ಮಡಿಕೇರಿ, ಏ. 27: ಜಿಲ್ಲಾಡಳಿತ ವತಿಯಿಂದ ಬಸವ ಜಯಂತಿ ಕಾರ್ಯಕ್ರಮವನ್ನು ತಾ. 29 ರಂದು ಅರ್ಥಪೂರ್ಣವಾಗಿ ಆಚರಿಸಲು ತೀರ್ಮಾನಿಸಲಾಯಿತು.

ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರ ಅಧ್ಯಕ್ಷತೆಯಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಬಸವ ಜಯಂತಿ ಪೂರ್ವಭಾವಿ ಸಭೆ ನಡೆಯಿತು.

ಬಸವ ಜಯಂತಿ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುವಂತಾಗಬೇಕು. ಆ ನಿಟ್ಟಿನಲ್ಲಿ ಎಲ್ಲಾ ಸಮಾಜದವರು ಪಾಲ್ಗೊಳ್ಳುವಂತಾಗಬೇಕು ಎಂದು ಕೊಡ್ಲಿಪೇಟೆಯ ಕಲ್ಲುಮಠದ ಮಹಂತ ಸ್ವಾಮೀಜಿ ಅವರು ಮನವಿ ಮಾಡಿದರು.

ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷರಾದ ಡಿ.ಬಿ. ಧರ್ಮಪ್ಪ ಮಾತನಾಡಿ, ಬಸವಣ್ಣ ಅವರ ಸಂದೇಶಗಳು ಮನೆ ಮನೆಗೆ ತಲುಪುವಂತಾಗಲು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಅವರು ಕೋರಿದರು.

ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷರಾದ ಮಹೇಶ್ ಅವರು ಮಾತನಾಡಿ ಬಸವ ಜಯಂತಿ ಕಾರ್ಯಕ್ರಮಕ್ಕೆ ಎಲ್ಲಾ ಸಮಾಜದ ವರನ್ನು ಆಹ್ವಾನಿಸಬೇಕು. ಬಸವಣ್ಣ ಅನುಭವ ಮಂಟಪದಲ್ಲಿ ಎಲ್ಲಾ ಸಮಾಜದವರನ್ನು ಒಟ್ಟುಗೂಡಿಸಿ ಸಮಾನತೆಯ ಸಮಾಜ ನಿರ್ಮಿಸಲು ಶ್ರಮಿಸಿದರು. ಆದ್ದರಿಂದ ಎಲ್ಲಾ ಸಮಾಜದವರು ಪಾಲ್ಗೊಳ್ಳು ವಂತಾಗಲು ವಿವಿಧ ಸಮಾಜದ ಮುಖಂಡರನ್ನು ಆಹ್ವಾನಿಸಬೇಕು ಎಂದು ಮನವಿ ಮಾಡಿದರು.

ಬಸವಣ್ಣನವರ ವಚನ ಗಾಯನ ಕಲಾತಂಡಗಳನ್ನು ಆಹ್ವಾನಿಸಬೇಕು. ಕಾರ್ಯಕ್ರಮ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಏರ್ಪಡಿಸಬೇಕು ಎಂದು ಸ್ವಾಮೀಜಿಗಳು ಮನವಿ ಮಾಡಿದರು.

ಮುದ್ದಿನಕಟ್ಟೆ ಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಅವರು ಮಾತನಾಡಿ ಸಾಧಕರಿಗೆ ಸನ್ಮಾನ ಮಾಡಬೇಕು. ಮುಖ್ಯ ಭಾಷಣಕಾರ ರನ್ನು ಆಹ್ವಾನಿಸುವಂತಾಗಬೇಕು ಎಂದರು.

ಶರಣ ಸಾಹಿತ್ಯ ಪರಿಷತ್ ಹಿರಿಯ ಉಪಾಧ್ಯಕ್ಷರಾದ ಚಂದ್ರಶೇಖರ, ಶರಣ ಸಾಹಿತ್ಯ ಪರಿಷತ್ ಸೋಮವಾರಪೇಟೆ ತಾಲೂಕು ಅಧ್ಯಕ್ಷರಾದ ಮಹದೇವಪ್ಪ, ಶರಣ ಸಾಹಿತ್ಯ ಪರಿಷತ್ ಘಟಕದ ಖಜಾಂಚಿ ಡಿ.ಬಿ.ಸೋಮಪ್ಪ, ಪ್ರಮುಖರಾದ ಉದಯ್ ಕುಮಾರ್, ಪ್ರದೀಪ್ ಕುಮಾರ್, ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷಕರಾದ ರಾಜಶೇಖರ್, ಶಿವಶಂಕರಯ್ಯ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಎಲ್.ಎನ್.ಕುಳ್ಳಯ್ಯ, ಮಣಜೂರು ಮಂಜುನಾಥ್ ಇತರರು ಇದ್ದರು.

ಮೇ 2 ರಂದು ಭಗೀರಥ ಜಯಂತಿ: ಮೇ 2 ರಂದು ಭಗೀರಥ ಜಯಂತಿ ಯನ್ನು ಆಚರಿಸಲು ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.

ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಮಾತನಾಡಿ ಸರ್ಕಾರ ಭಗೀರಥ ಜಯಂತಿಯನ್ನು ಆಚರಿಸಲು ನಿರ್ಧರಿಸಿದ್ದು, ಆ ನಿಟ್ಟಿನಲ್ಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಭಗೀರಥರ ಸೇವೆಯನ್ನು ಸ್ಮರಿಸುವಂತಾಗಬೇಕು ಎಂದು ಹೇಳಿದರು.

ಸಮಾಜದ ಪ್ರಮುಖರಾದ ವಾಸುದೇವ, ಕುಮಾರ ಇತರರು ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಎಲ್ಲಾ ರೀತಿಯ ವ್ಯವಸ್ಥೆ ಮಾಡಬೇಕಾಗಿ ಕೋರಿದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಎಲ್.ಎನ್. ಕುಳ್ಳಯ್ಯ, ಮಣಜೂರು ಮಂಜುನಾಥ್ ಇತರರು ಇದ್ದರು.