ಮಡಿಕೇರಿ, ಏ. 27 : ಕೊಡಗು ಗೌಡ ಯುವ ವೇದಿಕೆ ವತಿಯಿಂದ ಇಲ್ಲಿನ ಜ. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಗೌಡ ಜನಾಂಗ ಬಾಂಧವರ ನಡುವೆ ನಡೆಯುತ್ತಿರುವ ಪೈಕೇರ ಕ್ರಿಕೆಟ್ ಕಪ್ ಉತ್ಸವದಲ್ಲಿ ಯಾಲದಾಳು, ಕತ್ರಿಕೊಲ್ಲಿ, ಮುಕ್ಕಾಟಿ ತಂಡಗಳು ಮುನ್ನಡೆ ಸಾಧಿಸಿವೆ.

ಇಂದು ನಡೆದ ಪಂದ್ಯಾವಳಿಯಲ್ಲಿ ಬೈರುಡ ತಂಡ 6 ವಿಕೆಟ್‍ಗೆ 39 ರನ್ ಗಳಿಸಿದರೆ, ನೆರಿಯನ ತಂಡ 3 ವಿಕೆಟ್‍ಗೆ 42 ರನ್‍ಗಳಿಸಿ 7 ವಿಕೆಟ್‍ಗಳ ಜಯ ಸಂಪಾದಿಸಿತು. ಊರುಬೈಲು ತಂಡ 2 ವಿಕೆಟ್‍ಗೆ 87 ರನ್ ಗಳಿಸಿದರೆ, ಕಾಕೇರಿ ತಂಡ 5 ವಿಕೆಟ್‍ಗೆ 59 ರನ್ ಗಳಿಸಿ 28 ರನ್‍ಗಳ ಅಂತರದಿಂದ ಸೋಲನುಭವಿಸಿತು. ಊರುಬೈಲು ಹರೀಶ್ 35 ರನ್ ಗಳಿಸಿ ಗಮನ ಸೆಳೆದರು. ಹೊಸಮನೆ ಹಾಗೂ ಚೊಕ್ಕಾಡಿ ತಂಡಗಳ ನಡುವಿನ ಪಂದ್ಯದಲ್ಲಿ ಚೊಕ್ಕಾಡಿ ತಂಡ 8 ವಿಕೆಟ್‍ಗೆ 25 ರನ್ ಗಳಿಸಿದರೆ, ಹೊಸಮನೆ ತಂಡ 1 ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿ 9 ವಿಕೆಟ್‍ಗಳ ಜಯ ಸಂಪಾದಿಸಿತು. ಕಾಳೆಮನೆ ತಂಡ 6 ವಿಕೆಟ್‍ಗೆ 43 ರನ್ ಗಳಿಸಿದರೆ, ಮುಕ್ಕಾಟಿ ತಂಡ 2 ವಿಕೆಟ್‍ಗೆ 48 ರನ್ ಗಳಿಸಿ 8 ವಿಕೆಟ್‍ಗಳ ಜಯ ಸಂಪಾದಿಸಿತು.

ಮುಕ್ಕಾರ ದಿಲೀಪ್ 28 ರನ್ ಗಳಿಸಿ ಗಮನ ಸೆಳೆದರು. ಊರುಬೈಲು ಹಾಗೂ ಕತ್ರಿಕೊಲ್ಲಿ ತಂಡಗಳ ನಡುವಿನ ಮತ್ತೊಂದು ಪಂದ್ಯದಲ್ಲಿ ಊರುಬೈಲು ತಂಡ ಯಾವದೇ ವಿಕೆಟ್ ನಷ್ಟವಿಲ್ಲದೆ 57 ರನ್ ಗಳಿಸಿದರೆ, ಉತ್ತರವಾಗಿ ಆಡಿದ ಕತ್ರಿಕೊಲ್ಲಿ ತಂಡ 4 ಓವರ್‍ನಲ್ಲಿ ಯಾವದೇ ವಿಕೆಟ್ ನಷ್ಟವಿಲ್ಲದೆ ಗುರಿ ಸಾಧಿಸಿ 10 ವಿಕೆಟ್‍ಗಳ ಜಯ ಸಂಪಾದಿಸಿತು.

ಉಳುವಾರನ ಹಾಗೂ ಹೊಸಮನೆ ತಂಡಗಳ ನಡುವಿನ ಇನ್ನೊಂದು ಪಂದ್ಯದಲ್ಲಿ ಉಳುವಾರನ 3 ವಿಕೆಟ್‍ಗೆ 37 ರನ್ ಗಳಿಸಿದರೆ, ಹೊಸಮನೆ ತಂಡ ಯಾವದೇ ವಿಕೆಟ್ ನಷ್ಟವಿಲ್ಲದೆ 42 ರನ್‍ಗಳಿಸಿ 10 ವಿಕೆಟ್‍ಗಳ ಜಯ ಸಂಪಾದಿಸಿತು. ಪೊನ್ನೇಟಿ ತಂಡ 8 ವಿಕೆಟ್‍ಗೆ 33 ರನ್ ಗಳಿಸಿದರೆ, ನೂಜಿಬೈಲು ತಂಡ ವಿಕೆಟ್ ಕಳೆದುಕೊಂಡು 8 ವಿಕೆಟ್‍ಗಳ ಜಯ ಸಂಪಾದಿಸಿತು.

ಮುಕ್ಕಾಟಿ ಹಾಗೂ ನೆರಿಯನ ತಂಡಗಳ ನಡುವಿನ ಮತ್ತೊಂದು ಪಂದ್ಯದಲ್ಲಿ ನೆರಿಯನ ತಂಡ 4 ವಿಕೆಟ್‍ಗೆ 37 ರನ್ ಗಳಿಸಿದರೆ, ಮುಕ್ಕಾಟಿ ತಂಡ 3 ವಿಕೆಟ್‍ಗೆ 39 ರನ್ ಗಳಿಸಿ 7 ವಿಕೆಟ್‍ಗಳ ಜಯ ಸಂಪಾದಿಸಿತು. ಯಾಲದಾಳು ಹಾಗೂ ಮೂಟೇರ ತಂಡಗಳ ನಡುವಿನ ಪಂದ್ಯದಲ್ಲಿ ಯಾಲದಾಳು ತಂಡ 3 ವಿಕೆಟ್‍ಗೆ 62 ರನ್ ಗಳಿಸಿದರೆ, ಮೂಟೇರ ತಂಡ 6 ವಿಕೆಟ್‍ಗೆ 38 ರನ್ ಗಳಿಸಿ 24 ರನ್‍ಗಳ ಅಂತರದಿಂದ ಸೋಲನುಭವಿಸಿತು.

ಸೂಪರ್ ಓವರ್ : ಹೊಸಮನೆ ಹಾಗೂ ಕತ್ರಿಕೊಲ್ಲಿ ತಂಡಗಳ ನಡುವಿನ ಮತ್ತೊಂದು ಪಂದ್ಯದಲ್ಲಿ ಹೊಸಮನೆ ತಂಡ 9 ವಿಕೆಟ್‍ಗೆ 49 ರನ್ ಗಳಿಸಿದರೆ, ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಕತ್ರಿಕೊಲ್ಲಿ ತಂಡ ಕೂಡ 7 ವಿಕೆಟ್‍ಗೆ 49 ರನ್ ಗಳಿಸಿ ಪಂದ್ಯ ಡ್ರಾದಲ್ಲಿ ಅಂತ್ಯ ಕಂಡಿತು. ಈ ಸಂದರ್ಭ ಸೂಪರ್ ಓವರ್ ಅವಕಾಶ ನೀಡಲಾಗಿ ಒಂದು ಓವರ್‍ನಲ್ಲಿ ಕತ್ರಿಕೊಲ್ಲಿ ತಂಡ 2 ವಿಕೆಟ್‍ಗೆ 9 ರನ್ ಗಳಿಸಿದರೆ, ಹೊಸಮನೆ ತಂಡ 1 ವಿಕೆಟ್‍ಗೆ 4 ರನ್ ಗಳಿಸಿ 5 ರನ್‍ಗಳ ಅಂತರದಿಂದ ಸೋಲನುಭವಿಸಿತು.

ಯಾಲದಾಳು ಹಾಗೂ ತೆಕ್ಕಡೆ ತಂಡಗಳ ನಡುವಿನ ಇನ್ನೊಂದು ಪಂದ್ಯದಲ್ಲಿ ತೆಕ್ಕಡೆ ತಂಡ 1 ವಿಕೆಟ್‍ಗೆ 29 ರನ್ ಮಾತ್ರ ಕಲೆ ಹಾಕಿತು. ಉತ್ತರವಾಗಿ ಆಡಿದ ಯಾಲದಾಳು ತಂಡ ಯಾವದೇ ವಿಕೆಟ್ ನಷ್ಟವಿಲ್ಲದೆ 32 ರನ್ ಗಳಿಸಿ 10 ವಿಕೆಟ್‍ಗಳ ಜಯ ಸಂಪಾದಿಸಿತು. ನಿಡ್ಯಮಲೆ ಹಾಗೂ ನೂಜಿಬೈಲು ತಂಡಗಳ ನಡುವಿನ ಕೊನೆಯ ಪಂದ್ಯ ಮಳೆಯ ಕಾರಣದಿಂದ ಮುಂದೂಡಲ್ಪಟ್ಟಿತು.