ಮಡಿಕೇರಿ, ಏ.28 : ಸಂಪಿಗೆಕಟ್ಟೆ ಬಡಾವಣೆಯಲ್ಲಿ ಮೂಡಾದ ಮಾಜಿ ಅಧ್ಯಕ್ಷರಾದ ಸುರಯ್ಯ ಅಬ್ರಾರ್ ಸ್ವಾಧೀನದಲ್ಲಿರುವ ಜಾಗವನ್ನು ಸರ್ವೆ ನಡೆಸಿರುವ ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿಯದೆ ವರದಿಯನ್ನು ಬಹಿರಂಗ ಪಡಿಸಬೇಕೆಂದು ಸಾರ್ವಜನಿಕ ಹಿತರಕ್ಷಣಾ ಸಮಿತಿ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಪ್ರಸನ್ನಭಟ್ ಜಲಮೂಲ ‘ಕಡಂಗ’ದ ಕುರಿತು ಪೂರ್ಣಮಾಹಿತಿಯನ್ನು ಮೇ 3 ರ ಒಳಗಾಗಿ ನೀಡದಿದ್ದಲ್ಲಿ ಮೇ 4 ರಂದು ಸರ್ವೆ ಇಲಾಖಾ (ಎಡಿಎಲ್ಆರ್) ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಸುರಯ್ಯ ಅಬ್ರಾರ್ ಅವರು ಕಡಂಗದ ಜಾಗವನ್ನು ಒತ್ತುವರಿ ಮಾಡಿದ್ದಾರೆ ಎಂದು ಆರೋಪಿಸಿದ ಅವರು, ಅಧಿಕಾರಿಗಳು ರಾಜಕೀಯ ಷಡ್ಯಂತ್ರಕ್ಕೆ ಮಣಿದು ವರದಿಯನ್ನು ಬಹಿರಂಗ ಪಡಿಸದೆ ತಾಂತ್ರಿಕ ಕಾರಣಗಳನ್ನು ನೀಡುತ್ತಿದ್ದಾರೆ ಎಂದು ಟೀಕಿಸಿದರು.
ಈ ಪ್ರದೇಶದಲ್ಲಿ 51 ಸೆಂಟ್ ಜಾಗವನ್ನು ಖರೀದಿಸಿದ ನಂತರ ಕಡಂಗ ಇಲ್ಲವೆಂದು ಸುರಯ್ಯ ಅಬ್ರಾರ್ ವಾದಿಸುತ್ತಿರುವದು ಎಷ್ಟು ಸರಿ ಎಂದು ಪ್ರಶ್ನಿಸಿದ ಪ್ರಸನ್ನಭಟ್, ಕಳೆದ ಸಾಲಿನಲ್ಲಿ ಕಡಂಗ ಜಾಗವನ್ನು ಗುರುತಿಸಿದ್ದ ಸರ್ವೆ ಇಲಾಖೆ, ಇದೀಗ ಅದೇ ಕಡಂಗವನ್ನು ಮತ್ತೆ ಗುರುತಿಸಲು ಹಿಂದೇಟು ಹಾಕುತ್ತಿರುವುದರ ಹಿಂದೆ ರಾಜಕೀಯ ಷಡ್ಯಂತ್ರ ಅಡಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಗರಸಭೆಯ ಎಸ್ಡಿಪಿಐ ಸದಸ್ಯರಾದ ಅಮಿನ್ ಮೊಹಿಸಿನ್ ಹಾಗೂ ಕಾಂಗ್ರೆಸ್ನ ನಾಮ ನಿರ್ದೇಶಿತ ಸದಸ್ಯರು ಸುರಯ್ಯ ಅಬ್ರಾರ್ ಪರ ಹೇಳಿಕೆಯನ್ನು ಟೀಕಿಸಿದ ಪ್ರಸನ್ನಭಟ್ ಮೊದಲು ಸ್ಥಳ ಪರಿಶೀಲನೆ ನಡೆಸಿ ಜಲಮೂಲವಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಲಿ ಎಂದರು.
ಇತರ ಸದಸ್ಯರನ್ನು ಟೀಕಿಸುವ ಮೊದಲು ತಮ್ಮ ತಮ್ಮ ವಾರ್ಡ್ನಲ್ಲಿ ಜಲಮೂಲಕ್ಕೆ ಮಣ್ಣು ಹಾಕುತ್ತಿರುವದನ್ನು ತಡೆಯಲಿ ಎಂದರು.
ಮೇ 4 ರಂದು ಸಾರ್ವಜನಿರು ಹಾಗೂ ವಿವಿಧ ಸಂಘ ಸಂಸ್ಥೆಗಳ ಬೆಂಬಲದೊಂದಿಗೆ ಸರ್ವೆ ಇಲಾಖೆಗೆ ಮುತ್ತಿಗೆ ಹಾಕುವದಾಗಿ ಎಚ್ಚರಿಕೆ ನೀಡಿದರು. ಜಲಮೂಲಗಳ ಸಂರಕ್ಷಣೆಗೆ ನಗರಸಭೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ನಗರಾಧ್ಯಕ್ಷ ಟಿ.ಹೆಚ್. ಸುಧೀಶ್, ಪಿ.ಎನ್.ಪ್ರಮೋದ್ ಹಾಗೂ ಕವನ್ ಉಪಸ್ಥಿತರಿದ್ದರು.