ಶನಿವಾರಸಂತೆ, ಏ. 27: ಕೊಡ್ಲಿಪೇಟೆ ವ್ಯಾಪ್ತಿಯ ಕಿರಿಕೊಡ್ಲಿಮಠದ ವತಿಯಿಂದ ಗುರುಸಿದ್ದ ವಿದ್ಯಾಪೀಠದ ಆವರಣದಲ್ಲಿ ಡಾ. ಶಿವಕುಮಾರ ಸ್ವಾಮಿ ಅವರ 110ನೇ ಜನ್ಮದಿನೋತ್ಸವ ಮತ್ತು ಲಿಂಗೈಕ ಗುರುಗಳ ಸಂಸ್ಮರಣೆ ಪ್ರಯುಕ್ತ ನೂತನವಾಗಿ ನಿರ್ಮಾಣಗೊಂಡಿರುವ ಮಂಜುನಾಥ ಸ್ವಾಮಿ ದೇವಾಲಯ ಉದ್ಘಾಟನೆ, ವಿಗ್ರಹ ಪ್ರತಿಷ್ಠಾಪನೆ ಹಾಗೂ ಪ್ರಾರ್ಥನಾ ಮಂದಿರ ಲೋಕಾರ್ಪಣೆ, ಶಿವದೀಕ್ಷಾ ಸಂಸ್ಕಾರ ಇಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ ಮಾತನಾಡುತ್ತಾ, ಕ್ರಿಯಾಶೀಲತೆ ಹಾಗೂ ಚಟುವಟಿಕೆಯಿಂದ ಮಠಮಾನ್ಯಗಳು ಪ್ರಗತಿ ಸಾಧಿಸಲು ಸಾಧ್ಯ ಎಂದು ಹೇಳಿದರು.

ರಾಜ್ಯದಲ್ಲಿ 2 ಸಾವಿರ ವೀರಶೈವ ಮಠಗಳಿದ್ದು, ಚಟುವಟಿಕೆಯಿಂದ ಕಾರ್ಯನಿರ್ವಹಿಸುತ್ತಿವೆ. ಸಮಾಜ ಹಾಗೂ ಸಂನ್ಯಾಸಿಗಳ ನಡುವೆ ಅವಿನಾಭಾವ ಸಂಬಂಧವಿದೆ. ಮಹಾತ್ಮರ

(ಮೊದಲ ಪುಟದಿಂದ) ಸ್ಮರಣೆಯಿಂದ ಜೀವನ ಸಾರ್ಥಕ ವೆನಿಸುತ್ತದೆ. ಸಂಸ್ಕಾರಗಳಲ್ಲಿ ಶಿವದೀಕ್ಷಾ ಸಂಸ್ಕಾರವೂ ಮುಖ್ಯವೆನಿಸುತ್ತದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಅರಮೇರಿ ಕಳಂಚೇರಿ ಮಠಾಧೀಶ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಲಕ್ಷಾಂತರ ಮಂದಿಗೆ ಜ್ಞಾನ ದೀವಿಗೆ ಹಚ್ಚಿದ ಮಹಾನ್ ಗುರು ಶಿವಕುಮಾರ ಸ್ವಾಮೀಜಿ ಎಂದು ಕೊಂಡಾಡಿದರು. ಮಠದಿಂದ ಶಿಕ್ಷಣ ಬದುಕಿಗೆ ಬೇಕಾದ ಸಂಸ್ಕಾರ ನೀಡುತ್ತಿದೆ. ಶರಣರ ಚಿಂತನೆ, ಆಲೋಚನೆಗಳ ಅನುಸರಣೆಯಿಂದ ಜೀವನ ಸಾಕ್ಷಾತ್ಕಾರ ಮಾಡಿಕೊಳ್ಳಬಹುದು ಎಂದರು.

ಅಖಿಲ ಭಾರತ ವೀರಶೈವ ಮಹಾಸಭಾದ ವಾಗೀಶ್ ಪ್ರಸಾದ್ ಮಾತನಾಡಿ, ವೀರಶೈವ ಲಿಂಗಾಯುತ ಮಠಗಳು, ದೀನ ದುರ್ಬಲರಿಗೂ ಸಮಾನತೆ ನೀಡಿ ಮಾದರಿಯಾಗಿವೆ. ಶಿಕ್ಷಣ ಕ್ಷೇತ್ರಕ್ಕೆ ಮಠಾಧೀಶರ ಕೊಡುಗೆ ಅಪಾರವಾಗಿದ್ದು, ಮಕ್ಕಳನ್ನು ಮಠಾಧೀಶರನ್ನಾಗಿ ಮಾಡುವ ಮನೋಭಾವದ ತಂದೆ ತಾಯಿ ವಿರಳ ಎಂದು ಹೇಳಿದರು.

ಕಿರಿಕೊಡ್ಲಿ ಮಠಾಧೀಶ ಶ್ರೀ ಸದಾಶಿವಸ್ವಾಮಿ, ಮುದ್ದಿನಕಟ್ಟೆ ಮಠಾಧೀಶ ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿ, ಕಲ್ಲುಮಠದ ಶ್ರೀ ಮಹಾಂತ ಸ್ವಾಮೀಜಿ, ಬೆಟ್ಟದಳ್ಳಿ ಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ, ಪಾಂಡುಮಟ್ಟಿ ಮಠದ ಶ್ರೀ ಗುರು ಬಸವ ಸ್ವಾಮೀಜಿ, ಗುರುಲಿಂಗ ಜಂಗಮದೇವರ ಮಠದ ಶ್ರೀ ನಟರಾಜ ಸ್ವಾಮೀಜಿ, ಬೆಟ್ಟದಪುರ ವಿರಕ್ತ ಮಠದ ಶ್ರೀ ಚೆನ್ನಬಸವದೇಶೀ ಕೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು.

ಕಾರ್ಯಕ್ರಮದಲ್ಲಿ ವಿವಿಧ ಶಾಲಾ ವಿದ್ಯಾರ್ಥಿನಿಯರು ಭರತನಾಟ್ಯ ಪ್ರದರ್ಶಿಸಿ ರಂಜಿಸಿದರು. ದಾನಿಗಳಿಗೆ ಗೌರವ ಸಮರ್ಪಣೆ ಮಾಡಲಾಯಿತು. ದಾನಿ ವಾಗೀಶ್ ಪ್ರಸಾದ್ ರೂ. 25 ಸಾವಿರ ದೇಣಿಗೆ ನೀಡಿದರು.

ಕರಡೀಗವಿ ಮಠಾಧೀಶ ಶಂಕರಾನಂದ ಸ್ವಾಮೀಜಿ, ಬಂಡೇ ಮಠಾಧೀಶ ಬಸವಲಿಂಗ ಸ್ವಾಮೀಜಿ, ದಾನಿಗಳಾದ ಕೆ.ಎನ್. ವಸಂತ, ಬಿ.ಜಿ. ಶಾಂತಯ್ಯ, ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಎಸ್. ಮಹೇಶ್, ವೀರಶೈವ ಮಹಾಸಭಾದ ಜಿಲ್ಲಾ ಅಧ್ಯಕ್ಷ ಡಿ.ಬಿ. ಧರ್ಮಪ್ಪ, ತಾಲೂಕು ಘಟಕದ ಅಧ್ಯಕ್ಷ ವಿಶ್ವನಾಥ್, ಜಿ.ಎಂ. ಕಾಂತರಾಜ್, ಅಶ್ವಥ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.