ಮಡಿಕೇರಿ, ಏ. 27: ಭಾರತೀಯ ಜನತಾ ಪಾರ್ಟಿಯ ರಾಜ್ಯ ಕಾರ್ಯದರ್ಶಿಯಾಗಿ ಕೊಡಗು ಜಿಲ್ಲಾ ಬಿಜೆಪಿಯ ಮಾಜಿ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಅವರು ನೇಮಕ ಗೊಂಡಿದ್ದಾರೆ. ತಾ. 25 ರಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಅಧಿಕೃತ ಆದೇಶ ಹೊರಡಿಸಿದ್ದು, ಈ ಹೊಣೆಗಾರಿಕೆಯನ್ನು ಅತ್ಯಂತ ಜವಾಬ್ದಾರಿಯುತವಾಗಿ ನಿರ್ವಹಿಸುತ್ತಾ, ಪಕ್ಷದ ಸಂಘಟನೆಯನ್ನು ತಳಮಟ್ಟದಲ್ಲಿ ಸದೃಢಗೊಳಿಸುತ್ತಾ, ಮುಂಬರುವ ಎಲ್ಲಾ ರೀತಿಯ ಸವಾಲುಗಳನ್ನು ಎದುರಿಸಲು (ಮೊದಲ ಪುಟದಿಂದ) ಶಕ್ತಿ ತುಂಬುತ್ತಾ, ಪಕ್ಷದ ವರ್ಚಸ್ಸನ್ನು ಹೆಚ್ಚಿಸುವಲ್ಲಿ ಸತತ ಶ್ರಮಿಸುವಂತೆ ಆದೇಶದಲ್ಲಿ ಸೂಚಿಸಿದ್ದಾರೆ.

ಕಳೆದ ತಿಂಗಳು ಮಾರ್ಚ್ ಏಳರಂದು ದಿಢೀರ್ ಬೆಳವಣಿಗೆ ಯೊಂದಿಗೆ ಕೇವಲ 11 ತಿಂಗಳ ಹಿಂದಿನಿಂದ ಕೊಡಗು ಬಿಜೆಪಿ ಅಧ್ಯಕ್ಷರಾಗಿದ್ದ ಮನು ಮುತ್ತಪ್ಪ ಅವರನ್ನು ಬದಲಾಯಿಸಿ, ನೂತನ ಅಧ್ಯಕ್ಷರಾಗಿ ಬಿ. ಭಾರತೀಶ್ ಅವರನ್ನು ನೇಮಿಸಲಾಗಿತ್ತು. ಆ ವೇಳೆ ಅತೃಪ್ತ ಬೆಂಬಲಿಗರು ಬೆಂಗಳೂರಿಗೆ ನಿಯೋಗ ತೆರಳಿ ಮನು ಮುತ್ತಪ್ಪ ಬದಲಾವಣೆ ಕುರಿತು ಆಕ್ಷೇಪಿಸಿದ್ದ ಬೆನ್ನಲ್ಲೇ, ಯಡಿಯೂರಪ್ಪ ಅವರು ಸೂಕ್ತ ಸ್ಥಾನಮಾನದ ಭರವಸೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಹಿಂದಿನ ಮೂರು ದಶಕದಿಂದ ಬಿಜೆಪಿಯಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡು ಕೊಡಗು ಏಕೀಕರಣ ರಂಗ ಸೇರಿದಂತೆ ಎಲ್ಲಾ ಹೋರಾಟಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಮನು ಮುತ್ತಪ್ಪ ಅವರು, ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ, ಪಕ್ಷದ ವಕ್ತಾರರಾಗಿ, ವೀರಾಜಪೇಟೆ ವಿಧಾನಸಭಾ ಕ್ಷೇತ್ರ ಜನಸ್ಪಂದನ ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಾಗಿಯೂ ಇದ್ದರು.

ಮಡಿಕೇರಿ ತಾಲೂಕು ಕೃಷಿ ಬ್ಯಾಂಕ್ ನಿರ್ದೇಶಕರಾಗಿ, ಹಾಲೀ ಅಧ್ಯಕ್ಷರಾಗಿ, ಸಹಕಾರ ಯೂನಿಯನ್ ಅಧ್ಯಕ್ಷರಾಗಿ, ರಾಜ್ಯ ಮಹಾಮಂಡಲ ನಿರ್ದೇಶಕರಾಗಿದ್ದು, ತಲಕಾವೇರಿ-ಭಾಗಮಂಡಲ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿಯೂ ಕಾರ್ಯನಿರ್ವ ಹಿಸಿದ ಅನುಭವಿ ಯುವ ಮುಂದಾಳು ಆಗಿದ್ದಾರೆ.