ಮಡಿಕೇರಿ, ಏ.27 : ‘ಭಯೋತ್ಪಾದನಾ ರಾಜಕೀಯದ ವಿರುದ್ಧ ಒಂದಾಗೋಣ’ ಎಂಬ ವಿಚಾರದಡಿ ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ರಾಷ್ಟ್ರೀಯ ಅಭಿಯಾನವನ್ನು ನಡೆಸುತ್ತಿದ್ದು, ಇದರ ಅಂಗವಾಗಿ ತಾ. 28 ರಂದು (ಇಂದು) ಅಯ್ಯಂಗೇರಿಯ ಜುಮಾ ಮಸೀದಿ ಬಳಿ ಕಾರ್ಯಕ್ರಮ ನಡೆಯಲಿದೆ ಎಂದು ಸಂಘÀಟನೆಯ ಜಿಲ್ಲಾಧ್ಯಕ್ಷ ಅಮಿನ್ ಮೊಹಿಸಿನ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಭಯೋತ್ಪಾದನಾ ರಾಜಕೀಯದ ವಿರುದ್ಧ ಜನ ಜಾಗೃತರಾಗಬೇಕಾಗಿದೆಯೆಂದು ತಿಳಿಸಿದರು. ಮಧ್ಯಾಹ್ನ 3 ಗಂಟೆಗೆ ಅಯ್ಯಂಗೇರಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಎಸ್‍ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್, ಪಿಎಫ್‍ಐ ಜಿಲ್ಲಾಧ್ಯಕ್ಷ ಟಿ.ಹೆಚ್.ಹ್ಯಾರೀಸ್, ಎಸ್‍ಡಿಪಿಐ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಡ್ಕಾರ್ ಹಾಗೂ ಉಪಾಧ್ಯಕ್ಷ ಲಿಯಾಕತ್ ಆಲಿ ಪಾಲ್ಗೊಳ್ಳಲಿದ್ದಾರೆ.

ಮುಖ್ಯ ಭಾಷಣಕಾರರಾಗಿ ಪಿಎಫ್‍ಐ ರಾಜ್ಯ ಸದಸ್ಯ ಶಾಫಿ ಬಳ್ಳಾರೆ, ಕೇರಳದ ಎಸ್‍ಡಿಪಿಐ ಸದಸ್ಯ ಅಬ್ದುಲ್ ಜಲೀಲ್ ಸಖಾಫಿ ಹಾಗೂ ಕಾಸರಗೊಡು ಜಿಲ್ಲಾ ಎಸ್‍ಡಿಪಿಐ ಅಧ್ಯಕ್ಷರಾದ ಅಬ್ದುಲ್‍ಸಲಾಂ ಪಾಲ್ಗೊಳ್ಳಲಿದ್ದಾರೆ ಎಂದು ಅಮಿನ್ ಮೊಹಿಸಿನ್ ತಿಳಿಸಿದರು.

ರಾಷ್ಟ್ರವ್ಯಾಪಿ ನಡೆಯುತ್ತಿರುವ ಅಭಿಯಾನ ತಾ.29 ರಂದು ದೆಹಲಿಯಲ್ಲಿ ಸಮಾರೋಪಗೊಳ್ಳಲಿದೆ. ಶಾಂತಿ ಸೌಹಾರ್ದತೆಯ ಈ ದೇಶದಲ್ಲಿ ಭಯೋತ್ಪಾದನಾ ರಾಜಕೀಯ ಶೋಭೆ ತರುವಂತಹ ಬೆಳವಣಿಗೆ ಅಲ್ಲ. ದೇಶದಲ್ಲಿ ಮೊಸಳೆ ಕಣ್ಣೀರಿನ ರಾಜಕಾರಣಿಗಳು ಹೆಚ್ಚಾಗುತ್ತಿದ್ದು, ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಅಭಿಯಾನ ನಡೆಸುತ್ತಿರುವದಾಗಿ ತಿಳಿಸಿದರು. ಸಂಘಟನೆಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಡ್ಕಾರ್ ಮಾತನಾಡಿ,

ಪಾಲೇಮಾಡು ನಿವಾಸಿಗಳು ಮೇ 2 ಮತ್ತು 3 ರಂದು ನಡೆಸಲು ಉದ್ದೇಶಿಸಿರುವ ಕಾಲ್ನಡಿಗೆ ಜಾಥಾಕ್ಕೆ ಬೆಂಬಲ ನೀಡುವದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಲಿಯಾಕತ್ ಆಲಿ, ನಗರಾಧ್ಯಕ್ಷ ಕೆ.ಜಿ.ಪೀಟರ್, ಪ್ರಮುಖ ಉಸ್ಮಾನ್ ಹಾಗೂ ಅಬ್ದುಲ್ ಸಲಾಂ ಉಪಸ್ಥಿತರಿದ್ದರು.