ಮಡಿಕೇರಿ, ಏ. 28: ಕಡಗದಾಳು ಶ್ರೀ ಬೊಟ್ಲಪ್ಪ ಯುವ ಸಂಘದ ಬೆಳ್ಳಿ ಮಹೋತ್ಸವದ ಅಂಗವಾಗಿ ಉಚಿತ ದಂತ ತಪಾಸಣಾ ಶಿಬಿರ ಮತ್ತು ವಿದ್ಯಾರ್ಥಿಗಳಿಗಾಗಿ ಮಾರ್ಗದರ್ಶನ ಕಾರ್ಯಕ್ರಮವನ್ನು ಕಡಗದಾಳು ಗ್ರಾ.ಪಂ., ವೀರಾಜಪೇಟೆ ಕೊಡಗು ದಂತ ವಿದ್ಯಾಲಯ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದೊಂದಿಗೆ ಕಡಗದಾಳು ಸಂಯುಕ್ತ ಪ್ರೌಢಶಾಲಾ ಆವರಣದಲ್ಲಿ ಆಯೋಜಿಸಲಾಗಿತ್ತು.
ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮೋಹನ್ ಪ್ರಭು ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ದೇಶದ ದೊಡ್ಡ ಗ್ರಂಥ ಸಂವಿಧಾನ. ಸಂವಿಧಾನವು ಪ್ರತಿಯೊಬ್ಬರಿಗೂ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳನ್ನು ನೀಡಿದೆ. ಅದು ಯಥಾವತ್ತಾಗಿ ಪರಿಪಾಲನೆಯಾದರೆ ದೇಶದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ಅತಿಥಿಗಳಾಗಿ ಭಾಗವಹಿಸಿದ ಉದ್ಯೋಗ ವಿನಿಮಯಾಧಿಕಾರಿ ಸಿ. ಜಗನ್ನಾಥ್ ಮಾತನಾಡಿ, ಎಳೆಯ ಮಕ್ಕಳಿಂದಲೇ ಮಾರ್ಗದರ್ಶನ ಅಗತ್ಯ. ಮಕ್ಕಳೇ ಮುಂದಿನ ಭವಿಷ್ಯದ ರೂವಾರಿಗಳು. ವಿದ್ಯಾಭ್ಯಾಸದ ಬಳಿಕ ಮುಂದೇನು ಎಂಬ ಚಿಂತೆಯಲ್ಲಿರುವ ಮಕ್ಕಳಿಗೆ ಇಂತಹ ಮಾರ್ಗದರ್ಶಿ ಶಿಕ್ಷಣ ಅತ್ಯವಶ್ಯಕವೆಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ವೀರಾಜಪೇಟೆಯ ಕೊಡಗು ದಂತ ವಿದ್ಯಾಲಯದ ಡಾ. ಜೆನಿ, ಗ್ರಾ.ಪಂ. ಉಪಾಧ್ಯಕ್ಷ ಮಾದೇಟಿರ ತಿಮ್ಮಯ್ಯ, ಸದಸ್ಯೆ ಓಮನ, ಜುಮ್ಮಾ ಮಸೀದಿಯ ಅಧ್ಯಕ್ಷ ಸೈಯದ್, ಟಿ.ಆರ್. ವಾಸುದೇವ್, ಎಂ.ಎಸ್. ಯೂಸೂಫ್ ಹಾಗೂ ಇನ್ನಿತರರು ಇದ್ದರು. ಸಂಘದ ಅಧ್ಯಕ್ಷ ಕೆ. ಬಾಲನ್ ಅಧ್ಯಕ್ಷತೆ ವಹಿಸಿದ್ದರು.
ಪ್ರತೀಕ್ಷ, ಜಸ್ಮಿತಾ, ಕಾವೇರಿ ಪ್ರಾರ್ಥಿಸಿ, ಕೆ.ಎನ್. ಅವಿನಾಶ್ ಸ್ವಾಗತಿಸಿ, ಬಿ.ಎಸ್. ಜಯಪ್ಪ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.