ಮಡಿಕೇರಿ, ಏ. 28: ಹಾಕಿ ಇಂಡಿಯಾದಿಂದ ಅಧಿಕೃತ ಮಾನ್ಯತೆ ಪಡೆಯುವ ಮೂಲಕ ಕಳೆದ ವರ್ಷದಿಂದ ರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಪ್ರತ್ಯೇಕವಾದ ಕೊಡಗು ತಂಡವಾಗಿ ಆಡುವ ಅವಕಾಶ ಪಡೆದಿರುವ ಹಾಕಿ ಕೂರ್ಗ್ ಗಮನಾರ್ಹ ಸಾಧನೆ ಮಾಡುತ್ತಿದೆ. ರಾಷ್ಟ್ರೀಯ ಮಟ್ಟದ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಮಾನ್ಯತೆ ದೊರೆತ ಬಳಿಕ 2016ರಿಂದ ಹಂತದ ಪಂದ್ಯಾವಳಿ ಗಳಲ್ಲಿ ಪಾಲ್ಗೊಳ್ಳುತ್ತಿದೆ.ಕಳೆದ ವರ್ಷ ಹಾಕಿ ಕೂರ್ಗ್‍ನ ಪುರುಷರ ಹಾಗೂ ಮಹಿಳಾ ಸೀನಿಯರ್ ತಂಡ, ಜೂನಿಯರ್ ತಂಡ ರಾಷ್ಟ್ರೀಯ ಪಂದ್ಯಾವಳಿ (ಬಿ ಡಿವಿಜನ್)ನಲ್ಲಿ ಪಾಲ್ಗೊಂಡಿದ್ದು, ಮೊದಲ ವರ್ಷವೇ ಗಮನ ಸೆಳೆದಿತ್ತು. ಅಲ್ಲದೆ ಜೂನಿಯರ್ ಮಹಿಳಾ ತಂಡ ಕಂಚಿನ ಪದಕದ ಸಾಧನೆಯನ್ನು ಮಾಡಿತ್ತು.

2017ರಲ್ಲೂ ತಂಡದ ಸಾಧನೆ ಮೆಚ್ಚುಗೆಗೆ ಪಾತ್ರವಾಗಿದೆ. ತಮಿಳುನಾಡು ವಿನ ರಾಮನಾಥಪುರದಲ್ಲಿ ಕಳೆದ ತಿಂಗಳು ನಡೆದ ಸಬ್ ಜೂನಿಯರ್ ಪಂದ್ಯಾವಳಿಯಲ್ಲಿ ಬಾಲಕಿಯರ ತಂಡ ಈಗಾಗಲೇ ಕಂಚಿನ ಪದಕ ಪಡೆದುಕೊಂಡಿದೆ. ಹರಿಯಾಣದ ರೋಥಕ್‍ನಲ್ಲಿ ನಡೆದ ರಾಷ್ಟ್ರೀಯ ಸೀನಿಯರ್ ಮಹಿಳಾ ಪಂದ್ಯಾವಳಿ ಯಲ್ಲಿ ಮೂರನೇ ಸ್ಥಾನದೊಂದಿಗೆ ಹಾಕಿ ಕೂರ್ಗ್ ತಂಡ ಈ ಬಾರಿ ಕಂಚಿನ ಪದಕದ ಸಾಧನೆ ಮಾಡಿದೆ.

ಕಳ್ಳಿಚಂಡ ಟೀನಾ ನಾಯಕತ್ವದ ತಂಡ ಈ ಸಾಧನೆ ತೋರಿದೆ. ತಂಡದ ಕೋಚ್ ಆಗಿ ಕೋಣೇರಿರ ಮಧು ಹಾಗೂ ವ್ಯವಸ್ಥಾಪಕರಾಗಿ ಪೂರ್ಣಿಮಾ ಕಾರ್ಯನಿರ್ವಹಿಸಿದ್ದರು. ಹಾಕಿ ಕೂರ್ಗ್‍ನ ಪ್ರಯತ್ನಕ್ಕೆ ಕೊಡಗು ಜಿಲ್ಲಾ ಪಂಚಾಯತ್ ಹಾಗೂ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯಿಂದ ಸಹಕಾರ ದೊರೆತಿರುವ ಬಗ್ಗೆ ಹಾಕಿ ಕೂರ್ಗ್‍ನ ಪದಾಧಿಕಾರಿ ಬುಟ್ಟಿಯಂಡ ಚಂಗಪ್ಪ ಹರ್ಷ ವ್ಯಕ್ತಪಡಿಸಿದ್ದಾರೆ. ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ಈಗಾಗಲೇ 100ಕ್ಕೂ ಅಧಿಕ ಮಂದಿಗೆ ಹಾಕಿ ತರಬೇತಿ ನೀಡಲಾಗಿದ್ದು, ಇದು ಪ್ರಯೋಜನಕಾರಿಯಾಗುತ್ತಿದೆ ಎಂದ ಅವರು ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಶಶಿ ಸುಬ್ರಮಣಿ ಹಾಗೂ ಯುವಜನ ಸೇವಾ ಇಲಾಖೆಯ ಅಧಿಕಾರಿ ಜಯಲಕ್ಷ್ಮಿಬಾಯಿ ಅವರ ಸಹಕಾರವನ್ನೂ ಸ್ಮರಿಸಿದರು.

ಬಾಲಕರ ಸಾಧನೆ : ಬೆಂಗಳೂರಿನಲ್ಲಿ ಇದೀಗ ನಡೆಯುತ್ತಿರುವ ಸಬ್‍ಜೂನಿಯರ್ ಬಾಲಕರ 16 ವರ್ಷದೊಳಗಿನ ರಾಷ್ಟ್ರೀಯ ಪಂದ್ಯಾಟದಲ್ಲಿ ಹಾಕಿ ಕೂರ್ಗ್ ಬಾಲಕರ ತಂಡವೂ ಗಮನಾರ್ಹ ಸಾಧನೆ ತೋರುತ್ತಿದೆ. ಈ ತನಕ ಮೂರು ಪಂದ್ಯಗಳಲ್ಲಿ ಹಾಕಿ ಕೂರ್ಗ್ ಭರ್ಜರಿ ಜಯಗಳಿಸಿದ್ದು, ಗುಂಪಿನಲ್ಲಿ ಅಗ್ರ ಸ್ಥಾನದಲ್ಲಿದೆ. ಆರಂಭಿಕ ಪಂದ್ಯದಲ್ಲಿ ವಿದರ್ಭ ವಿರುದ್ಧ 13-0, ಡೆಲ್ಲಿ ವಿರುದ್ಧ 5-0 ಹಾಗೂ ತೆಲಂಗಾಣ ವಿರುದ್ಧ 9-0 ಅಂತರದ ಗೆಲವು ಸಾಧಿಸಿರುವ ತಂಡ ತಾ. 28ರಂದು ಹಿಮಾಚಲ ಪ್ರದೇಶ ವಿರುದ್ಧ 4-0 ಗೋಲಿನಿಂದ ಜಯಗಳಿಸಿದ್ದು, ಪದಕದ ನಿರೀಕ್ಷೆಯಲ್ಲಿದೆ.

ತಂಡದ ನಾಯಕನಾಗಿ ಕೂಡಿಗೆ ಕ್ರೀಡಾ ಶಾಲೆಯ ಮೊಂಡಲ್ ಹಾಗೂ ಉಪನಾಯಕನಾಗಿ ಅಪ್ಪಂಡೇರಂಡ ವಿನೇಶ್ ಪೂವಯ್ಯ ಆಡುತ್ತಿದ್ದು, ತರಬೇತುದಾರರಾಗಿ ಮೂಕಚಂಡ ನಾಚಪ್ಪ ಹಾಗೂ ವ್ಯವಸ್ಥಾಪಕರಾಗಿ ಮಿನ್ನಂಡ ಜೋಯಪ್ಪ ಕಾರ್ಯನಿರ್ವ ಹಿಸುತ್ತಿದ್ದಾರೆ. -ಶಶಿ ಸೋಮಯ್ಯ