ಮಡಿಕೇರಿ, ಏ. 27: ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ತಾ. 27ರ ಸಂಜೆ ಸರಿಸುಮಾರು 4.30ರ ಸಮಯ. ಜನರು ಎಂದಿನಂತೆ ಅವರವರ ಕಾಯಕದಲ್ಲಿ ನಿರತರಾಗಿದ್ದರು. ಸುಡು ಬಿಸಿಲಿನ ವಾತಾವರಣದ ನಡುವೆ ಒಂದೆರಡು ಹನಿ ಮಳೆಯ ಸಿಂಚನವಾಯಿತು. ಆದರೂ ನೇಸರ ನಗುತ್ತಿದ್ದ...ಯು.ಜಿ.ಡಿ. ಕಾಮಗಾರಿಯ ಪರಿಣಾಮದಿಂದ ಮಡಿಕೇರಿ ನಗರದಲ್ಲಿ ಉಂಟಾಗಿರುವ ಧೂಳಿನ ಪರಿಸ್ಥಿತಿ ಶಮನವಾಗಲು ಹಾಗೂ ಇಡೀ ನಗರದಲ್ಲಿ ಕಂಡುಬರುತ್ತಿರುವ ಸೊಳ್ಳೆಗಳ ಹಾವಳಿಗೆ ತುಸು ತಡೆಯಾಗಲು ಮಳೆ ಸುರಿಯಲಿ ಎಂಬ ನಿರೀಕ್ಷೆ ಹೊತ್ತಿದ್ದ ಜನತೆಗೆ ನಿರೀಕ್ಷಿಸದ ರೀತಿಯಲ್ಲಿ ಸುರಿದ ಮಳೆ ಆರಂಭದಲ್ಲಿ ಸಂತಸ ಮೂಡಿಸಿತು.

(ಮೊದಲ ಪುಟದಿಂದ) ಆದರೆ ಮಳೆ ಸುರಿಯುವ ಮುನ್ನ ಡಂ... ಡಮಾರ್... ಎಂದು ಕಿವಿಗಡಚಿಕ್ಕುವ ರೀತಿಯಲ್ಲಿ ಫಟ್... ಫಟಾರ್ ಎಂಬಂತೆ ಮಿಂಚಿನ ಬೆಳಕಿನೊಂದಿಗೆ ಅಬ್ಬರಿಸಿದ ಸಿಡಿಲು ನಗರದ ಜನತೆಯನ್ನು ಬೆಚ್ಚಿಬೀಳಿಸಿತು. ಕೆಲಹೊತ್ತು ಎಲ್ಲರ ಮೊಬೈಲ್, ದೂರವಾಣಿ ಬಳಕೆ ಸ್ಥಗಿತವಾಯಿತು. ರಸ್ತೆಯಲ್ಲಿ ನಡೆದಾಡುತ್ತಿದ್ದವರು, ದ್ವಿಚಕ್ರ ಸವಾರರು ಅಲ್ಲಲ್ಲಿ ಕಟ್ಟಡಗಳ ಆಶ್ರಯ ಪಡೆಯಬೇಕಾಯಿತು. ಆದರೂ ಕೆಲವಾರು ದಿನಗಳ ಬಳಿಕ ಸುರಿದ ಮಳೆ.., ಇಳೆಯನ್ನು ತಂಪಾಗಿಸಿತು ಮಾತ್ರವಲ್ಲ ಬಸವಳಿದಿದ್ದ ಜನರೂ ತುಸು ನೆಮ್ಮದಿಯಾದರು.

ಆದರೆ...

ಕೊಡಗಿನ ಮಳೆಗಾಲ ಎಂದರೆ ಎಲ್ಲರಿಗೂ ಗೊತ್ತು... ಅದರಲ್ಲೂ ಮಡಿಕೇರಿಯ ಮಳೆಗಾಲ ವಿಭಿನ್ನ. ಈ ವರ್ಷದ ಮಳೆಗಾಲವನ್ನು ಎದುರಿಸಲು ಬಹುಶಃ ಇಂದು ಸುರಿದ ಮಳೆ ನಗರದ ಜನತೆ ಹಾಗೂ ಮಡಿಕೇರಿ ನಗರಸಭೆಗೆ ಎಚ್ಚರಿಕೆಯ ಕರೆಗಂಟೆಯಾಗಿದೆ.

ಗುಂಡಿ ಬಿದ್ದಿರುವ ರಸ್ತೆಗಳು... ರಸ್ತೆ ಅಗೆದಿರುವದರಿಂದ ನಡು ನಡುವೆ ತುಂಬಿರುವ ಮಣ್ಣಿನಿಂದ ಕೆಸರಿನಿಂದಾವೃತ್ತಗೊಂಡಿರುವ ನಗರದಲ್ಲಿ ಬಹುತೇಕ ಕಡೆಗಳಲ್ಲಿನ ಜನರು ಮುಂದಿನ ತಿಂಗಳ ಬಳಿಕದ ಮಡಿಕೇರಿ ನಗರದ ಪರಿಸ್ಥಿತಿಯನ್ನು ನೆನೆಸಿಕೊಂಡು ಭಯಪಡುವಂತಾಗಿದೆ. ಅವ್ಯವಸ್ಥೆಯ ಆಗರವಾಗಿರುವ ನಗರದ ರಸ್ತೆಗಳಲ್ಲಿ ಸಂಚರಿಸಿ ಒಂದು ದಿನದ ಮಳೆಗೆ ಜನರು ಮನೆ ಸೇರಿಕೊಂಡಿದ್ದು ಅದೃಷ್ಟವೇ ಸರಿ.

ಕೊಡಗಿನೆಲ್ಲೆಡೆ ವಿವಿಧ ಕ್ರೀಡಾ ಹಬ್ಬಗಳು ನಡೆಯುತ್ತಿದ್ದು, ಕೆಲವೆಡೆಗಳಲ್ಲಿ ಕ್ರೀಡಾಕೂಟಕ್ಕೆ ಮಳೆಯಿಂದ ತುಸು ಅಡಚಣೆಯಾದರೂ ಕ್ರೀಡಾಸ್ಫ್ಪೂರ್ತಿ ಎಂದಿನಂತಿದೆ.

-ಶಶಿ