ಕುಶಾಲನಗರ, ಕೂಡಿಗೆ, ಏ 27: ಕುಶಾಲನಗರದಲ್ಲಿ ಉದ್ಯಮ ಸಂಸ್ಥೆಗಳ ಮೇಲೆ ಐಟಿ ಧಾಳಿ ನಡೆಸಿದ ಅಧಿಕಾರಿಗಳು 2ನೇ ದಿನ ಕೂಡ ದಾಖಲೆಗಳ ಪರಿಶೀಲನೆ ನಡೆಸುತ್ತಿರುವ ಕಾರ್ಯ ಮುಂದುವರೆದಿದೆ. ಸ್ಥಳೀಯ ಪ್ರತಿಷ್ಠಿತ ಎಸ್‍ಎಲ್‍ಎನ್ ಸಮೂಹ ಸಂಸ್ಥೆಗಳ ಮಾಲೀಕರಿಗೆ ಸೇರಿದ ವಿವಿಧ ಉದ್ಯಮ ಸಂಸ್ಥೆಗಳ ಮೇಲೆ ಏಕಕಾಲದಲ್ಲಿ ಧಾಳಿ ನಡೆಸಿದ ಅಧಿಕಾರಿಗಳು ಗುರುವಾರ ಇನ್ನೂ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಗುಡ್ಡೆಹೊಸೂರು ಬಳಿಯಿರುವ ಸಂಸ್ಥೆಯ ಮಾಲೀಕರ ಮನೆಗಳಲ್ಲಿ ಅಧಿಕಾರಿಗಳು ಬುಧವಾರದಿಂದ ನಿರಂತರವಾಗಿ ಶೋಧ ಕಾರ್ಯ ನಡೆಸುತ್ತಿದ್ದು ಸಂಸ್ಥೆಗೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ದೆಹಲಿ, ಬೆಂಗಳೂರು, ಮಂಗಳೂರು ಆಂಧ್ರ, ತಮಿಳುನಾಡು ಗಳಿಂದ ಆಗಮಿಸಿರುವ 60 ಕ್ಕೂ ಹೆಚ್ಚು ಅಧಿಕಾರಿಗಳು ವಿವಿಧೆÉಡೆಯ 15 ಕ್ಕೂ ಅಧಿಕ ಸ್ಥಳಗಳಲ್ಲಿ ತನಿಖೆ ಕೈಗೊಂಡಿದ್ದಾರೆ.

ತನಿಖೆಯ ಬಗ್ಗೆ ಯಾವದೇ ಮಾಹಿತಿಯನ್ನು ಮಾತ್ರ ಅಧಿಕಾರಿಗಳು ಹೊರಗೆಡಹದೆ ಗುಪ್ತವಾಗಿರಿಸಿದ್ದಾರೆ. ಬುಧವಾರ

(ಮೊದಲ ಪುಟದಿಂದ) ಬೆಳಗಿನ ಜಾವ ಮೈಸೂರು ಕಡೆಯಿಂದ ಆಗಮಿಸಿದ 32 ಕ್ಕೂ ಅಧಿಕ ಇನ್ನೋವ ಕಾರುಗಳಲ್ಲಿ ಮೈಸೂರಿನ ಭದ್ರತಾ ವ್ಯವಸ್ಥೆಯೊಂದಿಗೆ ಏಕಕಾಲದಲ್ಲಿ ಧಾಳಿ ನಡೆಸಿದ್ದಾರೆ. ಎಸ್‍ಎಲ್‍ಎನ್ ಸಮೂಹ ಸಂಸ್ಥೆಯ ಮಾಲೀಕರಾದ ವಿಶ್ವನಾಥನ್, ಸಾತಪ್ಪನ್ ಮತ್ತು ಕಚೇರಿಯ ಹಿರಿಯ ವ್ಯವಸ್ಥಾಪಕರುಗಳನ್ನು ಕಳೆದ ಎರಡು ದಿನಗಳಿಂದ ಹೊರ ಜಗತ್ತಿಗೆ ಸಂಪರ್ಕವಿಲ್ಲದಂತೆ ಅಧಿಕಾರಿಗಳು ಮನೆಯಲ್ಲಿ ಕೂಡಿಹಾಕಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ. ಗುರುವಾರ ಸಂಜೆ ವೇಳೆಗೆ ಗುಡ್ಡೆಹೊಸೂರಿನ ನಿವಾಸದಲ್ಲಿ ಸುದೀರ್ಘ ಚರ್ಚೆ ನಡೆಸುತ್ತಿದ್ದ ದೃಶ್ಯವೂ ಕಂಡುಬಂತು.

ಮೂಲಗಳ ಪ್ರಕಾರ ಇನ್ನೂ ಹೆಚ್ಚಿನ ತನಿಖೆಗೆ ಮಂಗಳೂರು ಮತ್ತಿತರ ಕಡೆಯಿಂದ ಹಿರಿಯ ಅಧಿಕಾರಿಗಳು ಆಗಮಿಸಿದ್ದು ಸಂಸ್ಥೆಗೆ ಸೇರಿರುವ ಆಸ್ತಿಪಾಸ್ತಿಗಳ ಬಗ್ಗೆ ಹಾಗೂ ಬ್ಯಾಂಕ್ ಖಾತೆಗಳ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ. ಇನ್ನೂ ತಪಾಸಣಾ ಕಾರ್ಯ ಮುಂದುವರೆಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಅಧಿಕಾರಿಗಳು, ಸಿಬ್ಬಂದಿಗಳು ಕುಶಾಲನಗರದ ಎರಡು ಲಾಡ್ಜ್‍ಗಳಲ್ಲಿ ವಾಸ್ತವ್ಯ ಹೂಡಿದ್ದು ಎರಡು ದಿನಗಳಿಂದ ನಡೆಯುತ್ತಿರುವ ಕಾರ್ಯಾಚರಣೆ ಈ ವ್ಯಾಪ್ತಿಯ ಜನತೆಯಲ್ಲಿ ಸಂಚಲನ ಮೂಡಿಸಿದೆ.

ಕೂಡ್ಲೂರುವಿನÀ ಕೈಗಾರಿಕಾ ಬಡಾವಣೆಯಲ್ಲಿರುವ ಕಾಫಿ ಕ್ಯೂರಿಂಗ್‍ಗಳಲ್ಲಿ ಕಾರ್ಮಿಕರು ಎಂದಿನಂತೆ ಕೆಲಸ ಕಾರ್ಯನಿರ್ವಹಿಸಿದರು. ಆದರೆ, ಐಸಿಡಿ ಕಾಫಿ ಪುಡಿಯ ಘಟಕದಲ್ಲಿ ಗುಮಾಸ್ತ ವರ್ಗದವರು ಮಾತ್ರ ಕಾರ್ಯನಿರ್ವಹಿಸುತ್ತಿದ್ದುದು ್ರ ಕಂಡುಬಂದಿದೆ. ಹಾಗೆಯೇ ಜವಾಹರ್ ಎಂಬವರಿಗೆ ಸೇರಿದ ಸಿಪಿ ಎಕ್ಸ್‍ಪೋರ್ಟ್ ಕಾಫಿ ಘಟಕದಲ್ಲಿ ಕಾರ್ಮಿಕರು ಕಾರ್ಯನಿರ್ವಹಿಸಿಲ್ಲ. ಆದರೆ, ಅಧಿಕಾರಿಗಳನ್ನೊಳಗೊಂಡಂತೆ ಐಟಿ ಅಧಿಕಾರಿಗಳು ಆಡಳಿತ ಕಡತಗಳ ಪರಿಶೀಲನೆ ನಡೆಸುತ್ತಿದ್ದಾರೆ ಎಂಬದು ತಿಳಿದುಬಂದಿದೆ. ಕೂಡ್ಲೂರುವಿನಲ್ಲಿ ಎಸ್.ಎಲ್.ಎನ್ ಸಮೂಹಕ್ಕೆ ಸೇರಿದ 5 ವಿವಿಧ ಉದ್ಯಮ ಘಟಕಗಳಲ್ಲಿ ಒಂದೊಂದು ಘಟಕದಲ್ಲಿಯೂ 10 ಮಂದಿ ದಾಖಲೆಗಳನ್ನು ಪರಿಶೀಲಿಸುತ್ತಿರುವದು ಕಂಡುಬಂದಿದೆ. ಅಲ್ಲದೆ ಜವಾಹರ್ ಮಾಲೀಕತ್ವದ ಸಿ.ಪಿ.ಎಕ್ಸ್‍ಪೋರ್ಟ್ ಘಟಕದಲ್ಲಿಯೂ ಪರಿಶೀಲನೆ ಮುಂದುವರಿದಿದೆ. ಈ ಎಲ್ಲ ಘಟಕಗಳ ಬಳಿ ಮೈಸೂರು ವಿಭಾಗದಿಂದ ಕರೆತಂದ ಪೊಲೀಸರು ಗೇಟ್ ಮುಂಭಾಗದಲ್ಲಿ ಕುಳಿತು ಯಾರನ್ನೂ ಒಳಗೆ ತೆರಳದಂತೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದು ಕಂಡುಬಂದಿದೆ.

ಎಸ್. ಎಲ್.ಎನ್. ಸಮೂಹ ಸಂಸ್ಥೆ ಜೊತೆ ಸಂಪರ್ಕ ಹೊಂದಿರುವ ಕೆಲವು ಪ್ರಮುಖ ವ್ಯಕಿಗಳನ್ನೂ ಇಂದು ಅಧಿಕಾರಿಗಳು ಪ್ರಶ್ನಿಸಿದ್ದು, ಈ ತನಿಖೆ ಮುಗಿಯುವವರೆಗೆ ಬೇರೆ ಕಡೆ ತೆರಳದಂತೆ ಈ ಮಂದಿಗೆ ನಿರ್ದೇಶಿಸಿರುವದಾಗಿ ಹೇಳಲಾಗಿದೆ. “ಶಕ್ತಿ”ಗೆ ಮೂಲವೊಂದರಿಂದ ತಿಳಿದುಬಂದಂತೆ ನಿನ್ನೆ ದಿನ ಮೈಸೂರು ವಿಭಾಗದಿಂದ ಐಟಿ ಅಧಿಕಾರಿಗಳು ತಮ್ಮ ಕಾರುಗಳಲ್ಲಿ ಕರೆ ತರುವ ಸಂದರ್ಭ ಆ ಪೊಲೀಸರಿಗೆ ಮಂಗಳೂರಿನಲ್ಲಿ ಮದುವೆ ಸಮಾರಂಭವೊಂದಕ್ಕೆ ಭದ್ರತೆ ಅವಶ್ಯಕತೆಯಿದ್ದು ಕರೆದೊಯ್ಯುತ್ತಿರುವದಾಗಿ ತಿಳಿಸಿದ್ದಾರೆ. ಧಾಳಿಯ ರಹಸ್ಯ ಕಾಪಾಡಲು ಈ ರೀತಿ ಮಾಹಿತಿಯಿತ್ತಿದ್ದಾರೆ, ಪೊಲೀಸರು ಕುಶಾಲನಗರದಲ್ಲಿ ಬಂದಿಳಿದಾಗಲೇ ಐ ಟಿ ಧಾಳಿಗೆ ಸಹಕರಿಸಲು ತಮ್ಮನ್ನು ಕರೆ ತಂದಿದ್ದಾರೆ ಎಂಬದರ ಅರಿವಾಗಿದೆ. ಇಂದು ಮಹಿಳಾ ಪೊಲೀಸರನ್ನು ಅವರವರ ಕರ್ತವ್ಯ ಸ್ಥಳಕ್ಕೆ ವಾಪಸ್ ಕಳುಹಿಸಿದ್ದು ಪುರುಷ ಪೊಲೀಸ್ ತಂಡವನ್ನು ಮಾತ್ರ ಉಳಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.