ಕುಶಾಲನಗರ, ಏ 28: ಕುಶಾಲನಗರ ಪಟ್ಟಣ ಪಂಚಾಯಿತಿ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಮುಂದಿನ ತಿಂಗಳಿನಿಂದ ಚಾಲನೆಗೊಳ್ಳಲಿದೆ. ಅಂದಾಜು ರೂ. 15 ಕೋಟಿ ವೆಚ್ಚದಲ್ಲಿ ಬೃಹತ್ ವಾಣಿಜ್ಯ ಸಂಕೀರ್ಣದೊಂದಿಗೆ ಅತ್ಯಾಕರ್ಷಕ ಕಟ್ಟಡ ನಿರ್ಮಾಣ ವಾಗಲಿದೆ. 3 ಅಂತಸ್ತಿನ ಕಟ್ಟಡ ದೊಂದಿಗೆ ಪಟ್ಟಣದ ಹೃದಯ ಭಾಗದಲ್ಲಿ ತಲೆಎತ್ತಲಿರುವ ಈ ಕಟ್ಟಡದ ನೆಲಮಹಡಿಯಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ, ಪ್ರಥಮ ಹಾಗೂ ಎರಡನೇ ಅಂತಸ್ತಿನಲ್ಲಿ ಅಂದಾಜು 200 ವಾಣಿಜ್ಯ ಮಳಿಗೆಗಳು ನಿರ್ಮಾಣ ವಾಗಲಿದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್ ಮಾಹಿತಿ ನೀಡಿದರು.

ಅಂದಾಜು 100 ವರ್ಷ ಇತಿಹಾಸ ಹೊಂದಿರುವ ಕುಶಾಲನಗರ ಪಂಚಾಯಿತಿಯ ಹಳೆಯ ಕಟ್ಟಡಗಳನ್ನು ತೆರವುಗೊಳಿಸಲು ಈಗಾಗಲೇ ಸರಕಾರದಿಂದ ಅನುಮತಿ ದೊರೆತಿದೆ. ಪಟ್ಟಣ ಪಂಚಾಯಿತಿಯ ಅಂದಾಜು 1.5 ಎಕರೆ ವ್ಯಾಪ್ತಿಯ ಸ್ಥಳದಲ್ಲಿರುವ ಪಂಚಾಯಿತಿ 21 ಮಳಿಗೆಗಳನ್ನು ಖಾಲಿ ಮಾಡಿಸಲು ಪ್ರಕಟಣೆ ಹೊರಡಿಸಲಾಗಿದೆ. ಈ ಅವಧಿಯಲ್ಲಿ ಪಟ್ಟಣ ಪಂಚಾಯಿತಿ ಕಚೇರಿಯನ್ನು ಬೈಪಾಸ್ ರಸ್ತೆಯಲ್ಲಿರುವ ಎಪಿಸಿಎಂಎಸ್ ಸಭಾಂಗಣಕ್ಕೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ ಎಂದು ಕಚೇರಿ ಮೂಲಗಳು ತಿಳಿಸಿವೆ.

ನೂತನ ಕಟ್ಟಡ ನಿರ್ಮಾಣಕ್ಕೆ ರೂ. 5 ಕೋಟಿ ಸಾಲ ಪಡೆಯುವದು, ಉಳಿದಂತೆ ರೂ. 10 ಕೋಟಿ ಪಂಚಾಯಿತಿಯ ವಿವಿಧ ಮೂಲಗಳ ಆದಾಯವನ್ನು ಬಳಸಿಕೊಳ್ಳ ಲಾಗುವದು ಎಂದು ತಿಳಿಸಿರುವ ಎ.ಎಂ. ಶ್ರೀಧರ್, 1 ವರ್ಷದ ಅವಧಿಯೊಳಗೆ ನೂತನ ಕಟ್ಟಡ ನಿರ್ಮಾಣ ಪೂರ್ಣಗೊಳ್ಳಲಿದೆ. 1ನೇ ಮಹಡಿಯಲ್ಲಿ ಪಂಚಾಯಿತಿ ಕಚೇರಿ, ಅಧ್ಯಕ್ಷ, ಉಪಾಧ್ಯಕ್ಷರ ಕೊಠಡಿಗಳು ಹಾಗೂ ಸಭಾಂಗಣ ನಿರ್ಮಾಣ ವಾಗಲಿದೆ ಎಂದಿದ್ದಾರೆ. ಪಂಚಾಯಿತಿ ಕಟ್ಟಡಗಳಲ್ಲಿ ಸಾರ್ವಜನಿಕ ಗ್ರಂಥಾಲಯ, ಕಾರ್ಯನಿರತ ಪತ್ರಕರ್ತರ ಸಂಘ, ಮಿನಿ ಲಾರಿ ಚಾಲಕರು ಮಾಲೀಕರ ಸಂಘ ಸೇರಿದಂತೆ ಕಾರು ನಿಲ್ದಾಣ ಹಾಗೂ ಹಲವು ಅಂಗಡಿ ಮಳಿಗೆಗಳು ಕಾರ್ಯನಿರ್ವಹಿಸುತ್ತಿವೆ. ಈ ಎಲ್ಲಾ ಕಚೇರಿಗಳು ಮತ್ತು ಮಳಿಗೆಗಳನ್ನು 30 ದಿನಗಳ ಒಳಗಾಗಿ ತೆರವುಗೊಳಿಸುವಂತೆ ಪಂಚಾಯಿತಿ ಆಡಳಿತ ಪ್ರಕಟಣೆ ಹೊರಡಿಸಿದೆ.

ಈ ಕಟ್ಟಡ ಪೂರ್ಣಗೊಂಡ ಬೆನ್ನಲ್ಲೇ ಕುಶಾಲನಗರದ ವಾಹನ ನಿಲುಗಡೆ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ ಎಂಬ ಆಶಯ ವ್ಯಕ್ತಪಡಿಸಿರುವ ಶ್ರೀಧರ್, ಪ್ರಸಕ್ತ ಇರುವ ಬಾಡಿಗೆದಾರರೊಂದಿಗೆ ಯಾವದೇ ರೀತಿಯ ಒಪ್ಪಂದ ಮುಂದುವರೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹಳೆಯ ಕಟ್ಟಡದಲ್ಲಿ ಬಾಡಿಗೆಯಲ್ಲಿರುವ ಬಹುತೇಕ ಮಂದಿ ಬಾಕಿ ಬಾಡಿಗೆ ನೀಡಿದ್ದು ಕೆಲವರು ಇನ್ನೂ ಬಾಕಿ ಉಳಿಸಿಕೊಂಡಿರುವದಾಗಿ ಮಾಹಿತಿ ಒದಗಿಸಿದರು.

ಸುಬೇದಾರ್ ಆಡಳಿತ ವ್ಯವಸ್ಥೆಯಿಂದ ಮುಂದುವರೆದ ಕುಶಾಲನಗರ ಪಂಚಾಯಿತಿ ಆಡಳಿತ ದಲ್ಲಿ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ದಿ. ಆರ್. ಗುಂಡೂರಾವ್ ಪಂಚಾಯಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವದನ್ನು ಇಲ್ಲಿ ಸ್ಮರಿಸಬಹುದು.