ಮಡಿಕೇರಿ, ಏ. 27: ಶಾಲೆಗಳಿಗೆ ರಜೆಯಿದ್ದರೂ ಹಳ್ಳಿಗಾಡಿನ ಈ ಶಾಲೆಯ ತುಂಬಾ ಮಕ್ಕಳು ಓಡಾಡುತ್ತಿದ್ದಾರೆ. 6 ರಿಂದ ಹಿಡಿದು 16ರ ವರೆಗೆ ಹುಡುಗ-ಹುಡುಗಿಯೆನ್ನದೆ ಎಲ್ಲರೂ ಒಂದಾಗಿ ಏನೇನೋ ಕಲಿಯುತ್ತಿದ್ದಾರೆ. ಕರಕುಶಲ, ಚಿತ್ರಕಲೆ, ನೃತ್ಯ, ಸಂಗೀತ, ಯೋಗ, ಕರಾಟೆ.., ಹೀಗೆ ಎಲ್ಲವನ್ನೂ ಒಂದೇ ಸೂರಿನಡಿ ಕಲಿಯುತ್ತಾ ಅವರವರಲ್ಲಿರುವ ಪ್ರತಿಭೆ ಅನಾವರಣಗೊಳ್ಳುತ್ತಿದೆ.

ಸಾಮಾನ್ಯವಾಗಿ ರಜಾದಿನಗಳಲ್ಲಿ ನಗರ ಪ್ರದೇಶಗಳಲ್ಲಿ ವಿವಿಧ ಸಂಘ-ಸಂಸ್ಥೆಗಳು, ಮಕ್ಕಳಿಗೆ ಬೇಸಿಗೆ ಶಿಬಿರಗಳನ್ನು ಏರ್ಪಡಿಸಿ, ಒಂದಿಷ್ಟು ಫೀಸ್ ನಿಗದಿಪಡಿಸಿ ಕಲಿಸುವ ಪ್ರಯತ್ನ ಮಾಡುತ್ತಾರೆ. ಆದರೆ, ಗ್ರಾಮೀಣ ಸೊಗಡಿನ ಮಕ್ಕಳಿಗೆ ಹಳ್ಳಿಗಾಡಿನ ಆಟೋಟೋಪಗಳೇ ಗತಿ ಎಂಬಂತಾಗಿರುತ್ತದೆ. ಆದರೆ ಇದಕ್ಕೆ ತದ್ವಿರುದ್ಧ ಎಂಬಂತೆ ಮಕ್ಕಂದೂರು ಶಾಲೆಯಲ್ಲಿ ಗ್ರಾಮೀಣ ಮಕ್ಕಳಿಗೆ ಶಿಬಿರ ಏರ್ಪಡಿಸಿ ಅವರುಗಳಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸುವ ಕೆಲಸವಾಗುತ್ತಿದೆ.

ತಾಲೂಕು ಬಾಲಭವನ ಸಮಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಇವರ ಮೂಲಕ ಈ ಒಂದು ಕಾರ್ಯ ನಡೆಯುತ್ತಿದೆ. ತಾ. 20 ರಿಂದ ಶಿಬಿರ ಆರಂಭಗೊಂಡಿದ್ದು, 29ರ ವರೆಗೆ ನಡೆಯಲಿದೆ. ಶಿಬಿರದಲ್ಲಿ 50 ಮಕ್ಕಳಿಗೆ ಅವಕಾಶವಿತ್ತಾದರೂ, ಇದೀಗ ಮಕ್ಕಳ ಸಂಖ್ಯೆ 92ಕ್ಕೇರಿರುವದು ಶಿಬಿರದ ಯಶಸ್ವಿಗೆ ಸಾಕ್ಷಿಯಾಗಿದೆ.

ಬೆಳಿಗ್ಗೆ 10 ಗಂಟೆಯಿಂದ ಆರಂಭಗೊಳ್ಳುವ ಶಿಬಿರದಲ್ಲಿ ಮಕ್ಕಳಿಗೆ ಸಂಪನ್ಮೂಲ ವ್ಯಕ್ತಿಗಳಿಂದ ವಿವಿಧ ರೀತಿಯ ಕಲೆಗಳನ್ನು ಹೇಳಿಕೊಡಲಾಗುತ್ತಿದೆ. ಬಹುತೇಕ ಮಕ್ಕಳು ಸಂಪನ್ಮೂಲ ವ್ಯಕ್ತಿಗಳು ಹೇಳಿಕೊಡುತ್ತಿರುವ ಕಲೆಗಳನ್ನು ಕರಗತ ಮಾಡಿಕೊಂಡಿರುವದು ಕಾಣಬರುತ್ತಿದೆ.

ಕಸದಿಂದ ರಸ

ಕರಕುಶಲತೆಯಲ್ಲಿ ಮಕ್ಕಳು ಪಳಗಿದಂತೆ ಕಾಣುತ್ತಿದೆ. ಅದಕ್ಕೆ ಪೂರಕವೆಂಬಂತೆ ‘ಕಸದಿಂದ ರಸ’ ಎಂಬಂತೆ ಮಕ್ಕಳ ಕೈಚಳಕದಿ ಮೂಡಿಬಂದಿರುವ ವಿವಿಧ ಕಲೆಗಳನ್ನು ರಚಿಸಿರುವದು ಗಮನ ಸೆಳೆಯುತ್ತದೆ. ಚಿತ್ರ ಕಲೆಯಲ್ಲೂ ಮಕ್ಕಳ ಕೈಚಳಕ ಮೂಡಿದೆ.

ಸರ್ವರ ಸಹಕಾರ

ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಅವರ ಆಸಕ್ತಿ ಹಾಗೂ ಮೇಲುಸ್ತುವಾರಿಯಲ್ಲಿ ಈ ಶಿಬಿರ ಆಯೋಜನೆಗೊಂಡಿದ್ದು, ತಾವೂ ಕೂಡ ಮಕ್ಕಳೊಂದಿಗೆ ಮಕ್ಕಳಂತೆ ತೊಡಗಿಸಿಕೊಂಡಿದ್ದಾರೆ. ಈ ಕಾರ್ಯಕ್ಕೆ ಗ್ರಾಮ ಪಂಚಾಯತ್, ಸಂಘ-ಸಂಸ್ಥೆಗಳು, ಸ್ತ್ರೀಶಕ್ತಿ, ಸ್ವಸಹಾಯ ಸಂಘಗಳು, ಊರಿನ ದಾನಿಗಳು ಕೈಜೋಡಿಸಿರುವದರಿಂದ ಶಿಬಿರ ಫಲಪ್ರದವಾದಂತಾಗಿದೆ. ಭಾಗವಹಿಸಿರುವ ಎಲ್ಲ ಮಕ್ಕಳಿಗೆ ಬೆಳಿಗ್ಗೆ ಹಾಲು-ಮೊಟ್ಟೆ, ಮಧ್ಯಾಹ್ನ ರುಚಿ-ಶುಚಿಯಾದ ಪೌಷ್ಟಿಕ ಆಹಾರ, ಹಣ್ಣು-ಹಂಪಲು, ಸಿಹಿತಿನಿಸುಗಳನ್ನು ಸರ್ವರ ನೆರವಿನಿಂದ ಒದಗಿಸಲಾಗುತ್ತಿದೆ. ತಾ. 29ರ ವರೆಗೆ ಈ ಶಿಬಿರ ನಡೆಯಲಿದ್ದು, ಅಂದು ಮುಕ್ತಾಯಗೊಳ್ಳಲಿದೆ. ಈ ರೀತಿಯ ಶಿಬಿರ ಏರ್ಪಡಿಸಿರುವದರಿಂದ ಪೋಷಕರಲ್ಲೂ ಹರ್ಷ ವ್ಯಕ್ತಗೊಂಡಿದ್ದು, ಪ್ರತಿನಿತ್ಯ ಮಕ್ಕಳ ಸಂಖ್ಯೆ ಜಾಸ್ತಿಯಾಗುತ್ತಲೇ ಇದೆ. ಸವಿತಾ ಅವರೊಂದಿಗೆ ಮಕ್ಕಂದೂರು ಅಂಗನವಾಡಿ ಕಾರ್ಯಕರ್ತೆಯರಾದ ದೇರಣ್ಣನ ಸರೋಜ, ಪ್ರೇಮ, ಮುಕ್ಕೋಡ್ಲುವಿನ ಧರ್ಮವತಿ, ಲಲಿತ, ಕರ್ಣಂಗೇರಿಯ ಜಯಂತಿ ಅವರುಗಳು ಎಲ್ಲ ರೀತಿಯ ಸಹಕಾರ ನೀಡುತ್ತಿದ್ದಾರೆ.

-ಕುಡೆಕಲ್ ಸಂತೋಷ್