ.ಆರ್ ಪಂಕಜ ಮಾತನಾಡಿ, ಯರವ ಜನಾಂಗ ತಮ್ಮ ಮನೆತನದ ಹೆಸರನ್ನು ಹೊರಗಿನ ಪ್ರಪಂಚಕ್ಕೆ ಗುರುತು ಮಾಡಲು ಹಾಗೂ ಜನಾಂಗದ ಒಗ್ಗಟ್ಟಿಗೆ ಯರವ ಕ್ರೀಡಾಕೂಟವನ್ನು ಕಳೆದ 5 ವರ್ಷಗಳಿಂದ ಯಶಸ್ವಿಯಾಗಿ ನಡೆಸುತ್ತ ಬಂದಿರುವದು

(ಮೊದಲ ಪುಟದಿಂದ) ಶ್ಲಾಘನೀಯ ಎಂದರು. ಶ್ರೀಮಂಗಲ ಜಿ.ಪಂ ಸದಸ್ಯ ಮುಕ್ಕಾಟಿರ ಶಿವು ಮಾದಪ್ಪ ಮಾತನಾಡಿ, ಕೊಡವ ಕೌಟುಂಬಿಕ ಹಾಕಿ ನಮ್ಮೆಯ ಕನಸನ್ನು ಪಾಂಡಂಡ ಕುಟ್ಟಪ್ಪ ನನಸು ಮಾಡಿದ ನಂತರ ಜನಾಂಗ ಒಗ್ಗೂಡಲು ವೇದಿಕೆ ಯಾಗಿದೆ. ಆ ನಂತರದ ದಿನಗಳಲ್ಲಿ ಕೊಡಗಿನ ಬೇರೆ, ಬೇರೆ ಮೂಲ ನಿವಾಸಿ ಜನಾಂಗ ಕ್ರೀಡೆಯ ಮೂಲಕ ಒಗ್ಗೂಡುತ್ತಿರುವದು ಉತ್ತಮ ಬೆಳವಣಿಗೆ ಎಂದರು.

ಕುಟ್ಟ ತಾ.ಪಂ ಸದಸ್ಯ ಪಲ್ವಿನ್ ಪೂಣಚ್ಚ ಮಾತನಾಡಿ, ಯರವ ಹಾಗೂ ಕೊಡವ ಜನಾಂಗದ ನಡುವೆ ಸಾಕಷ್ಟು ವ್ಯತ್ಯಾಸಗಳು ಕಂಡು ಬಂದಿ ರುವದು ವಿಷಾದನೀಯ. ಸರ್ಕಾರದ ಎಲ್ಲಾ ಸೌಲಭ್ಯಗಳು ಆದಿವಾಸಿಗಳಿಗೆ ಸಿಗುವಂತಾಗಬೇಕೆಂದರು.

ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮಾತನಾಡಿ, ಯರವ ಕ್ರೀಡಾಕೂಟಕ್ಕೆ ಗ್ರಾ.ಪಂ. ಮಟ್ಟದಲ್ಲಿ ಆರ್ಥಿಕ ನೆರವು ನೀಡುವಂತಾಗಬೇಕು.

ಶೋಷಿತ ಆದಿವಾಸಿ ಜನಾಂಗ ಮಧ್ಯವ್ಯಸನದಿಂದ ಮುಕ್ತರಾಗಬೇಕು. ಶಿಕ್ಷಣದಲ್ಲಿ ಆಸಕ್ತಿ ಬೆಳಸಿಕೊಳ್ಳಬೇಕು. ಸಾರಾಯಿ ಮುಕ್ತ ಸಮಾಜ ನಿರ್ಮಾಣ ಮಾಡುವಲ್ಲಿ ಕೈಜೋಡಿಸಬೇಕೆಂದರು.

ತಿತಿಮತಿ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ರಾಜಣ್ಣ ಮಾತನಾಡಿ, ಕಳೆದ 5 ವರ್ಷಗಳಿಂದ ಯರವ ಕ್ರಿಕೆಟ್ ಹಬ್ಬವು ತಿತಿಮತಿ ಪ್ರೌಢಶಾಲಾ ಮೈದಾನದಲ್ಲಿ ಯಶಸ್ವಿಯಾಗಿ ನಡೆಯುತ್ತ ಬಂದಿದೆ ಎಂದು ಪ್ರಶಂಸಿಸಿದರು. ವೇದಿಕೆಯಲ್ಲಿ ಕಾನೂರು ತಾ.ಪಂ ಸದಸ್ಯ ಪ್ರಕಾಶ್, ತಿತಿಮತಿ ಲ್ಯಾಂಪ್ ಸೊಸೈಟಿಯ ಪ್ರಮುಖ ಮಲ್ಲಪ್ಪ, ಕಾರೆಕಂಡಿ ಹಿರಿಯ ಮೇದಪ್ಪ, ತಿತಿಮತಿ ಗ್ರಾ.ಪಂ ಅಧ್ಯಕ್ಷ ಶಿವಕುಮಾರ್ ಉಪಸ್ಥಿತರಿದ್ದರು.

ಕ್ರಿಕೆಟ್ ಹಬ್ಬದಲ್ಲಿ ಒಟ್ಟು 58 ತಂಡಗಳು ಭಾಗವಹಿಸುತ್ತಿರುವದು ದಾಖಲೆಯಾಗಿದೆ. ಕಳೆದ ವರ್ಷ 37 ತಂಡಗಳು ಭಾಗವಹಿಸಿದ್ದವು. ವೇದಿಕೆಗೆ ಅತಿಥಿಗಳನ್ನು ಯರವರ ದುಡಿಕೊಟ್ಟ್ ಮೂಲಕ ಕರೆತರ ಲಾಯಿತು. ಆ ಮೊದಲು ಅಜ್ಜನ ಕೋಲು, ಅಕ್ಷತೆ, ಫಲತಾಂಬೂಲ, ಅರಿಶಿನ ಕುಂಕುಮ ದೊಂದಿಗೆ ಕಳಸವನ್ನಿಟ್ಟು ಪೂಜೆ ಸಲ್ಲಿಸಲಾಯಿತು.

ಕಾರ್ಯದರ್ಶಿ ವೈ.ಸಿ ಸಂಜೀವ ಸ್ವಾಗತ, ನಿರೂಪಣೆ ಸಿದ್ದಪ್ಪ ಹಾಗೂ ವಂದನಾರ್ಪಣೆಯನ್ನು ಅಧ್ಯಕ್ಷ ಶಾಂತಕುಮಾರ್ ನಿರ್ವಹಿಸಿದರು. 6ನೇ ವರ್ಷದ ಕ್ರಿಕೆಟ್ ಹಬ್ಬದ ಅಂಗವಾಗಿ ಸಂಪಿಗೆ ಸಸಿಯನ್ನು ಅತಿಥಿಗಳು ನೆಟ್ಟು ನೀರೆರೆದರು.

-ವರದಿ : ಟಿ.ಎಲ್.ಶ್ರೀನಿವಾಸ್