ಕುಶಾಲನಗರ, ಏ. 28: ಕುಶಾಲನಗರದ ಉದ್ಯಮಿಗಳ ಮೇಲೆ ನಡೆದ ಐಟಿ ದಾಳಿ 3ನೇ ದಿನಕ್ಕೆ ಮುಂದುವರೆದು ವಿವಿದೇಡೆ ಕಾರ್ಯಾಚರಣೆಯಲ್ಲಿ ತೊಡಗಿದ್ದ ಅಧಿಕಾರಿಗಳ ತಂಡ ಶುಕ್ರವಾರ ಸಂಜೆ ವೇಳೆಗೆ ಕುಶಾಲನಗರದಿಂದ ನಿರ್ಗಮಿಸಿದೆ.

ತಾ. 26ರಂದು ಸಿನಿಮೀಯ ರೀತಿಯಲ್ಲಿ ಜಿಲ್ಲೆಗೆ ಆಗಮಿಸಿದ ರಾಜ್ಯ, ನೆರೆ ರಾಜ್ಯಗಳ 60 ಕ್ಕೂ ಅಧಿಕ ಐಟಿ ಅಧಿಕಾರಿಗಳ ತಂಡ ಹಲವೆಡೆ ಏಕಕಾಲದಲ್ಲಿ ಧಾಳಿ ನಡೆಸುವದರೊಂದಿಗೆ ಸುದೀರ್ಘವಾಗಿ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿತ್ತು.

ಎಸ್‍ಎಲ್‍ಎನ್ ಸಮೂಹ ಸಂಸ್ಥೆಗಳ ಮಾಲೀಕರಾದ ವಿಶ್ವನಾಥನ್ ಮತ್ತು ಸಾತಪ್ಪನ್ ಸಹೋದರರ ನಿವಾಸ ಸೇರಿದಂತೆ ಜಿಲ್ಲೆಯ 15 ಕಡೆಗಳಲ್ಲಿ ತನಿಖಾ ತಂಡ ಸುಮಾರು 60 ಗಂಟೆಗಳ ಕಾಲ ಸತತವಾಗಿ ದಾಖಲೆಗಳನ್ನು ಪರಿಶೀಲನೆ ನಡೆಸುವದರೊಂದಿಗೆ ಉದ್ಯಮಿಗಳು ಹಾಗೂ ಸಂಬಂಧಿಸಿದ ಕಛೇರಿಗಳ ನೌಕರರೊಂದಿಗೆ ಮಾಹಿತಿ ಕಲೆ ಹಾಕಿದರು. ಆದರೆ ಯಾವದೇ ಅಧಿಕಾರಿಗಳು ತನಿಖೆಯ ಬಗ್ಗೆ ಮಾಹಿತಿಯನ್ನು ಬಹಿರಂಗಗೊಳಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ನಿಖರ ವಿವರ ಲಭ್ಯವಾಗಿಲ್ಲ. ಆದರೆ 3 ದಿನಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಐಟಿ ಇಲಾಖೆಯ ಅಧಿಕಾರಿಗಳಿಗೆ ಸಾಕಷ್ಟು ಪ್ರಮಾಣದ ದಾಖಲೆಗಳು ಲಭ್ಯವಾಗಿದೆ ಎನ್ನುವದು ಖಚಿತವಾಗಿವೆ.

ಕುಶಾಲನಗರದಲ್ಲಿ 3 ದಿನಗಳ ಕಾಲ ನಡೆದ ಸಿನಿಮೀಯ ರೀತಿಯ ಐಟಿ ಧಾಳಿ ಇಡೀ ಜಿಲ್ಲೆ ಸೇರಿದಂತೆ ರಾಷ್ಟ್ರದಾದ್ಯಂತ ಸುದ್ದಿಯಾಗಿದ್ದು ಈ ಪೂರ್ವಾಪರ ತಿಳಿಯುವಲ್ಲಿ ಜನತೆ ಕಾತರದಿಂದಿರುವದು ಕಂಡುಬಂದಿದೆ.