ಮೂರ್ನಾಡು, ಏ. 28: : ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಲೇಮಾಡು ಪೈಸಾರಿ ನಿವಾಸಿಗಳ ಅಹೋರಾತ್ರಿ ಪ್ರತಿಭಟನೆ ಆರನೇ ದಿನಕ್ಕೆ ಕಾಲಿಟ್ಟಿದೆ.

ಪಾಲೇಮಾಡುವಿನಲ್ಲಿ ಬಹುಜನ ಕಾರ್ಮಿಕ ಸಂಘದ ವತಿಯಿಂದ ಆಚರಿಸಲಾದ ಅಂಬೇಡ್ಕರ್ ಜಯಂತಿಗೆ ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ಅನುಮತಿ ಪಡೆಯದೆ ಅಳವಡಿಸಲಾದ ಬ್ಯಾನರ್ ಹಾಗೂ ರಸ್ತೆಗಳ ನಾಮಫಲಕಗಳನ್ನು ಕಳೆದ ಶನಿವಾರ ತೆರವುಗೊಳಿಸಲಾಯಿತು. ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆ ನಿವಾಸಿಗಳ ಮೇಲೆ ಲಾಠಿ ಪ್ರಹಾರ ಮಾಡಿ ದೌರ್ಜನ್ಯ ಎಸಗಿದೆ ಹಾಗೂ ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಅಹೋರಾತ್ರಿ ಪ್ರತಿಭಟನೆಯಲ್ಲಿ ತೊಡಗಿದ್ದಾರೆ.

ನಗರದ ಅಂಗನವಾಡಿ ಬಳಿ ಪ್ಲಾಸ್ಟಿಕ್ ಹೊದಿಕೆ ನಿರ್ಮಿಸಿಕೊಂಡು ಮಹಿಳೆಯರು, ಪುರುಷರು, ಸಣ್ಣ ಮಕ್ಕಳು ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಬೆಳಗ್ಗಿನ ತಿಂಡಿ, ಮಧ್ಯಾಹ್ನ ಗಂಜಿ ಹಾಗೂ ರಾತ್ರಿ ಊಟದ ವ್ಯವಸ್ಥೆಯನ್ನು ಸ್ಥಳದಲ್ಲೆ ಬಳಿ ತಯಾರಿಸಿಕೊಂಡು ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ. ಮೇ2 ಮತ್ತು 3ರಂದು ವಿವಿಧ ಸಂಘಟನೆಗಳೊಂದಿಗೆ ಪಾಲೇಮಾಡುವಿನಿಂದ ಮಡಿಕೇರಿವರೆಗೆ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿದೆ. ಅಲ್ಲಿಯವರೆಗೆ ಸ್ಥಳ ಬಿಟ್ಟು ಕದಲುವದಿಲ್ಲ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.