ಮಡಿಕೇರಿ, ಏ.28 : ವಾಂಡರರ್ಸ್ ಸ್ಪೋಟ್ರ್ಸ್ ಕ್ಲಬ್ ಹಾಗೂ ಮ್ಯಾನ್ಸ್ ಹಾಕಿ ಅಕಾಡೆಮಿಯ ಜಂಟಿ ಆಶ್ರಯದಲ್ಲಿ 23ನೇ ವರ್ಷದ ಬೇಸಿಗೆ ಕ್ರೀಡಾ ತರಬೇತಿ ಶಿಬಿರದ ಅಂಗವಾಗಿ ಶುಕ್ರವಾರ ಸಾಯಿ ಟರ್ಫ್ ಹಾಕಿ ಮೈದಾನದಲ್ಲಿ ಪ್ರೌಢಶಾಲಾ ಬಾಲಕರಿಗಾಗಿ ನಡೆದ ಬಿ.ಕೆ. ಸುಬ್ಬಯ್ಯ ಟ್ರೋಫಿ ಹಾಕಿ ಪಂದ್ಯಾಟದಲ್ಲಿ ಕುಶಾಲನಗರ ಸ್ಪೋಟ್ರ್ಸ್ ಕ್ಲಬ್ ಪ್ರಥಮ ಹಾಗೂ ಮೂರ್ನಾಡು ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ.
ಪ್ರೌಢಶಾಲಾ ಬಾಲಕಿಯರಿಗಾಗಿ ನಡೆದ ದಿ.ಶಂಕರ್ ಟ್ರೋಫಿ ಹಾಕಿ ಪಂದ್ಯಾಟದಲ್ಲಿ ಕುಶಾಲನಗರ ಸ್ಪೋಟ್ರ್ಸ್ ಕ್ಲಬ್ ಗೆಲುವು ಸಾಧಿಸಿದ್ದು, ವಾಂಡರರ್ಸ್ ಸ್ಪೋಟ್ರ್ಸ್ ಕ್ಲಬ್ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿವೆ.
ಹಿರಿಯರಾದ ಕೋಟೇರ ಮುದ್ದಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಮೊಹಮ್ಮದ್ ಆಸಿಫ್ ಉದ್ಘಾಟಿಸಿದರು. ವಾಂಡರರ್ಸ್ ಸ್ಪೋಟ್ರ್ಸ್ ಕ್ಲಬ್‍ನ ಪ್ರಮುಖರಾದ ಬಾಬು ಸೋಮಯ್ಯ ಅವರ ಸಂಘಟನೆಯಲ್ಲಿ ನಡೆದ ಕ್ರೀಡಾಕೂಟದ ಸಂದರ್ಭ ಯೋಗ ಶಿಕ್ಷಕ ವೆಂಕಟೇಶ್ ಉಪಸ್ಥಿತರಿದ್ದರು.
ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ಬೇಸಿಗೆ ಕ್ರೀಡಾ ಶಿಬಿರ ಮೇ 1 ರಂದು ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಗ್ಗೆ 7.30 ಗಂಟೆಗೆ ಸಮಾರೋಪಗೊಳ್ಳಲಿದ್ದು, ಹಾಕಿ ಕೊಡಗು ಸಂಸ್ಥೆಯ ಪ್ರಮುಖ ಪಾರ್ಥ ಚಂಗಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಿರಿಯರಾದ ಶ್ಯಾಂ ಪೂಣಚ್ಚ ಹಾಗೂ ಮೂಡಾ ಅಧ್ಯಕ್ಷ ಎ.ಸಿ. ಚುಮ್ಮಿದೇವಯ್ಯ ಪಾಲ್ಗೊಳ್ಳಲಿದ್ದಾರೆ.