ಶ್ರೀಮಂಗಲ, ಏ. 27 : ದಿಡ್ಡಳ್ಳಿಯಲ್ಲಿ ಕಾನೂನು ಬಾಹಿರವಾಗಿ ಗುಡಿಸಲು ನಿರ್ಮಿಸಿಕೊಂಡು ವಾಸವಿರುವವರು, ಜೀತದಾಳುಗಳಾಗಿದ್ದಲ್ಲಿ, ಅವರನ್ನು ಮುಖ್ಯವಾಹಿನಿಗೆ ಕೊಂಡೊಯ್ಯುವ ದೃಷ್ಟಿಯಿಂದ ಕಂದಾಯ ಸಚಿವರು ಬೆಂಗಳೂರು ನಗರದ ಪಕ್ಕದಲ್ಲಿರುವ ಸರ್ಕಾರಿ ಜಮೀನು ಗುರುತಿಸಿ ಅಲ್ಲಿ ಎಲ್ಲಾ ಸೌಕರ್ಯಗಳನ್ನೊಳಗೊಂಡ ವಸತಿ ಸಮುಚ್ಛಯ ನಿರ್ಮಿಸಿ ಅಲ್ಲಿಗೆ ಸ್ಥಳಾಂತರಿಸುವದು ಸೂಕ್ತ ; ಆ ಮೂಲಕ ಅವರಿಗೆ ಸರ್ಕಾರವೇ ನಗರದಲ್ಲಿ ಸೂಕ್ತ ಉದ್ಯೋಗ ಒದಗಿಸುವದರ ಮೂಲಕ ಬದುಕು ಕಟ್ಟಿಕೊಡಲಿ; ಯಾವದೇ ಕಾರಣಕ್ಕೂ ದಿಡ್ಡಳ್ಳಿಯಲ್ಲಿ ಕಾನೂನು ಬಾಹಿರವಾಗಿ ಗುಡಿಸಲು ನಿರ್ಮಿಸಿಕೊಂಡು ಅರಾಜಕತೆ ಸೃಷ್ಟಿಸುತ್ತಿರುವವರನ್ನು ವಿಂಗಡಿಸದೆ, ಎಲ್ಲರಿಗೂ ನಗರ ಪ್ರದೇಶದ ಒಂದೇ ಜಾಗದಲ್ಲಿ ಸಕಲ ಸೌಲಭ್ಯಗಳೊಂದಿಗೆ ಪುನರ್ವಸತಿ ಕಲ್ಪಿಸಬೇಕೆಂದು ಯುನೈಟೆಡ್ ಕೊಡವ ಆರ್ಗನೈಸೇಷನ್ - ಯುಕೊ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಗೋಣಿಕೊಪ್ಪಲು ಯುಕೊ ಸಂಘಟನೆಯ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು , ಕಳೆದ ಐದು ದಶಕಗಳಿಂದ, ಜಿಲ್ಲೆಯ ಮಾಜಿಸೈನಿಕರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಕ್ಕೆ ಸೇರಿದ ಕೊಡಗಿನ ಮೂಲ ನಿವಾಸಿಗಳು ಸರ್ಕಾರಿ ಜಾಗ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿ ಕಾದು ಕುಳಿತಿರುವವರ ಅರ್ಜಿಗಳನ್ನು ವಿಲೇವಾರಿ ಮಾಡಿ ಆದ್ಯತೆಯ ಮೇರೆಗೆ ಹಕ್ಕು ಪತ್ರ ಅಥವಾ ಮಂಜೂರಾತಿ ಪತ್ರ ನೀಡದೆ, ದಿಡ್ಡಳ್ಳಿ ಹಾಗೂ ಪಾಲೆಮಾಡುವಿನಲ್ಲಿರುವ ನಕಲಿ ನಿರ್ವಸತಿಕರಿಗೆ ಹಕ್ಕುಪತ್ರ ನೀಡಿದರೆ ಕೊಡಗಿನಾದ್ಯಂತ ಹೋರಾಟ ನಡೆಸಲಾಗುವದು ಎಂದು ಮಂಜು ಚಿಣ್ಣಪ್ಪ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.

ದೇಶದ ಭದ್ರತೆಗೆ ತಮ್ಮ ಜೀವದ ಹಂಗು ತೊರೆದು ದೇಶ ಸೇವೆ ಮಾಡಿ ಕಾನೂನಿನಡಿಯಲ್ಲಿ ಜಾಗ ಮಂಜೂರಾತಿಗೆ ಮಾಜಿ ಸೈನಿಕರು ಅಲೆದಾಡುತ್ತಿದ್ದರೂ ಅವರ ಶಾಂತಿಯುತ ಹೋರಾಟವನ್ನು ಸರಕಾರ ಕಡೆಗಣಿಸಿದೆ. ಆದರೆ ಕಾನೂನನ್ನು ಗಾಳಿಗೆ ತೂರಿ ತೀವ್ರಗಾಮಿಗಳಂತೆ ವರ್ತಿಸುತ್ತಾ ಹೋರಾಟ ನಡೆಸುತ್ತಿರುವ ನಕಲಿ ನಿರಾಶ್ರಿತರ ಬೇಡಿಕೆಗಳನ್ನು ಸರಕಾರ ಈಡೇರಿಸಲು ಸಮರೋಪಾದಿ ಪ್ರಯತ್ನ ನಡೆಸುತ್ತಿರುವದು ಮುಂದಿನ ದಿನಗಳಲ್ಲಿ ಶಾಂತಿಯುತ ಹೋರಾಟಕ್ಕಿಂತ ಕಾನೂನನ್ನು ಕೈಗೆತ್ತಿಕೊಂಡು ಹೋರಾಟ ಮಾಡುವದನ್ನೆ ಸರಕಾರ ಪುರಸ್ಕರಿಸಲಿದೆ ಎನ್ನುವದಕ್ಕೆ ದಿಡ್ಡಳ್ಳಿ ಪ್ರಕರಣ ನೈಜ ಉದಾಹರಣೆ ಎಂದು ಮಂಜು ಚಿಣ್ಣಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರಶಾಂತವಾಗಿದ್ದ ಕೊಡಗಿಗೆ ಇದೀಗ ಕೆಲವು ದೇಶದ್ರೋಹಿಗಳು, ವಿಧ್ವಂಸಕ ಶಕ್ತಿಗಳು ನುಸುಳಿದ್ದು, ದಿಡ್ಡಳ್ಳಿ ಹಾಗೂ ಪಾಲೆಮಾಡುವನ್ನು ತಮ್ಮ ಶಕ್ತಿ ಕೇಂದ್ರವನ್ನಾಗಿಸುವ ಪ್ರಯತ್ನ ನಡೆಸುತ್ತಿವೆ. ಸಂಘರ್ಷವನ್ನು ಹುಟ್ಟುಹಾಕುವದೇ ಇವರ ಉದ್ದೇಶವಾಗಿದ್ದು, ಕೊಡಗಿನಲ್ಲಿ ಜನಾಂಗೀಯ ಗಲಬೆಯೆಬ್ಬಿಸುವದರ ಮೂಲಕ ಸಂಘರ್ಷ ನಡೆಸಲು ಹುನ್ನಾರ ನಡೆಸಲಾಗಿದೆ. ಇದರ ಬಗ್ಗೆ ಸರ್ಕಾರಕ್ಕೆ ಮಾಹಿತಿಯಿದ್ದರೂ ಜಾಣಮೌನ ವಹಿಸಿದೆ ಎಂದು ಅವರು ಕಿಡಿ ಕಾರಿದರು.

ಇತ್ತೀಚೆಗೆ ಪಾಲೆಮಾಡುವಿನಲ್ಲಿ ಉದ್ದೇಶಪೂರ್ವಕವಾಗಿಯೇ ರಸ್ತೆಗೆ ಟಿಪ್ಪು ಹೆಸರನ್ನಿಟ್ಟು ಒಂದು ವರ್ಗದವರ ಭಾವನೆಯನ್ನು ಕೆರಳಿಸಿ ಗಲಭೆಯೆಬ್ಬಿಸಲು ಸಂಚು ರೂಪಿಸಲಾಗಿತ್ತು. ಇದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಅವರು ಹೇಳಿದರು. ಬೆತ್ತಲಾಗುವದು, ಆತ್ಮಹತ್ಯೆಗೆ ಯತ್ನಿಸುವವರ ಬೆದರಿಕೆ, ಇಲ್ಲ ಸಲ್ಲದ ಆರೋಪಗಳನ್ನು ಮಾಡುವದು, ವೈಯಕ್ತಿಕವಾಗಿ ನಿಂದಿಸುವದು ಇವೆಲ್ಲವೂ ಸಹ ಇವರ ಹಿಂದಿರುವ ದುಷ್ಟ ಶಕ್ತಿಗಳ ಸಂಚಿನ ಭಾಗವಾಗಿದೆ, ಇವುಗಳನ್ನು ನಿರ್ಲಕ್ಷಿಸಿದರೆ ಮುಂದೊಂದು ದಿನ ಕೊಡಗು ಕೆಂಪು ಉಗ್ರರ ತಾಣವಾಗಿ ಕೊಡಗಿನಲ್ಲಿ ಕಾನೂನು ಸುವ್ಯವಸ್ಥೆಗೆ ಸವಾಲಾಗಿ ಪರಿಣಮಿಸಿ ದೇಶದ ಭದ್ರತೆಗೆ ಧಕ್ಕೆ ತರುವಂತಹ ಚಟುವಟಿಕೆಗಳ ತಾಣವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಮುಂದಿನ ದಿನಗಳಲ್ಲಿ ಯುಕೊ ಸಂಘಟನೆ ವತಿಯಿಂದ ಕಳೆದ 5 ದಶಕಗಳಿಂದ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿ ಕಾದು ಕುಳಿತಿರುವ ಜಿಲ್ಲೆಯ ಮೂಲ ನಿವಾಸಿಗಳ ಪರವಾಗಿ ಸರಕಾರಕ್ಕೆ ನಿಯೋಗ ಕೊಂಡೊಯ್ಯಲಾಗುವದು. ಸರಕಾರವು ಕೊಡಗಿನ ನೈಜ ಮೂಲ ನಿವಾಸಿ ನಿರಾಶ್ರಿತರನ್ನು ನಿರ್ಲಕ್ಷಿಸಿದರೆ ಜಿಲ್ಲೆಯಾದ್ಯಂತ ಮೂಲ ನಿವಾಸಿಗಳನ್ನು ಸಂಘಟಿಸಿ ಬೆಂಗಳೂರಿಗೆ ಪಾದ ಯಾತ್ರೆ ನಡೆಸಿ ವಿಧಾನ ಸೌಧಕ್ಕೆ ಮುತ್ತಿಗೆ ಹಾಕಲಾಗುವದು ಎಂದು ಎಚ್ಚರಿಸಿದರು.

ಗೋಷ್ಠಿಯಲ್ಲಿ ಮಚ್ಚಮಾಡ ಅನೀಶ್ ಮಾದಪ್ಪ, ನೆಲ್ಲಮಕ್ಕಡ ಮಾದಯ್ಯ, ಉಳುವಂಗಡ ಲೋಹಿತ್ ಭೀಮಯ್ಯ ಹಾಜರಿದ್ದರು.