ಮಡಿಕೇರಿ, ಏ. 27 : ನಗರಸಭೆ ಕೊಡಗು ಜಲ್ಲೆಯ ಮಟ್ಟಿಗೆ ಪ್ರತಿಷ್ಠಿತ ಸ್ಥಳೀಯ ಸಂಸ್ಥೆ. ಪಟ್ಟಣ ಪಂಚಾಯಿತಿಗಳು, ತಾಲೂಕು ಪಂಚಾಯಿತಿಗಳು, ಗ್ರಾಮ ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯತ್ ನಡುವಲ್ಲಿ ನಗರಸಭೆಗೆ ತನ್ನದೇ ಆದ ಗೌರವಯುತ ಸ್ಥಾನವಿದೆ. ಕೊಡಗಿನ ಜಿಲ್ಲಾ ಕೇಂದ್ರ ಮಡಿಕೇರಿಯನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ನಗರಸಭೆಯ ಮೇಲಿದೆ.ಆದರೆ..., ನಡೆಯುತ್ತಿರುವದೇನು...?

(ಮೊದಲ ಪುಟದಿಂದ) ನಿನ್ನೆ ನಡೆದ ಸಾಮಾನ್ಯ ಸಭೆಯಲ್ಲಿ ಯುಜಿಡಿ (ಒಳಚರಂಡಿ) ಕಾಮಗಾರಿಯಿಂದ ನಗರದ ರಸ್ತೆಗಳೆಲ್ಲಾ ಹಾಳಾಗುತ್ತಿದ್ದು, ಕಾಂಕ್ರಿಟ್ ರಸ್ತೆಗಳು ಜೆಸಿಬಿಯ ಬಾಯಿಗೆ ಸಿಲುಕಿ ಬಳಲುತ್ತಿವೆ. ಆದ್ದರಿಂದ ಯುಜಿಡಿ ಕಾಮಗಾರಿಯನ್ನು ತಡೆಹಿಡಿಯಬೇಕು. ಯಾವದೇ ಕಾರಣಕ್ಕೂ ಕಾಮಗಾರಿ ಮುಂದುವರೆಸಲು ಅವಕಾಶ ನೀಡಬಾರದು ಎಂದು ಕೆಲ ಸದಸ್ಯ ಮಹಾಶಯರು ಪಟ್ಟು ಹಿಡಿದಿದ್ದೆ ತಡ ನಗರಸಭಾಧ್ಯಕ್ಷರು ಕಾಮಗಾರಿಯನ್ನು ತಡೆ ಹಿಡಿಯುವದಾಗಿ ಘೋಷಿಸಿಯೆ ಬಿಟ್ಟರು. ಮಾತ್ರವಲ್ಲ ಒಂದು ವೇಳೆ ಕಾಮಗಾರಿ ಮುಂದುವರೆಸಲು ಒತ್ತಾಯ ಮಾಡಿದರೆ ಕೆಲ ನಿಬಂಧನೆಗಳನ್ನು ವಿಧಿಸದೆ ಅವಕಾಶ ನೀಡಲಾರೆ ಎಂದು ಹೇಳಿದರು.

ಆದರೇನು ಪ್ರಯೋಜನ...? ಇಂದು ಕಾನ್ವೆಂಟ್ ಜಂಕ್ಷನ್ ರಸ್ತೆಯಲ್ಲಿ ಒಳಚರಂಡಿ ಕಾಮಗಾರಿ ನಿರಾಯಸವಾಗಿ ನಡೆಯುತ್ತಿತ್ತು. ಜೆಸಿಬಿ ರಸ್ತೆಯನ್ನು ಕೊರೆದು ಕುಲಗೆಡಿಸುತ್ತಿತ್ತು.

ಇದನ್ನು ಗಮನಿಸಿದಾಗ ನಗರಸಭೆಯಲ್ಲಿ ಕೈಗೊಂಡ ತೀರ್ಮಾನಕ್ಕೆ ಬೆಲೆ ಇಲ್ಲವೇ ? ಅಥವಾ ಸಭೆಯಲ್ಲಿ ಕೈಗೊಂಡ ತೀರ್ಮಾನದ ಆದೇಶ ಕಾಮಗಾರಿಗೆ ಸಂಬಂಧಿಸಿದವರಿಗೆ ತಲುಪಿಲ್ಲವೆ? ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಮೂಡಿತ್ತು. ಈ ಬಗ್ಗೆ ಶಕ್ತಿಯೊಂದಿಗೆ ಮಾತನಾಡಿದ ನಗರಸಭಾಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರು ಇಂದು ಕೂಡ ಯುಜಿಡಿ ಕಾಮಗಾರಿ ಮುಂದುವರೆ ದಿದ್ದ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆ ಖುದ್ದು ಸ್ಥಳಕ್ಕೆ ತೆರಳಿ ಸ್ಥಗಿತಗೊಳಿಸು ವಂತೆ ಸಂಬಂಧಿಸಿದ ಅಧಿಕಾರಿ ಪ್ರಸನ್ನ ಅವರಿಗೆ ಸೂಚಿಸಿದ್ದೇನೆ. ಈಗಾಗಲೇ ತೆಗೆಯಲಾಗಿರುವ ಗುಂಡಿಗೆ ಪೈಪ್ ಅಳವಡಿಸಿ ಕಾಮಗಾರಿಯನ್ನು ಸ್ಥಗಿತಗೊಳಿಸುವದಾಗಿ ಪ್ರಸನ್ನ ತಿಳಿಸಿದ್ದಾರೆ ಎಂದು ಮಾಹಿತಿಯಿತ್ತರು.