ಮಡಿಕೇರಿ, ಏ. 27: ಮಡಿಕೇರಿಯ ಐತಿಹಾಸಿಕ ಕೋಟೆಯ ಸಂರಕ್ಷಣೆ ನಿಟ್ಟಿನಲ್ಲಿ ಭಾರತೀಯ ಪ್ರಾಚ್ಯವಸ್ತು ಸರ್ವೇಕ್ಷಣಾ ಸಚಿವಾಲಯದಿಂದ ಕ್ರಮ ಕೈಗೊಳ್ಳಲಾಗುತ್ತಿದೆ. ಈ ದಿಸೆಯಲ್ಲಿ ಕಳೆದೆರಡು ದಿನಗಳಿಂದ ಕೋಟೆಯ ಸರಹದ್ದು ಸರ್ವೆ (ಭೂಮಾಪನ) ನಡೆಯುತ್ತಿದೆ.ಇಲಾಖೆಯ ನಿಯಮದಂತೆ, ಕೇಂದ್ರ ಪ್ರಾಚ್ಯವಸ್ತು ಸಂರಕ್ಷಣಾಲಯಕ್ಕೆ ಸಂಬಂಧಪಟ್ಟಿರುವ ಈ ಕೋಟೆಯಿಂದ 200 ಮೀಟರ್ ವ್ಯಾಪ್ತಿಯೊಳಗೆ ಯಾವದೇ ಕಾಮಗಾರಿ ಕೈಗೊಳ್ಳುವಂತಿಲ್ಲ. ಆದರೆ ಈಗಾಗಲೇ ಅನೇಕರು ಖಾಸಗಿ ಮನೆಗಳ ನಿರ್ಮಾಣ, ನಗರಸಭಾ ಕಟ್ಟಡ, ಖಾಸಗಿ ಒಡೆತನದ ವಾಣಿಜ್ಯ ಸಂಕೀರ್ಣಗಳ ಕಾಮಗಾರಿ ಕೈಗೊಂಡಿದ್ದು, ಇಂತಹವರಿಗೆ ನೋಟೀಸ್ ಜಾರಿಗೊಳಿಸಲಾಗಿದೆ.

ಈ ನಡುವೆ ಕೋಟೆಯ ಪೂರ್ಣ ನಕಾಶೆ ಹಾಗೂ ಒಟ್ಟು ಆಸ್ತಿಯ ದಾಖಲೆಯೊಂದಿಗೆ ಸರಹದ್ದು ಗುರುತಿಸಲಾಗುತ್ತಿದೆ ಎಂದು ಸಂಬಂಧಪಟ್ಟ ಮೂಲಗಳು ಖಚಿತಪಡಿಸಿವೆ.

ಕೋಟೆಯ ಹಿನ್ನೆಲೆ

ವೀರ ಪರಂಪರೆಯ ನಾಡು ಈ ಸುಂದರ ಕೊಡಗು ರಾಜ ಪರಂಪರೆಯ ಆಳ್ವಿಕೆಗೆ ಒಳಪಟ್ಟಾಗ ಮುದ್ದುರಾಜನ ಕೇರಿ... ಮಡಿವಂತರ ಕೇರಿ... ಮಡಿಕೇರಿ ಎಂಬಿತ್ಯಾದಿ ಹೆಸರುಗಳೊಂದಿಗೆ ಕ್ಷೀರಪುರವೆಂದೂ ಕರೆಯಲಾಗುತ್ತಿದೆ.

ಹಾಲೇರಿ ವಂಶದ ಆಳ್ವಿಕೆಯಲ್ಲಿ ಮುದ್ದುರಾಜ ಕ್ರಿ.ಶ. 1681ರಲ್ಲಿ ತನ್ನ ಆಡಳಿತಕ್ಕೆ ಅನುಕೂಲ ಆಗುವಂತೆ ಕಟ್ಟಿದ್ದರಿಂದ ‘ಮಡಿಕೇರಿ ಕೋಟೆ' ಎಂಬ ಖ್ಯಾತಿ ಬಂದಿತು. ಬ್ರಿಟೀಷರ ಕಾಲದಲ್ಲಿ ‘ಮರ್ಕರ' ಎಂದಾಯಿತು. ಆ ಮುನ್ನ ಟಿಪ್ಪು ‘ಜಾಫರ್ ಬಾದ್' ಎಂದು ಕರೆದಿದ್ದ.

1790ರಲ್ಲಿ ದೊಡ್ಡ ವೀರಪ್ಪ ರಾಜೇಂದ್ರ ಈ ಕೋಟೆಯನ್ನು ಮರು ಸ್ವಾಧೀನಪಡಿಸಿಕೊಂಡಿದ್ದ. ಕ್ರಿ.ಶ. 1834ರಲ್ಲಿ ಬ್ರಿಟೀಷರು ಕೊಡಗಿನ ಮೇಲೆ ಹಿಡಿತ ಸಾಧಿಸಿ ರಾಜಪರಂರೆಯ ಆಳ್ವಿಕೆಯಲ್ಲಿ ಕೋಟೆ ಆವರಣದಲ್ಲಿದ್ದ ಶ್ರೀ ವೀರಭದ್ರ ಸ್ವಾಮಿ ದೇವಾಲಯವನ್ನು ಚರ್ಚ್ ಆಗಿ ಪರಿವರ್ತಿಸಿಬಿಟ್ಟರು. ಇಂದು ಅದೊಂದು ವಸ್ತು ಸಂಗ್ರಹಾಲಯ (ಮ್ಯೂಸಿಯಂ) ಆಗಿದೆ.

(ಮೊದಲ ಪುಟದಿಂದ) ವಿಶಾಲ ಆವರಣದೊಳಗೆ ಪೂರ್ವ ಬಾಗಿಲಿನ ಬಳಿಯೇ ಮಹಾಗಣಪತಿ ಸನ್ನಿಧಿಯಿದೆ. ಅದಕ್ಕೆ ಹೊಂದಿ ಕೊಂಡಂತೆ ಇತ್ತೀಚಿನ ವರ್ಷಗಳ ತನಕ ಕಾರಾಗೃಹ ಇತ್ತು. ಇಂದು ಅದು ಬಾಲಕಿಯರ ಬಾಲಮಂದಿರ ಆಗಿ ಮಾರ್ಪಟ್ಟಿದೆ.

ನಾಡಿನ ರೈತರ ಬೆನ್ನೆಲು ಬಾಗಿರುವ ಕೃಷಿ ಇಲಾಖೆ ಕಚೇರಿಯು ಇದೆ. ಒಂದು ರೀತಿಯಲ್ಲಿ ಷಟ್‍ಕೋಣಾಕೃತಿಯಿಂದ ಕೂಡಿರುವ ಆರು ವಿವಿಧ ಮೂಲೆಗಳಲ್ಲಿ ಈ ಕೋಟೆ ಕೊತ್ತಲಗಳನ್ನು ವೃತ್ತಾಕಾರದಲ್ಲಿ ನಿರ್ಮಿಸಲಾಗಿದೆ.

ಪೂರ್ವಾಭಿಮುಖ ದ್ವಾರವು ವಿಶಾಲ ಬಾಗಿಲುಗಳೊಂದಿಗೆ ಎಲ್ಲರನ್ನೂ ತನ್ನೆಡೆಗೆ ಆಕರ್ಷಿಸುತ್ತದೆ. ಈಶಾನ್ಯ ಭಾಗದಲ್ಲಿ ಎರಡು ಸಿಮೆಂಟಿನಿಂದ ನಿರ್ಮಿತ ಆಕರ್ಷಣೀಯ ಜೋಡಿ ಆನೆಗಳು ಸ್ವಾಗತಿಸುತ್ತವೆ. 1812ರಿಂದ 1814ರಲ್ಲಿ ಇಮ್ಮಡಿ ಲಿಂಗರಾಜ ಮರುಸ್ಥಾಪಿಸಿ ರುವ ಕೋಟೆ ಈಗ ರಾಜ್ಯ ಸರಕಾರದ ಅನೇಕ ಕಚೇರಿಗಳಿಂದ ಕೂಡಿದೆ.

ಇತ್ತೀಚಿನ ವರ್ಷಗಳಲ್ಲಿ ಈ ಕೋಟೆ ಅಸ್ತಿತ್ವ ಕಳೆದುಕೊಳ್ಳುತ್ತಿರುವ ಆತಂಕ ಮೂಡಿದೆ. ತÀನ್ನೊಡಲಿನ ಕಾರಾಗೃಹ, ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಒಂದೊಂದೇ ಸ್ಥಳಾಂತರಗೊಂಡು ಜೀವಂತಿಕೆಯ ಬದಲು ಅಸ್ಥಿಪಂಜರವಾಗುತ್ತಿದೆ ಎನಿಸುತ್ತಿದೆ!

ಕೋಟೆ ಆವರಣದ ನ್ಯಾಯಾಲಯ, ಜಿ.ಪಂ. ಆಡಳಿತ ವ್ಯವಸ್ಥೆ, ಲೋಕೋಪಯೋಗಿ ಕಚೇರಿಗಳು ಸ್ಥಾನ ಪಲ್ಲಟವಾದರೆ, ನೈಜವಾಗಿ ನೋಡುಗರಿಗೆ ಇದೊಂದು ಪಳೆಯುಳಿಕೆಯೇ ಸರಿ. ಅಂದವನ್ನು ಕಳೆದುಕೊಂಡು ಅರಮನೆಯ ಮೇಲ್ಚಾವಣಿ ಕಳಚಿಬೀಳತೊಡಗಿದೆ. ಆವರಣ ಸುತ್ತ ಗಿಡಗಂಟಿಗಳು ಕಾಡಾಗಿ ಪರಿವರ್ತನೆಗೊಳ್ಳುತ್ತಿವೆ. ಕೇಂದ್ರ ಪ್ರಾಚ್ಯವಸ್ತು ಇಲಾಖೆ ಹಕ್ಕುದಾರಿಕೆ ಹೊಂದಿದ್ದರೂ, ರಾಜ ಪರಂಪರೆ ಹೆಸರಿನಲ್ಲಿ ಮೈಸೂರಿನ ವ್ಯಕ್ತಿಯೊಬ್ಬರು ವಾರಸಿಕತೆಯ ವ್ಯಾಜ್ಯ ಹೂಡಿದ್ದಾರೆ.

ತನ್ನೊಳಗಿನ ಆಡಳಿತಾತ್ಮಕ ಕಚೇರಿಗಳ ಸಂಬಂಧ ಕಳೆದುಕೊಂಡರೆ ಈ ಕೋಟೆಯ ನಿರ್ವಹಣೆ ನೇರವಾಗಿ ಕೇಂದ್ರ ಪ್ರಾಚ್ಯವಸ್ತು ಇಲಾಖೆಗೆ ಒಳಪಡಲಿದೆ.

ಕೇಂದ್ರ ಪ್ರಾಚ್ಯವಸ್ತು ಇಲಾಖೆ ರೂ. 5 ಕೋಟಿಯ ಯೋಜನೆ ರೂಪಿಸಿ ಅಭಿವೃದ್ಧಿಪಡಿಸುವದಾಗಿ ಹೇಳುತ್ತಿದೆ. ಮಂಜಿನ ನಗರಿಯ ಮುಂದಲೆಯಂತೆ ಮಡಿಕೇರಿ ಕೋಟೆಯೆಂಬ ಹೆಮ್ಮೆ ಇದೆ. ಮುಂದಿನ ಪೀಳಿಗೆಗೆ ಈ ಅರಮನೆ ನಾಡಿನ ಇತಿಹಾಸಕ್ಕೆ ಸಾಕ್ಷಿಯಾಗ ಬೇಕಿದೆ. ಹಾಗೊಂದು ವೇಳೆ ಉಳಿಯಬೇಕಿದ್ದರೆ ಇತಿಹಾಸದ ಪುಟ ಸೇರುವ ಮುನ್ನ ರಾಜ ಪರಂಪರೆಯ ಈ ಕೋಟೆಗೆ ಕಾಯಕಲ್ಪ ಅಗತ್ಯ. ಆ ನಿಟ್ಟಿನಲ್ಲಿ ಕೇಂದ್ರ ಪ್ರಾಚ್ಯ ವಸ್ತು ಸರ್ವೇಕ್ಷಣಾ ಇಲಾಖೆ ಕಾರ್ಯೋ ನ್ಮುಖವಾಗಲೆಂದು ಆಶಿಸೋಣ.

-ಚಿತ್ರ- ವರದಿ : ಪವನ್ ಸಿ.ಎಸ್.